10:30 PM Saturday1 - November 2025
ಬ್ರೇಕಿಂಗ್ ನ್ಯೂಸ್
ನವಕಲಬುರಗಿ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ದ, ಲೀಪ್ ಯೋಜನೆಯ ಅಡಿಯಲ್ಲಿ ಅಭಿವೃದ್ದಿಗೆ ಒತ್ತು:… ಡಿಜಿಟಲ್ ಅರೆಸ್ಟ್ ಮೂಲಕ ಹಣ ವರ್ಗಾವಣೆಯಾಗದಂತೆ ತಡೆದ ಪೊಲೀಸರು: ಮಂಗಳೂರು ಪೊಲೀಸರ ಕಾರ್ಯಕ್ಕೆ… Kodagu | ಪೊನ್ನಂಪೇಟೆಯಲ್ಲಿ ಮಿತಿ ಮೀರಿದ ಬೀದಿ ನಾಯಿ ಹಾವಳಿ: ಶ್ವಾನ ದಾಳಿಗೆ… ರಾಜ್ಯ ಸರ್ಕಾರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡದಿದ್ದರೆ ರೈತರ ಚಳವಳಿ ಎದುರಿಸಬೇಕಾಗುತ್ತದೆ:… Bangalore | ರಾಜ್ಯದಲ್ಲಿ‌ ಕುಡಿಯುವ ನೀರು, ಒಳಚರಂಡಿ ಯೋಜನೆ: ಕೇಂದ್ರಕ್ಕೆ 6,500 ಕೋಟಿ… ಸೋಮವಾರಪೇಟೆ | ಸುಮಾರು 2.4 ಲಕ್ಷ ರೂ. ಮೌಲ್ಯದ ಕಾಳು ಮೆಣಸು ಕಳ್ಳತನ:… ಸಂವಿಧಾನ ರಕ್ಷಣೆ | ರಾಹುಲ್ ಗಾಂಧಿ, ಸಿದ್ದರಾಮಯ್ಯ ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ:… ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡದ ಕೇಂದ್ರ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು:… Kodagu | ಮಡಿಕೇರಿ: 15 ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಕೊನೆಗೂ ಕಾಡಿನಲ್ಲಿ ಪತ್ತೆ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡುವುದಿಲ್ಲ: ಮಾಜಿ ಸಚಿವ ರೇಣುಕಾಚಾರ್ಯ ಭವಿಷ್ಯ

ಇತ್ತೀಚಿನ ಸುದ್ದಿ

ನವಕಲಬುರಗಿ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ದ, ಲೀಪ್ ಯೋಜನೆಯ ಅಡಿಯಲ್ಲಿ ಅಭಿವೃದ್ದಿಗೆ ಒತ್ತು: ಸಚಿವ ಪ್ರಿಯಾಂಕ್ ಖರ್ಗೆ

01/11/2025, 16:41

