ಇತ್ತೀಚಿನ ಸುದ್ದಿ
ಬಿಜೆಪಿ ಬೈಂದೂರು ಮಂಡಲ ಹಿಂದುಳಿದ ವರ್ಗ ಮೋರ್ಚಾದಿಂದ ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಮೀನು ಖರೀದಿ
11/10/2021, 10:49
ಗಂಗೊಳ್ಳಿ(reporterkarnataka.com): ಅನ್ಯಕೋಮಿನ ಒಂದು ವರ್ಗ ಗಂಗೊಳ್ಳಿ ಮೀನು ಖರೀದಿಗೆ ಬಹಿಷ್ಕಾರ ಹಾಕಿರುವುದು, ಮೀನು ಖರೀದಿಗೆ ಬಂದ ಅನ್ಯಕೋಮಿನ ಜನರನ್ನು ತಡೆದು ಮೀನು ಖರೀದಿಸದಂತೆ ತಡೆಯುತ್ತಿರುವುದು ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಹೇಳಿದರು.
ಬಿಜೆಪಿ ಬೈಂದೂರು ಮಂಡಲ ಹಿಂದುಳಿದ ವರ್ಗ ಮೋರ್ಚಾ ಹಮ್ಮಿಕೊಂಡಿರುವ ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಮೀನು ಖರೀದಿ ಮಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಂಗೊಳ್ಳಿಯಲ್ಲಿ ಗೋ ಹತ್ಯೆಯನ್ನು ವಿರೋಧಿಸಿ ನಡೆದ ಬೃಹತ್ ಪಾದಯಾತ್ರೆಯಲ್ಲಿ ಹಿಂದು ಸಮಾಜ ಒಗ್ಗಟ್ಟಿನಿಂದ ಭಾಗವಹಿಸಿ ಪ್ರತಿಭಟನೆ ನಡೆಸಿತ್ತು. ಈ ಪಾದಯಾತ್ರೆಯಲ್ಲಿ ಮಹಿಳಾ ಮೀನುಗಾರರು, ಮೀನು ಮಾರಾಟ ಮಾಡುವ ಮಹಿಳೆಯರು
ಒಂದೇ ಉದ್ದೇಶದಿಂದ ಭಾಗವಹಿಸಿದ್ದರು.
ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಹೊಟ್ಟೆಪಾಡಿಗೆ, ದೈನಂದಿನ ಜೀವನ ನಡೆಸಲು ಮೀನು ಮಾಡುತ್ತಿರುವ ಮೀನುಗಾರರಿಂದ ಒಂದೇ ಸಮನೆ ಮೀನು ಖರೀದಿಗೆ ಬಹಿಷ್ಕಾರ ಹಾಕುವ ಮೂಲಕ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆಸಲಾಗುತ್ತಿದೆ. ಅನ್ಯಕೋಮಿನವರ ಈ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಅನ್ಯಕೋಮಿನವರ ಆರ್ಥಿಕ ಬಹಿಷ್ಕಾರದ ಪ್ರಯತ್ನವನ್ನು ಧಿಕ್ಕರಿಸುವ ನಿಟ್ಟಿನಲ್ಲಿ, ಮಹಿಳಾ ಮೀನುಗಾರರಲ್ಲಿ ಆತ್ಮಸ್ಥೈರ್ಯ ನೀಡಿ ಬೆಂಬಲ ನೀಡುವ ಹಾಗೂ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ಸಾರುವ ಉದ್ದೇಶದಿಂದ ಬೈಂದೂರು ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ವತಿಯಿಂದ ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಮೀನು ಖರೀದಿ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆ ಹಾಗೂ ಕ್ಷೇತ್ರದ ಬೇರೆ ಬೇರೆ ಭಾಗಗಳಿಂದ ಜನರು ಗಂಗೊಳ್ಳಿಗೆ ಬಂದು ಮೀನು ಮಾರುಕಟ್ಟೆಯಲ್ಲಿ ಮೀನು ಖರೀದಿ ಮಾಡುವ ಕಾರ್ಯ ನಿರಂತರವಾಗಿ ನಡೆಯಲಿದೆ. ಇದು ಯಾರ ವಿರುದ್ಧವೂ ಅಲ್ಲ, ಪ್ರತಿಭಟನೆಯೂ ಅಲ್ಲ ಎಂದು ಅವರು ಹೇಳಿದರು.
ಬೈಂದೂರು ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಸಂತೋಷ ಪೂಜಾರಿ, ಪ್ರಧಾನ ಕಾರ್ಯದರ್ಶಿ ಗಣೇಶ ದೇವಾಡಿಗ ಮತ್ತು ಚಂದ್ರ ಜೋಗಿ, ಕಾರ್ಯದರ್ಶಿ ಉಮೇಶ ಮೊಗವೀರ, ಸಂತೋಷ ಪೂಜಾರಿ, ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪ್ರ.ಕಾರ್ಯದರ್ಶಿ ಗೋಪಾಲ ಕಾಂಚನ್, ನಾರಾಯಣ ಖಾರ್ವಿ, ರವಿ ಗಾಣಿಗ ಕೆಂಚನೂರು, ಸುಕುಮಾರ್ ನೆಂಪು, ಸತೀಶ ಕುಲಾಲ್, ಕೃಷ್ಣ ಪೂಜಾರಿ, ತಾಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಸುರೇಶ ಮೂಡುಬಗೆ, ಗಂಗೊಳ್ಳಿ ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಸದಸ್ಯೆ ಶಾಂತಿ ಖಾರ್ವಿ, ಬಿಜೆಪಿ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.