ಇತ್ತೀಚಿನ ಸುದ್ದಿ
ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಕುಟುಂಬ ರಾಜಕೀಯದ ವಾಸನೆ: ಪ್ರಧಾನಿ ಮೋದಿ ಗರಂ?; ರಾಜ್ಯ ನಾಯಕರುಗಳಿಗೆ ತರಾಟೆ?
11/04/2023, 18:01
ಹೊಸದಿಲ್ಲಿ(reporterkarnataka.com): ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡೆರಡು ಪಟ್ಟಿಯನ್ನು ಬಿಡುಗಡೆಗೊಳಿಸಿದರೂ ಆಡಳಿತರೂಢ ಬಿಜೆಪಿ ತನ್ನ ಅಭ್ಯರ್ಥಿಗಳ ಯಾವುದೇ ಪಟ್ಟಿಯನ್ನು ಇದುವರೆಗೆ ಬಿಡುಗಡೆ ಮಾಡಿಲ್ಲ. ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಕುಟುಂಬ ರಾಜಕೀಯದ ಜಾಡನ್ನು ಪತ್ತೆ ಹಚ್ಚಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ನಾಯಕರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಮಗ, ಸಚಿವ ಎಂ.ಟಿ.ಬಿ. ನಾಗರಾಜ ಅವರ ಮಗ ಸೇರಿದಂತೆ ಹಲವು ಅಗ್ರಪಂಕ್ತಿಯ ನಾಯಕರ ಮಕ್ಕಳ ಹೆಸರನ್ನು ಕಂಡು ಪ್ರಧಾನಿ ಮೋದಿ ಅವರು ಹೌಹಾರಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಕುಟುಂಬ ರಾಜಕೀಯವನ್ನು ವಿರೋಧಿಸುವ ನಾವು ನಮ್ಮ ನಾಯಕರುಗಳ ಮಕ್ಕಳಿಗೇ ಟಿಕೆಟ್ ಕೊಟ್ಟರೆ ಹೇಗೆ? ಎಂದು ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ರಾಜ್ಯದ ನಾಯಕರುಗಳಿಗೆ ಪ್ರಶ್ನಿಸಿದ್ದಾರೆ.
ತೀರಾ ಅನಿವಾರ್ಯ ಸ್ಥಿತಿಯಲ್ಲಿ ನಾಯಕರುಗಳ ಪುತ್ರರಿಗೆ ಟಿಕೆಟ್ ಕೊಡೋಣ. ಆದರೆ ಸಾರಾಸಗಟಾಗಿ ಕೇಳಿದ ಎಲ್ಲ ನಾಯಕರುಗಳ ಮಕ್ಕಳಿಗೆ ಟಿಕೆಟ್ ಕೊಟ್ಟರೆ ಹೇಗೆ ಎನ್ನುವುದು ಪ್ರಧಾನಿಯವರ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಯಾದಿಯ ಪರಿಷ್ಕರಣೆ ಮತ್ತೆ ನಡೆಯುತ್ತಿದ್ದು, ನಾಳೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.