ಕಲಬುರಗಿ(reporterkarnataka.com):ಕಲಬುರಗಿ ಜಿಲ್ಲೆಯನ್ನು ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ ( Local Economy Accelerator Programme – LEAP) ಅಡಿಯಲ್ಲಿ ಪ್ರವಾಸೋದ್ಯಮ, ಕೃಷಿ, ಕೈಗಾರಿಕೆ, ತಂತ್ರಜ್ಞಾನ, ಎಲೆಕ್ಟ್ರಾನಿಕ್, ಉದ್ಯಮಶೀಲತೆ ಕ್ಷೇತ್ರಗಳ ಅಭಿವೃದ್ದಿ ಪಡಿಸುವ ಮೂಲಕ ರಾಜ್ಯದ ಜಿಡಿಪಿಗೆ ಹೆಚ್ಚಿನ‌ ಕೊಡುಗೆ ನೀಡಲು ಪ್ರಯತ್ನಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ರಾಜ್ಯದ ಜಿಡಿಪಿಗೆ ಬೆಂಗಳೂರು 40% ಕೊಡುಗೆ ನೀಡಿದ್ದರೆ, ದಕ್ಷಿಣ‌ಕನ್ನಡ- 4.5%, ಬೆಂಗಳೂರು ಗ್ರಾಮೀಣ- 1% ಹಾಗೂ ಕಲಬುರಗಿ 1.9% ಕೊಡುಗೆ ನೀಡುತ್ತಿವೆ. ನವೋದ್ಯಮ ಸ್ಥಾಪನೆ, ಕೈಗಾರಿಕೆಗಳ ಅಭಿವೃದ್ದಿ, ಉದ್ಯೋಗ ಸೃಷ್ಟಿ,‌ ಮಾನವ ಸಂಪನ್ಮೂನ ಬೆಳವಣಿಗೆ, ಕೌಶಲ್ಯ ಅಭಿವೃದ್ದಿ, ಆವಿಷ್ಕಾರ ಕೇಂದ್ರ, ಕೃಷಿ ವಲಯದ‌ ಸ್ಥಿರತೆ, ಪ್ರವಾಸೋದ್ಯಮದ ಬಲಪಡಿಸುವ ಗುರಿಯೊಂದಿಗೆ ನವಕಲಬುರಗಿಯನ್ನು ಅಭಿವೃದ್ದಿಪಡಿಸಲಾಗುವುದು.‌ ಈ ಹಿನ್ನೆಲೆಯಲ್ಲಿ ನೀಲಿ ನಕ್ಷೆಯನ್ನು ತಯಾರಿಸಲಾಗಿದ್ದು ಮುಂದಿನ ಎರಡು ವಾರದಲ್ಲಿ ಸಾರ್ವಜನಿಕರೊಂದಿಗೆ ವಿವರಗಳನ್ನು ಹಂಚಿಕೊಳ್ಳಲಾಗುವುದು. ಮುಂದಿನ ಒಂದು ವರ್ಷದೊಳಗೆ ಈ ಎಲ್ಲಾ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಕಲಬುರಗಿ ಯ ಜಿಡಿಪಿಯನ್ನು 1.9% ನಿಂದ 2.15% ಗೆ ಎತ್ತರಿಸಲು ಪ್ರಯತ್ನಿಸಲಾಗುವುದು ಎಂದರು.
” ಬಿಯಾಂಡ್ ಬೆಂಗಳೂರು” ಕಾರ್ಯಕ್ರಮ ಅಡಿಯಲ್ಲಿ ಬೆಂಗಳೂರು ಹೊರತುಪಡಿಸಿ ಕಲಬುರಗಿಯಲ್ಲಿ ನವೋದ್ಯಮದ‌ ಉತ್ತೇಜನಕ್ಕೆ ಕ್ರಮವಹಿಸಲಾಗುತ್ತಿದೆ.
ಯುವ ಸಬಲೀಕರಣಕ್ಕಾಗಿ ಕೇವಲ ಉದ್ದೋಗ ಹಾಗೂ ಶಿಕ್ಷಣ ಕೊಡುವುದು ಅಷ್ಟೇ ಅಲ್ಲದೇ ಬೃಹತ್ ಸ್ಪೋರ್ಟ್ಸ್ ಸಿಟಿ ಸ್ಥಾಪನೆಗೆ ಅಡಿಗಲ್ಲು ನೆರವೇರಿಸಲಾಗುವುದು. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು‌ ಕಲಬುರಗಿ ಯನ್ನು ಸ್ಮಾರ್ಟ್ ಸಿಟಿಯ ಮಾದರಿಯಲ್ಲಿ ಅಭಿವೃದ್ದಿ ಪಡಿಸಲಾಗುವುದು.
