ಇತ್ತೀಚಿನ ಸುದ್ದಿ
ಬೆಂಗಳೂರು: ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಬುರ್ಖಾಧಾರಿ ಮಹಿಳೆಯ ತಡೆದ ಪೊಲೀಸರು; ವೀಡಿಯೊ ವೈರಲ್
11/11/2022, 23:11

ಬೆಂಗಳೂರು(reporterkarnataka.com): ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ ನಾಡ ದೊರೆ ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ ಬುರ್ಖಾಧಾರಿ ಮಹಿಳೆಯನ್ನು ಪೊಲೀಸರು ಪಕ್ಕಕ್ಕೆ ಸರಿಸಿದ ಘಟನೆ ಶುಕ್ರವಾರ ನಡೆದಿದ್ದು, ಈ ವೀಡಿಯೊ ವೈರಲ್ ಆಗಿದೆ.
ಬೆಂಗಳೂರು ಶಿಲ್ಪಿ ಕೆಂಪೇಗೌಡರ 108 ಅಡಿ ಎತ್ತರದ ‘ಪ್ರತಿಮೆ’ ಅನಾವರಣ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಉದ್ಘಾಟನೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರೈಲು ನಿಲ್ದಾಣದಲ್ಲಿ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ಗೆ ಚಾಲನೆ ಸೇರಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಪ್ರಧಾನಿ ಮೋದಿ ಶುಕ್ರವಾ ಬೆಂಗಳೂರಿಗೆ ಆಗಮಿಸಿದ್ದರು. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ನಗರದಲ್ಲಿ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸುಮಾರು 6 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಪ್ರಧಾನಿ ಕಾರ್ಯಕ್ರಮದಲ್ಲಿ ಭಾಗವಹಿಸುವವರ ತಪಾಸಣೆ ಕೂಡ ಕಟ್ಟುನಿಟ್ಟಾಗಿ ನಡೆದಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಮೋದಿ ಅಭಿಮಾನಿಗಳನ್ನು, ಬಿಜೆಪಿ ಕಾರ್ಯಕರ್ತರನ್ನು ತಪಾಸಣೆ ನಡೆಸಿ ಕಾರ್ಯಕ್ರಮ ನಡೆಯುವ ಸಭಾಂಗಣಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು.
ಆದರೆ ಕಾರ್ಯಕ್ರಮಕ್ಕೆ ಬಂದಿದ್ದ ಬುರ್ಖಾ ಧಾರಿ ಮಹಿಳೆಯನ್ನು ಕೆಲ ಕಾಲ ಪಕ್ಕಕ್ಕೆ ಸರಿಸಿ ನಿಲ್ಲುವಂತೆ ಪೊಲೀಸ್ ಸಿಬ್ಬಂದಿಗಳು ಸೂಚಿಸಿದ್ದಾರೆ. ಅವರ ಜೊತೆಗಿದ್ದ ಇತರ ಬುರ್ಖಾ ಧಾರಿ ಮಹಿಳೆಗೆ ಕಳುಹಿಸಿದ್ದಾರೆ. ಆದರೆ ಓರ್ವ ಮಹಿಳೆಗೆ ಕೆಲಕಾಲ ನಿಲ್ಲಿಸಿ ಬಳಿಕ ತಲೆಗೆ ಹಾಕಿದ ಸಾಲು ತೆಗೆಯುವಂತೆ ಪೊಲೀಸರು ಸೂಚಿಸಿದ್ದಾರೆ. ಬಳಿಕ ಅಲ್ಲಿದ್ದ ಜನರು ತೊಂದರೆ ಇಲ್ಲಮ್ಮ ನೀವು ಹೋಗಿ ಎಂದು ಹೇಳಿದ್ದಾರೆ. ಬಳಿಕ ಮಹಿಳೆಗೆ ಕಾರ್ಯಕ್ರಮದ ಸಭಾಂಗಣಕ್ಕೆ ಕಳುಹಿಸಲಾಗಿದೆ.ಈ ಕುರಿತ ವಿಡಿಯೋ ವೈರಲ್ ಆಗಿದೆ.