ಇತ್ತೀಚಿನ ಸುದ್ದಿ
ಗೃಹ ಸಚಿವರ ರಾಜೀನಾಮೆ, ಪೊಲೀಸ್ ಕಮೀಷನರ್ ಅಮಾನತಿಗೆ ಬಿಜೆಪಿ ಆಗ್ರಹ
31/01/2026, 19:25
ಬೆಂಗಳೂರು(reporterkarnataka.com): ಕರ್ನಾಟಕ ಅದರಲ್ಲೂ ವಿಶೇಷವಾಗಿ ಮೈಸೂರು ಮತ್ತು ಬೆಂಗಳೂರನ್ನು ಡ್ರಗ್ಸ್ (ಮಾದಕವಸ್ತು) ನಗರವಾಗಿ ಪರಿವರ್ತನೆಗೊಂಡಿರುವುದು ದುರದೃಷ್ಟಕರ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಹೇಳಿದ್ದು, ರಾಜ್ಯದ ಗೃಹ ಸಚಿವರು ತಕ್ಷಣ ರಾಜೀನಾಮೆ ಕೊಡಬೇಕು; ಸುಳ್ಳು ಮಾಹಿತಿ ಕೊಟ್ಟ ಮೈಸೂರಿನ ಪೊಲೀಸ್ ಕಮೀಷನರ್ ಅವರನ್ನು ಅಮಾನತು ಮಾಡಬೇಕು. ಕರ್ನಾಟಕವನ್ನು ಮಾದಕ ವಸ್ತುಮುಕ್ತ ರಾಜ್ಯವಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಅವರು ಒತ್ತಾಯಿಸಿದ್ದಾರೆ.
ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ತೀವ್ರವಾಗಿ ಕುಸಿದಿದೆ. ಪದೇಪದೇ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಾದಕ ವಸ್ತು ತಯಾರಿಕೆ, ಮಾದಕ ವಸ್ತು ಸರಬರಾಜಾಗುತ್ತಿರುವುದನ್ನು ನ್ಯಾಷನಲ್ ಕ್ರೈಂ ಬ್ಯುರೋವು ತನ್ನ ವರದಿಯಲ್ಲೂ ತಿಳಿಸಿದೆ. ಪ್ರಸ್ತುತ ಕಳೆದ ಕೆಲವು ತಿಂಗಳಿನಿಂದ ಮೈಸೂರಿನಲ್ಲಿ ನಿರ್ಮಾಣವಾದ ಡ್ರಗ್ಸ್ ಫ್ಯಾಕ್ಟರಿಯನ್ನು ಗುಜರಾತ್ ಮತ್ತು ಮಹಾರಾಷ್ಟ್ರದ ಪೊಲೀಸ್ ಅಧಿಕಾರಿಗಳು ಕರ್ನಾಟಕಕ್ಕೆ ಬಂದು ಮೈಸೂರು ಮತ್ತು ಬೆಂಗಳೂರಿನಲ್ಲಿ ನಿರ್ಮಾಣಗೊಂಡ ಡ್ರಗ್ಸ್ ಫ್ಯಾಕ್ಟರಿಯನ್ನು ಕಿತ್ತು ಹಾಕಿಸಿದ್ದೂ ನಮಗೆ ತಿಳಿದಿದೆ ಎಂದು ಅವರು ಗಮನ ಸೆಳೆದಿದ್ದಾರೆ.