ಸ್ಥಳೀಯ ಆರ್ಥಿಕ ವೇಗವರ್ಧಕ‌ ಕಾರ್ಯಕ್ರಮ ( Local Economy Accelerator Programme) ಅಡಿಯಲ್ಲಿ ರೂ 1000 ಕೋಟಿ ವೆಚ್ಚದಲ್ಲಿ ಉದಯೋನ್ಮುಖ ತಂತ್ರಜ್ಞಾನ‌ ಸಮೂಹಗಳಲ್ಲಿ ನಾವಿನ್ಯತೆ, ಉದ್ಯಮಶೀಲತೆ ಮತ್ತು ಉದ್ಯೋಗ ಸೃಷ್ಠಿಸುವ 5 ವರ್ಷಗಳ ಪರಿವರ್ತಕ, ಮೂಲ ಸೌಕರ್ಯ ಅಂತರ ಹಣಕಾಸಿನ ಪ್ರವೇಶ ಮತ್ತು ಪರಿಸರ ವ್ಯವಸ್ಥೆಯ ಅಭಿವೃದ್ದಿಯನ್ನು ಪಸರಿಸುವ ಮೂಲಕ ಲೀಪ್ 5 ಲಕ್ಷ ಉದ್ಯೋಗಗಳನ್ನು ಸೃಷ್ಟಿ ಸುವ ನಾಗಾವಿ ಇನ್ಸಟ್ಯೂಟ್ ಆಫ್ ಕಾಂಪಿಟೇಟಿವ್ ಎಕ್ಸಾಮಿನೆಷನ್ ( NICE) ಅಡಿಯಲ್ಲಿ ಕಲಬುರಗಿ ಯಲ್ಲಿ ತರಬೇತಿ‌ ಕೇಂದ್ರ ಸ್ಥಾಪಿಸಲಾಗುತ್ತಿದ್ದು ಸುಮಾರು 2000 ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್, ಕೆಎಎಸ್, ಬ್ಯಾಂಕಿಂಗ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುವುದು.
ಐತಿಹಾಸಿಕ ಮತ್ತು ಪ್ರಾಚೀನ ಸ್ಮಾರಕಗಳನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಸಂರಕ್ಷಣೆಗೆ ರೂ 313.17 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
ಕನ್ನಡದ ಪ್ರಾಚೀನ ವಿಶ್ವವಿದ್ಯಾನಿಲಯವೆಂದು ಪ್ರಖ್ಯಾತಿಯನ್ನು ಹೊಂದಿರುವ ಚಿತ್ತಾಪುರ ತಾಲೂಕಿನ ನಾಗಾವಿ ಪಾರಂಪರಿಕ ಪ್ರದೇಶದ ಅಭಿವೃದ್ಧಿ ಕಾಮಗಾರಿಗಳನ್ನು ರೂ 68 ಕೋಟಿ ರೂ. ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದು.
ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಸೇಡಂ ತಾಲೂಕಿನ ಮಳಖೇಡ್ ಕೋಟೆಯನ್ನು ರೂ 6 ಕೋಟಿ ವೆಚ್ಚದಲ್ಲಿ ಮತ್ತು ಕಾಳಗಿಯ ಕಾಳಗಿಯ ಶ್ರೀ ಸೂರ್ಯನಾರಾಯಣ ದೇವಾಲಯ 4.17 ಕೋಟಿ ರೂ. ಗಳ ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುವುದು.
ಚಿತ್ತಾಪುರ ತಾಲೂಕಿನ ಕನಗನಹಳ್ಳಿ ಐತಿಹಾಸಿಕ ಬೌದ್ದ ನೆಲೆ ಮತ್ತು ಪ್ರಾಚ್ಯ ಕುರುಹುಗಳ ಸಂರಕ್ಷಣೆ ಜೊತೆಗೆ ಪ್ರವಾಸಿಗರಿಗೆ ಮಾಹಿತಿ ಒದಗಿಸುವ 2 ಕೋಟಿ ರೂ. ವೆಚ್ಚದ ಮಾಹಿತಿ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ.
