ಇತ್ತೀಚಿನ ಸುದ್ದಿ
ಬಿಜೆಪಿ ಭದ್ರಕೋಟೆಯೆಂಬ ಭ್ರಮೆ ತಲೆಯಲ್ಲಿದ್ದರೆ ತೆಗೆದುಹಾಕಿ: ಸುಳ್ಯ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪದ್ಮರಾಜ್ ಆರ್.
30/03/2024, 22:39
ಸುಳ್ಯ(reporterkarnataka.com): ದಕ್ಷಿಣ ಕನ್ನಡ ಜಿಲ್ಲೆಯನ್ನು ಸರ್ವತೋಮುಖ ಅಭಿವೃದ್ಧಿಯೆಡೆಗೆ ಕೊಂಡೊಯ್ದಿರುವುದು ಕಾಂಗ್ರೆಸ್ ಲೋಕಸಭಾ ಸದಸ್ಯರ ಸಾಧನೆ. ನಂತರ ಅಧಿಕಾರ ಹಿಡಿಯಲು ಜನರನ್ನು ದಾರಿ ತಪ್ಪಿಸಿ, ಅಪಪ್ರಚಾರ ಮಾಡಿದ ಬಿಜೆಪಿ ಅಧಿಕಾರ ತೆಗೆದುಕೊಂಡಿತು.ಇದೇ ಕಾಯಕವನ್ನು ಮುಂದುವರಿಸಿಕೊಂಡು ಬಂದಿದ್ದು, ಅಧಿಕಾರ ಹಿಡಿದುಕೊಂಡಿದೆ. ಹಾಗಾಗಿ ದ.ಕ. ಬಿಜೆಪಿಯ ಭದ್ರಕೋಟೆ ಎಂದೇ ಭಾವಿಸಿಕೊಂಡಿದ್ದಾರೆ. ಇಂತಹ ಆಲೋಚನೆ ತಲೆಯಲ್ಲಿದ್ದರೆ ಮೊದಲು ತೆಗೆದುಹಾಕಿ. ಕಾಂಗ್ರೆಸ್ ಸಾಧನೆಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗಿ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಹೇಳಿದರು.
ಸುಳ್ಯ ಹಳೆ ಬಸ್ ನಿಲ್ದಾಣ ಸಮೀಪದ ಹಿಂದೂಸ್ಥಾನ್ ಸಿಟಿ ಡೆವಲಪರ್ಸ್ ನಲ್ಲಿ ದ.ಕ. ಲೋಕಸಭಾ ಚುನಾವಣೆಯ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪದ್ಮರಾಜ್ ಎಂದಿಗೂ ಅಪಪ್ರಚಾರ, ಕೆಟ್ಟ ಕೆಲಸಗಳನ್ನು ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷ ಅಭಿವೃದ್ಧಿಯ ರಾಜಕೀಯ ಮಾಡಿಕೊಂಡು ಬಂದಿದೆ. ಹಾಗಾಗಿ ಧೈರ್ಯದಿಂದ ಜನರ ಬಳಿಗೆ ತೆರಳಿ ಎಂದ ಅವರು, ಪ್ರತಿ ಮನೆಗೂ ತೆರಳಿ ಮತ ಕೇಳಬೇಕು. ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೇರಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಮಾತನಾಡಿ, ಯುವಕ, ಉತ್ಸಾಹಿ ಪದ್ಮರಾಜ್ ಅವರನ್ನು ಪಾರ್ಲಿಮೆಂಟಿಗೆ ಕಳುಹಿಸಿಕೊಡಬೇಕು. ಈ ಮೂಲಕ ನೆಮ್ಮದಿಯ, ಶಾಂತಿಯ ಜೀವನಕ್ಕೆ ಮುನ್ನುಡಿ ಹಾಡುವಂತೆ ಕೇಳಿಕೊಂಡರು.
ವಿರೋಧ ಪಕ್ಷದ ಶೋಷಣೆ ಇದ್ದರೂ ಸುಳ್ಯದ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಘನತೆಯನ್ನು ಎತ್ತಿ ಹಿಡಿದಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಗುಪ್ತಚರ ಇಲಾಖೆ ವರದಿ ನೀಡಿದ್ದು, ಕರ್ನಾಟಕದಲ್ಲಿ ಬಿಜೆಪಿ 10 ಕ್ಷೇತ್ರ ಗೆಲ್ಲುವುದು ಕಷ್ಟ ಎಂದು ತಿಳಿಸಿದೆ. ಅಂದರೆ ರಾಜ್ಯದ ಕಾಂಗ್ರೆಸ್ ನಾಯಕರ ಎಣಿಕೆಯಂತೆ 20ಕ್ಕೂ ಅಧಿಕ ಕ್ಷೇತ್ರಗಳನ್ನು ರಾಜ್ಯದಲ್ಲಿ ಕಾಂಗ್ರೆಸ್ ಪಡೆದುಕೊಳ್ಳಲಿದೆ ಎಂದು ಲೇವಡಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ರಮಾನಾಥ ರೈ ಮಾತನಾಡಿ, ಸಿದ್ದರಾಮಯ್ಯ ಅವರ ಹಿಂದಿನ ಮುಖ್ಯಮಂತ್ರಿ ಅವಧಿಯಲ್ಲಿ ಸುಳ್ಯದಲ್ಲಿ ಅನೇಕ ಸೇತುವೆಗಳು ನಿರ್ಮಾಣಗೊಂಡಿವೆ. ನಮ್ಮ ಪ್ರತಿನಿಧಿ ಇಲ್ಲದೇ ಹೋದರೂ ಸಾಕಷ್ಟು ಜನಪರ ಕೆಲಸ ನಡೆದಿವೆ. ಕಾಂಗ್ರೆಸ್ ಎಂದೂ ಕೂಡ ಜನಪರ ಕೆಲಸ ಮಾಡಿದೆ ಎಂದರು.
