ಇತ್ತೀಚಿನ ಸುದ್ದಿ
ಬಿಡದಿ: ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಭೇಟಿ
28/05/2025, 00:01

ಬೆಂಗಳೂರು(reporterkarnataka.com): ಬಿಡದಿಯಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಸ್ವಚ್ಛತೆ ಜತೆಗೆ ನಿರ್ವಹಣೆಗೂ ಆದ್ಯತೆ ನೀಡುವ ದೃಷ್ಟಿಯಿಂದ ಬಿಬಿಎಂಪಿ ಹಾಗೂ ಇಂಧನ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಮಂಗಳವಾರ ಬಿಡದಿಯ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು, “ಇಲ್ಲಿ ದುರ್ವಾಸನೆ ಬಂದು ಸುತ್ತಲಿನ ನಿವಾಸಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಪ್ರತಿ ನಿತ್ಯ ವಾಸನೆ ನಿಯಂತ್ರಣ ರಾಸಾಯನಿಕ ಬಳಸಬೇಕು”, ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
“ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕಕ್ಕೆ ನಗರದ ವಿವಿಧ ಭಾಗಗಳಿಂದ ಲಾರಿಗಳಲ್ಲಿ ತ್ಯಾಜ್ಯ ತರಲಾಗುತ್ತದೆ. ಇಲ್ಲಿ ತ್ಯಾಜ್ಯ ಖಾಲಿ ಮಾಡಿ ವಾಪಸಾಗುವಾಗ ದುರ್ವಾಸನೆ ಬರುತ್ತದೆ ಎಂಬ ದೂರುಗಳಿವೆ. ಹೀಗಾಗಿ ತ್ಯಾಜ್ಯ ಖಾಲಿ ಮಾಡಿದ ಲಾರಿಗಳು ವಾಪಸ್ ಹೋಗುವ ಮುನ್ನ ಅವುಗಳನ್ನು ಸ್ವಚ್ಛಗೊಳಿಸಲು ಆವರಣದಲ್ಲಿಯೇ ಸ್ವಚ್ಛತಾ ವ್ಯವಸ್ಥೆ ಕಲ್ಪಿಸಬೇಕು”, ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
“ವಿದ್ಯುತ್ ಉತ್ಪಾದನಾ ಘಟಕಕ್ಕೆ ಬರುವ ತ್ಯಾಜ್ಯದಲ್ಲಿ ಕೆಲವೊಂದು ಸಮಸ್ಯೆಗಳಿವೆ. ಅದೇ ರೀತಿ ಖಾಸಗಿಯವರು ಘಟಕ ನಿರ್ವಹಿಸುವ ವಿಚಾರದಲ್ಲೂ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಜತೆಗೆ ಸ್ವಚ್ಛತೆಯ ಬಗ್ಗೆಯೂ ಗಮನ ಹರಿಸಬೇಕಾಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಬಿಬಿಎಂಪಿ ಹಾಗೂ ಇಂಧನ ಇಲಾಖೆಯ ಉನ್ನತ ಅಧಿಕಾರಿಗಳು, ಘಟಕ ನಿರ್ವಹಣೆ ಮಾಡುತ್ತಿರುವ ಖಾಸಗಿ ಕಂಪನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು”, ಎಂದು ಹೇಳಿದರು.
*ಶೀಘ್ರ ಪರಿಹಾರ ವಿತರಣೆ*
“ವಿದ್ಯುತ್ ಉತ್ಪಾದನಾ ಘಟಕದಲ್ಲಿ ಇತ್ತೀಚೆಗೆ ದುರಂತ ಸಂಭವಿಸಿ 5 ಮಂದಿ ಮೃತಪಟ್ಟಿದ್ದು, ಅವರ ಕುಟುಂಬದವರಿಗೆ ಕೆಪಿಸಿಎಲ್ ವತಿಯಿಂದ ತಲಾ 5 ಲಕ್ಷ ರೂ. ಪರಿಹಾವನ್ನು ಶೀಘ್ರವೇ ವಿತರಿಸಲಾಗುವುದು. ಜತೆಗೆ ಘಟಕ ನಿರ್ವಹಿಸುವ ಕಂಪನಿಯಿಂದಲೂ ಸೂಕ್ತ ಪರಿಹಾರ ಒದಗಿಸಲಾಗುವುದು”, ಎಂದು ಸಚಿವರು ತಿಳಿಸಿದರು.