ಸರ್ಕಾರದ ‘ಬಿಯಾಂಡ್ ಬೆಂಗಳೂರು’ ದರ್ಶನಾತ್ಮಕ ಮಿಷನ್ ಅಡಿಯಲ್ಲಿ ಕಲಬುರಗಿ ನಗರದಲ್ಲಿ ಅತ್ಯುತ್ತಮ ಗುಣಮಟ್ಟದ ಇನ್ನೊವೇಷನ್ ಸೆಂಟರ್ ಸ್ಥಾಪಿಸಲಾಗುತ್ತಿದೆ.
ಕಲಬುರಗಿ ಇನ್‌ಕ್ಯುಬೇಷನ್ ಕೇಂದ್ರವು ನಾವೀನ್ಯತೆ ಮತ್ತು ಉದ್ಯಮಶೀಲತೆಯ ದಾರಿದೀಪವಾಗಿದ್ದು, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಉದ್ಯಮ-ಸಮನ್ವಯ ಮಾರ್ಗದರ್ಶನವನ್ನು ನೀಡುತ್ತದೆ. 2030ರ ವೇಳೆಗೆ 500ಕ್ಕೂ ಹೆಚ್ಚು ಸ್ಟಾರ್ಟ್ ಅಪ್‌ ಗಳನ್ನು ಪೋಷಿಸುವುದು, ಕನಿಷ್ಠ 1,000 ನೇರ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಕಲ್ಯಾಣ ಕರ್ನಾಟಕವನ್ನು ಡಿಜಿಟಲ್ ತಂತ್ರಜ್ಞಾನ, ಕೃಷಿ ತಂತ್ರಜ್ಞಾನ, ಗ್ರಾಮೀಣ ನಾವೀನ್ಯತೆ ಮತ್ತು ಸುಸ್ಥಿರತೆಗೆ ಪ್ರಮುಖ ಕೇಂದ್ರವಾಗಿ ಇರಿಸುವ ಗುರಿ ಹೊಂದಲಾಗಿದೆ.
ಕಲಬುರಗಿಯ ನಂದೂರ-ಕೆಸರಟಗಿ ಕೈಗಾರಿಕಾ ಪ್ರದೇಶ 2ನೇ ಹಂತದಲ್ಲಿ Trade Infrastructure For Export Scheme (TIES) ಯಡಿ ರೂ 16.80 ಕೋಟಿ ವೆಚ್ಚದಲ್ಲಿ ಪ್ಲಗ್ ಮತ್ತು ಪ್ಲೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಉದ್ಯಮವನ್ನು ಶೀಘ್ರವಾಗಿ ಸ್ಥಾಪಿಸಲು ಉದ್ದೇಶಿಸಿರುವ ಉದ್ಯಮಿದಾರರಿಗೆ ಸಿದ್ದವಿರುವ ಮೂಲಸೌಕರ್ಯ ಅವರಿಗೆ ಸಿಗಲಿದೆ
ಕಲಬುರಗಿಯಲ್ಲಿ ನಂದೂರ-ಕೆಸರಟಗಿ ಕೈಗಾರಿಕಾ ಪ್ರದೇಶದ 3ನೇ ಹಂತದ ಒಟ್ಟು 595.6 ಎಕರೆ ವಿಸ್ತೀರ್ಣ ಪೈಕಿ 36.89 ಎಕರೆಯಲ್ಲಿ ವಿದ್ಯುನ್ಮಾನ ಉತ್ಪನ್ನಗಳ ತಯಾರಿಕಾ ಕೈಗಾರಿಕೆಗಳು (Electronic Manufacturing Industries), 48.80 ಎಕರೆಯಲ್ಲಿ ರಸಾಯನಿಕ ಮತ್ತು ಅನೀಲ ಕೈಗಾರಿಕೆಗಳು (Chemical & Gas Industries), 6.50 (Plug & Play Building), 5.51 ಎಕರೆಯಲ್ಲಿ ಆಹಾರ ಉದ್ಯಾನ (Food Park), 5.24 ಎಕರೆಯಲ್ಲಿ ಸುಸ್ಥಿರ ವಿದ್ಯುನ್ಮಾನ ಉದ್ಯಾನ (Sustainable Electronic Park) ವನ್ನು ಸ್ಥಾಪಿಸಲಾಗುತ್ತಿದೆ.