ಮುಂದುವರೆದ ಭಾಗವಾಗಿ ಗುಜರಾತ್‍ನ ಆ್ಯಂಟಿ ಡ್ರಗ್ಸ್ ಬ್ಯುರೊವು ತನ್ನ ತನಿಖೆಯನ್ನು ಮುಂದುವರೆಸಿದ್ದ ಪರಿಣಾಮವಾಗಿ ನಿನ್ನೆ ಮತ್ತೆ ಮೈಸೂರಿನಲ್ಲಿ ಮತ್ತೊಂದು ಫ್ಯಾಕ್ಟರಿಗೆ ತೆರಳಿ ಅಲ್ಲಿನ ಮಾದಕವಸ್ತು ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದಾರೆ; ಅಲ್ಲದೇ, ನಾಲ್ವರನ್ನು ಬಂಧಿಸಿದ್ದಾರೆಂದು ತಿಳಿದಿದೆ. ಸೂರತ್‍ನ ನಾರ್ಕೊಟಿಕ್ಸ್ ಕ್ರೈಂ ಬ್ಯುರೊವು ಈ ದಾಳಿಯನ್ನು ಈಗಾಗಲೇ ದೃಢಪಡಿಸಿದೆ. ಆದರೂ, ಪ್ರಸ್ತುತ ರಾಜ್ಯ ಸರಕಾರವು ಈ ಎಲ್ಲ ಘಟನಾವಳಿಯನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿರುವುದು ಎದ್ದು ಕಾಣುತ್ತಿದೆ ಎಂದು ಆಕ್ಷೇಪಿಸಿದ್ದಾರೆ.
ಡ್ರಗ್ಸ್ ಫ್ಯಾಕ್ಟರಿಯ ಒಳಗಡೆ ವಶಪಡಿಸಿಕೊಂಡ ಸಾಮಗ್ರಿಗಳ ಕುರಿತು ಸ್ವತಃ ಗೃಹ ಸಚಿವರೇ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಅದರ ಜೊತೆಗೆ ಮೈಸೂರಿನ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಅವರು ಈ ದಾಳಿ ವೇಳೆ ಯಾವುದೇ ಅಕ್ರಮ ಪದಾರ್ಥ ಸಿಕ್ಕಿಲ್ಲ ಎಂದು ಸುಳ್ಳು ಮಾಹಿತಿ ನೀಡಿರುತ್ತಾರೆ. ಇವತ್ತು ಮೈಸೂರು ಗ್ರಾಮಾಂತರ ಪೊಲೀಸರು ಈ ತಥಾಕಥಿತ ವ್ಯಕ್ತಿಗಳ ಸಂಬಂಧಿಕರ ಮನೆಗೆ ದಾಳಿ ಮಾಡಿದಾಗ ಕೋಟಿಗಟ್ಟಲೆ ಬೆಲೆಬಾಳುವ ಮಾದಕವಸ್ತು ‘ಓಪಿಯಂ’ ಸಿಕ್ಕಿರುವುದು ಅತ್ಯಂತ ಕಳವಳಕಾರಿ ಸಂಗತಿ. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಕುಸಿತ, ಪದೇಪದೇ ಮಾದಕವಸ್ತು ದಂಧೆ ನಡೆಯುತ್ತಿದ್ದರೂ ಅದನ್ನು ತಡೆಯುವಲ್ಲಿ ರಾಜ್ಯ ಸರಕಾರ, ಒಬ್ಬ ಅಸಮರ್ಥ ಗೃಹ ಸಚಿವರು ವಿಫಲವಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಕರ್ನಾಟಕವನ್ನು ಉಡ್ತಾ ಕರ್ನಾಟಕದ ರೂಪದಲ್ಲಿ ಪರಿವರ್ತನೆ ಮಾಡಲು ಕಾಂಗ್ರೆಸ್ಸಿನ ದುರಾಡಳಿತವೇ ಕಾರಣವಾಗಿದೆ. ಇದರಿಂದ ಕರ್ನಾಟಕದ ಎಲ್ಲೆಡೆ ಇವತ್ತು ಡ್ರಗ್ಸ್ ದಂಧೆ ಯುವ ಜನಾಂಗವನ್ನು ದಾರಿ ತಪ್ಪಿಸುತ್ತಿದೆ. ರಾಜ್ಯದಲ್ಲಿ ಒಂದೆಡೆ ಕೊಲೆ ಸುಲಿಗೆ, ಮತ್ತೊಂದೆಡೆ ಮಹಿಳೆಯರ ಮೇಲೆ ಅತ್ಯಾಚಾರ, ದಬ್ಬಾಳಿಕೆ, ಒಟ್ಟು ಕಾನೂನು ಸುವ್ಯವಸ್ಥೆಯ ಕುಸಿತ ಕಾಣುವಂತಾಗಿದೆ. ಇದು ಈ ರಾಜ್ಯ ಸರಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಆರೋಪಿಸಿದ್ದಾರೆ.