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಈ ಚುನಾವಣೆಯನ್ನು ಗೆಲ್ಲುವ ಉತ್ಸಾಹದಲ್ಲಿ ಕಾರ್ಯಕರ್ತರಿದ್ದಾರೆ. ಇದಕ್ಕೆ ಪೂರಕವಾಗಿ ಉತ್ತಮ ಅಭ್ಯರ್ಥಿಯನ್ನು ಪಕ್ಷ ನೀಡಿದೆ. ಇನ್ನು ಮತ ಕೇಳಲು ಜನರ ಬಳಿಗೆ ಹೋಗುವಾಗ ಅಧೈರ್ಯವೂ ಬೇಡ. ಕಾರಣ, ರಾಜ್ಯ ಕಾಂಗ್ರೆಸ್ ಸರಕಾರದ ಸಾಧನೆ. ಹಾಗಾಗಿ ಈ ಲೋಕಸಭಾ ಚುನಾವಣೆಯನ್ನು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಐಸಿಸಿ ಸದಸ್ಯ ಐವನ್ ಡಿಸೋಜ ಮಾತನಾಡಿ, ರಾಜ್ಯದ ನಂಬರ್ ವನ್ ಸಂಸದರಿಗೇ ಟಿಕೇಟ್ ನೀಡದ ಬಿಜೆಪಿಯಲ್ಲಿ, ಇನ್ನು ಅದೆಂತಹ ಜನಪ್ರತಿನಿಧಿಗಳು ಇರಬಹುದು ನೀವೇ ಯೋಚಿಸಿ. ಗ್ಯಾರೆಂಟಿ ಯೋಜನೆಗಳನ್ನು ಘೋಷಿಸುವ ಸಂದರ್ಭ ಇದು ಜಾರಿಯಾಗದೇ ಇದ್ದರೆ ಶಾಸಕತ್ವಕ್ಕೇ ರಾಜೀನಾಮೆ ನೀಡುತ್ತೇನೆ ಎಂದವರು ಯು.ಟಿ. ಖಾದರ್ ಅವರು. ಇಂತಹ ಉತ್ತಮ ನಾಯಕರನ್ನು ನೀಡಿದ್ದು ಕಾಂಗ್ರೆಸಿನ ಹೆಗ್ಗಳಿಕೆ. ಇದೀಗ ಲೋಕಸಭಾ ಚುನಾವಣೆಗೂ ಉತ್ತಮ ಅಭ್ಯರ್ಥಿ ಪದ್ಮರಾಜ್ ಅವರನ್ನು ಕಣಕ್ಕಿಳಿಸಿದೆ. ಇವರನ್ನು ಗೆಲ್ಲಿಸಿಕೊಡಬೇಕಾದ ಜವಾಬ್ದಾರಿ ನಮ್ಮದು ಎಂದರು.
ಕಾಂಗ್ರೆಸ್ ಮುಖಂಡ ಧನಂಜಯ ಅಡ್ಪಂಗಾಯ ಮಾತನಾಡಿ, ಈ ಚುನಾವಣೆಯಲ್ಲಿ ಖಂಡಿತವಾಗಿಯೂ ಗೆಲ್ಲಬೇಕು. ಈ ದೇಶ ಉಳಿಯಬೇಕಾದರೆ ಕಾಂಗ್ರೆಸನ್ನು ಗೆಲ್ಲಿಸಲೇಬೇಕಾಗಿದೆ ಎಂದರು.
ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿ. ಕೃಷ್ಣಪ್ಪ, ಜಿಪಂ ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ಸರಸ್ವತಿ ಕಾಮತ್, ಪ್ರಚಾರ ಸಮಿತಿ ಅಧ್ಯಕ್ಷ ವೆಂಕಪ್ಪ ಗೌಡ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಇಸಾಕ್ ಸಾಹೇಬ್, ಕಿರಣ್ ಬುಡ್ಲೆಗುತ್ತು, ಡಾ. ರಘು, ಇಸಾಕ್ ಮೊದಲಾದವರು ಉಪಸ್ಥಿತರಿದ್ದರು.
ಪಿ.ಸಿ. ಜಯರಾಂ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅಶೋಕ್ ಚೂಂತಾರು ಕಾರ್ಯಕ್ರಮ ನಿರೂಪಿಸಿದರು.