ಕಲಬುರಗಿಯ ಕಪನೂರ ಕೈಗಾರಿಕಾ ಪ್ರದೇಶದ 3ನೇ ಹಂತದಲ್ಲಿನ 20 ಎಕರೆ ಜಾಗದಲ್ಲಿ ಆಟೋ ಮೊಬೈಲ್ ವಾಹನಗಳ ದುರಸ್ತಿ ಮತ್ತು ಸಂಬಂಧಪಟ್ಟ ಎಲ್ಲಾ ವೃತ್ತಿಗಳ ಸುಮಾರು 400 ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಘಟಕಗಳಿಗೆ ಒಂದು ಸೂರಿನ ಅಡಿ ಸೂಕ್ತ ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ “AUTO & GENERAL ENGINEERING CLUSTER” ಸ್ಥಾಪಿಸಲಾಗುತ್ತಿದೆ.
ಕೆ.ಕೆ.ಆರ್.ಡಿ.ಬಿ ಮೆಗಾ-ಮ್ಯಾಕ್ರೋ ಅನುದಾನದಡಿಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ 9 ಕೃಷಿ ಯಂತ್ರಧಾರೆ ಕೇಂದ್ರ ಸ್ಥಾಪಿಸಲಾಗಿದೆ. ಇದಲ್ಲದೆ ಕಮಲಾಪೂರ, ಸೇಡಂ, ಅಫಜಲಪೂರ ಹಾಗೂ ಚಿತ್ತಾಪೂರನಲ್ಲಿ ಡೋನ್ ಸಿಂಪಡಣೆ ಕೇಂದ್ರ ಸ್ಥಾಪಿಸಿದೆ. ಅಫಜಲಪೂರ ಮತ್ತು ಚಿತ್ತಾಪೂರ ತಾಲೂಕಿನಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಸಿರಿಧಾನ್ಯ ಸಂಸ್ಕರಣ ಕೇಂದ್ರ ಸ್ಥಾಪಿಸಲಾಗುತ್ತಿದೆ.
ಚಿತ್ತಾಪೂರದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಶೀಥಲೀಕರಣ ಘಟಕ ಮತ್ತು ಕಲಬುರಗಿ ಜಿಲ್ಲೆಯಾದ್ಯಂತ 7.59 ಕೋಟಿ ರೂ. ವೆಚ್ಚದಲ್ಲಿ 7 ಸೂಕ್ಷ್ಮ ಜಲಾನಯನ ಸಂಸ್ಕರಣ ಯೋಜನೆಗಳು ಅನುಷ್ಠಾನಗೊಳಿಸಲಾಗುತ್ತಿದೆ.
ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಏಕೀಕರಣದ ಅಗತ್ಯವಿರುವುದರಿಂದ ಕಲಬುರಗಿಯಲ್ಲಿ ಅಗ್ನಿ-ಟೆಕ್ ವೇಗವರ್ಧಕ (Agri-Tech Accelerator) ವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
Local Economy Accelerator Programme ಈಗಾಗಲೇ ಮೈಸೂರು ಹಾಗೂ ಮಂಗಳೂರಿನಲ್ಲಿ ಘೋಷಣೆ ಮಾಡಲಾಗಿದೆ. ಈಗ ಕಲಬುರಗಿಯಲ್ಲಿ ಘೋಷಣೆ ಮಾಡಲಾಗಿದೆ. ಉದ್ಯಮಶೀಲತೆ ಅಭಿವೃದ್ದಿ, ಉದ್ಯೋಗ ಸೃಷ್ಠಿ, ಮೂಲ ಉದ್ದೇಶ ಹೊಂದಿರುವ ಹಿನ್ನೆಲೆಯಲ್ಲಿ ಕಲಬುರಗಿ ಯನ್ನು ಅಭಿವೃದ್ದಿಪಡಿಸಲಾಗುವುದು.
