ಇತ್ತೀಚಿನ ಸುದ್ದಿ
BNG ZP | ದುರ್ವ್ಯಸನಗಳ ದಾಸರಾಗಬೇಡಿ: ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಸಿಇಒ
02/03/2025, 10:11

ಬೆಂಗಳೂರು(reporterkarnataka.com): ಯುವ ಸಮುದಾಯವು ಸಾಮಾಜಿಕ ಪಿಡುಗುಗಳು ಹಾಗೂ ದುರ್ವ್ಯಸನಗಳಿಗೆ ಬಲಿಯಾಗದೆ ರಚನಾತ್ಮಕ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಸ್ ಲತಾಕುಮಾರಿ ಅವರು ಕರೆ ಕೊಟ್ಟರು.
ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ “ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನದಿಂದ ಆಗುವ ದುಪ್ಪರಿಣಾಮ”ಗಳ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನಗಳ ದುಷ್ಪರಿಣಾಮಗಳಿಂದ ವಿದ್ಯಾರ್ಥಿಗಳು ದೂರವಿದ್ದು ತಮ್ಮ ದೇಹ ಮತ್ತು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಪ್ರತಿಯೊಬ್ಬರೂ ಮಾದಕ ವ್ಯಸನದಿಂದ ದೂರವಿರಲು ದೃಢ ಸಂಕಲ್ಪ ಮಾಡಬೇಕು. ಮೋಜಿಗಾಗಿಯಾದರೂ ಮದ್ಯ ಸೇವಿಸಬಾರದು. ವ್ಯಸನಗಳಿಗೆ, ಅಂದರೆ ಧೂಮಪಾನ, ಮಧ್ಯಪಾನ ಹಾಗೂ ಮಾದಕ ವಸ್ತುಗಳಿಗೆ “ಬೇಡ” ಎಂಬ ಪ್ರಬಲ ಅಸ್ತ್ರವನ್ನು ಎಲ್ಲರೂ ಪ್ರಯೋಗಿಸಬೇಕು. ಯುವಜನರ ಜಾಗೃತಿಯಿಂದಲೇ ವ್ಯಸನಮುಕ್ತ ಸಮಾಜವನ್ನು ಕಟ್ಟಲು ಸಾಧ್ಯ. ಅರಿವು ಹಾಗೂ ಮಾಹಿತಿ, ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಸಹಕಾರಿ ಎಂದು ಅವರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಉಪ ಕುಲಪತಿ ಲಿಂಗರಾಜ ಗಾಂಧಿ ಅವರು ಸ್ವಸ್ಥ ಸಮಾಜವನ್ನು ನಿರ್ಮಿಸಲು ಯುವ ಜನತೆಗೆ ಮಾದಕ ವಸ್ತುಗಳಿಂದ ದೂರವಿರಬೇಕು. ಶಿಕ್ಷಣ ಸಂಸ್ಥೆಗಳು ಪಠ್ಯ ಹಾಗೂ ಪಠ್ಯತೇರ ಚಟುವಟಿಕೆಗಳು ಹೊರತುಪಡಿಸಿ ಜಾಗೃತಿ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಪ್ರಜ್ಞಾವಂತ ಸಮಾಜ ನಿರ್ಮಿಸಲು ವಿದ್ಯಾರ್ಥಿಗಳು ಬದಲಾವಣೆಯ ರಾಯಭಾರಿಗಳಾಗಬೇಕು ಎಂದು ಕರೆ ಕೊಟ್ಟರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ಅರೋಗ್ಯ ಕಾರ್ಯಕ್ರಮದ ಮನೋವೈದ್ಯರಾದ ಡಾ॥ ಚೇತನ್ ಕುಮಾರ್ ಕೆ ಎಸ್ ಅವರು “ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನದಿಂದ ಆಗುವ ದುಪ್ಪರಿಣಾಮ”ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುವ ಮೂಲಕ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು ವ್ಯಸನದಿಂದ ಮುಕ್ತರಾಗಲು ಟೆಲಿಮನಸ್ ಸಹಾಯವಾಣಿ ಕೂಡ ಕಾರ್ಯ ನಿರ್ವಹಿಸುತ್ತಿದ್ದು, 14416 ಉಚಿತ ದೂರವಾಣಿ ಮೂಲಕವೂ ಸಂಪರ್ಕಿಸಿ ಆಪ್ತ ಸಮಾಲೋಚನೆ ಪಡೆಯಬಹುದಾಗಿದೆ ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವ್ಯಸನದಿಂದಾಗುವ ದುಷ್ಪರಿಣಾಮಗಳ ಕುರಿತ ಘೋಷಣೆಗಳುಳ್ಳ ಪ್ಲಕಾರ್ಡನ್ನು ಹಿಡಿದು ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜ್ಞಾನಜ್ಯೋತಿ ಸಭಾಂಗಣದ ಮುಂಭಾಗದಿಂದ ಸ್ವಾತಂತ್ರ ಉದ್ಯಾನವನ, ಕಾಳಿದಾಸ ಮಾರ್ಗ, ರಾಮಚಂದ್ರ ರಸ್ತೆ ಮೂಲಕವಾಗಿ ಜ್ಞಾನಜ್ಯೋತಿ ಸಭಾಂಗಣದವರೆಗೂ ಜಾಗೃತಿ ಜಾಥಾ ನಡಿಗೆಯಲ್ಲಿ ಪಾಲ್ಗೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ಕುರಿತು ಧರಣಿ ಸಾಂಸ್ಕೃತಿಕ ತಂಡವು ಬೀದಿ ನಾಟಕ ಪ್ರದರ್ಶನ ಹಾಗೂ ವ್ಯಸನದ ದುಷ್ಪರಿಣಾಮಗಳನ್ನು ಬಿಂಬಿಸುವ ಜಾಗೃತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು. ತುಮಕೂರಿನ ಚಿತ್ರಕಲಾವಿದರಾದ ಪರಮೇಶ್ ಗುಬ್ಬಿ ಅವರು ದುಶ್ಚಟಗಳಿಂದ ಯುವಜನರ ಜೀವನದ ಮೇಲೆ ಆಗುವ ಪರಿಣಾಮದ ಕುರಿತು ಸ್ಪೀಡ್ ಪೇಂಟಿಂಗ್ ನಂತಹ ವಿನೂತನ ಕಲೆಯ ಮೂಲಕ ವಿಶೇಷ ಸಂದೇಶವನ್ನು ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ನದೀಮ್ ಅಹಮ್ಮದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ, ಸಹಾಯಕ ನಿರ್ದೇಶಕರಾದ ಸೌಮ್ಯ.ಎನ್ ಸಿಬ್ಬಂದಿಗಳಾದ ಪುಪ್ಪಾ.ಆರ್ ಮಡಿವಾಳ, ಮುನಿರತ್ನಮ್ಮ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.