ಉದ್ಯಮಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಯುವಕರು ವ್ಯಕ್ತಿ ತ್ವ ವಿಕಸನಕ್ಕಾಗಿ ಭಾಷ ಲ್ಯಾಬ್ ಸ್ಥಾಪನೆ ಮಾಡಲಾಗುವುದು. ಇದಕ್ಕೆ‌ ಕಲಬುರಗಿ ಸಂಸದರಾದ ರಾಧಾಕೃಷ್ಣ ದೊಡ್ಡಮನಿ ಅವರ ಮುಂದಾಳತ್ವದಲ್ಲಿ ನಡೆಯಲಿದೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 3, 24, 777 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗಳು ಹಾಳಾಗಿದ್ದು ಇದುವರೆಗೆ ಒಟ್ಟು 4,17,596 ರೈತರು ತಮ್ಮ ಹೆಸರುಗಳು ಡಾಟಾ‌ದಲ್ಲಿ ಎಂಟ್ರಿಯಾಗಿದೆ. ಇದರಲ್ಲಿ 4,15,996 ರೈತರು ವಿವರಗಳು ಸ್ವೀಕೃತಗೊಂಡಿದ್ದು, 1,148 ತಿರಸ್ಕಾರಗೊಂಡಿವೆ. ಉಳಿದಂತೆ 1,600 ರೈತರ ವಿವರಗಳು ಡಾಟಾದಲ್ಲಿ ಎಂಟ್ರಿಯಾಗಬೇಕಿದೆ. NDRF ಹಾಗೂ SDRF ನಿಯಮಗಳ ಅಡಿಯಲ್ಲಿ ಮೊದಲ ಕಂತಿನ ಬೆಳಹಾನಿ ಪರಿಹಾರ ಮುಂದಿನ ವಾರದಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಲಿದೆ ಎಂದು ವಿವರಿಸಿದರು.
ಕನ್ನಡ ನಾಡಿಗೆ, ಭಾಷೆಗೆ ತಮ್ಮ ಕೊಡುಗೆ ನೀಡಿದ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳ ಹಾಗೂ ಭಾರತ ರತ್ನ ಪಡೆದ ಮೂವರು ಮಹನೀಯರ ಹುಟ್ಟೂರಿನ‌ ಅಭಿವೃದ್ದಿಗಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯವತಿಯಿಂದ ತಲಾ‌ ಒಂದು ಕೋಟಿ ಅನುದಾನ ಬಿಡಗಡೆ ಮಾಡಲಾಗುವುದು. ಕರ್ನಾಟಕ ರಾಜ್ಯೋತ್ಸವದ ದಿನದಂದು ಕನ್ನಡಕ್ಕಾಗಿ ಶ್ರಮಿಸಿದ ಈ ಮಹಿನೀಯರ ಹುಟ್ಟೂರಿನ ಅಭಿವೃದ್ದಿಗೆ ಇಲಾಖೆ ಶ್ರಮಿಸಲಿದೆ ಎಂದು ಘೋಷಿಸಲು ಹರ್ಷವಾಗುತ್ತಿದೆ ಎಂದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತೀಮಾ, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಜಗದೇವ್ ಗುತ್ತೇದಾರಗ, ಕುಡಾ ಅಧ್ಯಕ್ಷ ಮಜರ್ ಆಲಂ ಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪೊಲೀಸ್ ಕಮೀಷನರ್ ಶರಣಪ್ಪ ಢಗೆ, ಸಿಇಓ ಭಂವರ್ ಸಿಂಗ್ ಮೀನಾ, ಕಾರ್ಪೋರೇಷನ್ ಕಮೀಷನರ್ ಅವಿನಾಶ್ ಶಿಂಧೆ ಸೇರಿದಂತೆ ಹಲವರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು