ಇತ್ತೀಚಿನ ಸುದ್ದಿ
ಬೆಂಗಳೂರಿನಿಂದ ನಾಪತ್ತೆಯಾದ 3 ಮಂದಿ ಮಕ್ಕಳು ಹಾಗೂ ಯುವತಿ ಮಂಗಳೂರಿನಲ್ಲಿ ಪತ್ತೆ; ಪೊಲೀಸ್ ವಶಕ್ಕೆ
12/10/2021, 18:41
ಮಂಗಳೂರು(reporterkarnataka.com): ಇಡೀ ರಾಜ್ಯವನ್ನೇ ಬೆಚ್ಚಿ ಬೀಳುವಂತೆ ಮಾಡಿದ ಮಕ್ಕಳ ನಿಗೂಢ ನಾಪತ್ತೆ ಪ್ರಕರಣ
ಸುಖಾಂತ್ಯ ಕಂಡಿದೆ. ಬೆಂಗಳೂರಿನಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಚಿಕ್ಕಬಾಣವಾರ ಪ್ರದೇಶದಿಂದ ಭಾನುವಾರ ಬೆಳಗ್ಗೆ ಬಿಸಿಎ ಓದುತ್ತಿದ್ದ 21 ವರ್ಷದ ಅಮೃತವರ್ಷಿಣಿ ಎಂಬ ಯುವತಿ ಜತೆ 12 ವರ್ಷದ ಮೂವರು ಮಕ್ಕಳು ನಾಪತ್ತೆಯಾಗಿದ್ದರು. ಒಂದೇ ಅಪಾರ್ಟೆಂಟ್ ನಲ್ಲಿ ವಾಸವಿದ್ದ ರಾಯನ್ ಸಿದ್ದಾರ್ಥ್, ಚಿಂತನ್ ಹಾಗೂ ಭೂಮಿ ಎಂಬ ಮೂವರು ಮಕ್ಕಳ ಜತೆ ಅಮೃತವರ್ಷಿಣಿ ಎಂಬ ಯುವತಿ ನಾಪತ್ತೆಯಾಗಿದ್ದಳು. ನಾಪತ್ತೆ ಪ್ರಕರಣ ತೀವ್ರ ಸಂಕಲನಕ್ಕೆ ಕಾರಣವಾಗಿತ್ತು. ಹೆತ್ತವರು ಭಾರೀ ಆತಂಕಕ್ಕೆ ಒಳಗಾಗಿದ್ದರು.
ಮನೆಯ ಪರಿಸರದಲ್ಲಿ ಜೊತೆ ಆಟವಾಡುತ್ತಿದ್ದರಿಂದ ಓದಿನ ಬಗ್ಗೆ ಆಸಕ್ತಿ ಇಲ್ಲ. ಯಾವತ್ತೂ ಆಟವಾಡುತ್ತೀರಿ. ಹೀಗೇ ಮಾಡಿದ್ರೆ ನಿಮ್ಮನ್ನು ಹಾಸ್ಟೆಲ್ ಹಾಕಿಸ್ತೀವಿ ಎಂದು ಮಕ್ಕಳನ್ನು ಹೆತ್ತವರು ಗದರಿಸಿದ್ದರು. ಇದೇ ನೆಪದಲ್ಲಿ ತಮ್ಮನ್ನು ಹಾಸ್ಟೆಲ್ ಹಾಕ್ತಾರೆಂದು ಹೆದರಿದ ಮಕ್ಕಳು, ಭಾನುವಾರ ಬೆಳಗ್ಗೆ ಮನೆ ಬಿಟ್ಟು ಬಂದಿದ್ದಾರೆ.
ಬೆಂಗಳೂರಿನಿಂದ ಬೆಳಗಾವಿಗೆ ತೆರಳಿದ ಮಕ್ಕಳು ಅಲ್ಲಿಂದ ಮೈಸೂರಿಗೆ ತೆರಳಿ ಮತ್ತೆ ಬೆಂಗಳೂರು ಮರಳಿದ್ದರು. ಆನಂತರ, ನಿನ್ನೆ ರಾತ್ರಿ ಮಂಗಳೂರಿಗೆ ಬರುವ ಕ್ಲೀಪರ್ ಬಸ್ ಹಿಡಿದು ಬಂದಿದ್ದಾರೆ. ಮಂಗಳೂರಿನ ಜ್ಯೋತಿ ವೃತ್ತದಲ್ಲಿ ಬಸ್ ಇಳಿದು ಆಟೋ ಹತ್ತಿದ್ದಾರೆ. ಆಟೋ ಚಾಲಕನಲ್ಲಿ ಯಾವುದೋ ಕಡೆಗೆ ಹೋಗಬೇಕೆಂದು ಹೇಳಿದ್ದಾರೆ. ಆದರೆ, ಮಕ್ಕಳ ವರ್ತನೆ, ಅವರು ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡು ಅನುಮಾನಗೊಂಡ ಆಟೋ ಚಾಲಕ ಮಕ್ಕಳನ್ನು ನೇರವಾಗಿ ಪಾಂಡೇಶ್ವರ ಠಾಣೆಗೆ ಒಯ್ದಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ, ತಾವು ಬೆಂಗಳೂರಿನಿಂದ ಬಂದಿರುವುದನ್ನು ತಿಳಿಸಿದ್ದಾರೆ.
ಮನೆಯವರು ಬೈತಾರೆ, ನಮ್ಮನ್ನ ಬೇರೆ ಮಾಡಿ ಬಿಡ್ತಾರೆ. ನಾವೆಲ್ಲ ತುಂಬಾ ಕ್ಲೋಸ್ ಫ್ರೆಂಡ್ಸ್ ಆಗಿದ್ದೆವು. ಆದರೆ, ಮನೆಯವರು ನಾವು ಒಟ್ಟಿಗಿರುವುದನ್ನು ಬಿಡುತ್ತಿರಲಿಲ್ಲ. ಅದಕ್ಕಾಗಿ ಮನೆಯನ್ನೇ ಬಿಟ್ಟು ಹೋಗಲು ನಿರ್ಧರಿಸಿದ್ವಿ. ಹಳ್ಳಿಗೆ ಹೋಗಿ ಒಟ್ಟಾಗಿ ಜೀವನ ಮಾಡಬೇಕೆಂದು ನಿರ್ಧಾರ ಮಾಡಿದ್ವಿ ಎಂದು ಮಕ್ಕಳು ಪೊಲೀಸರಲ್ಲಿ ಹೇಳಿಕೆ ನೀಡಿದ್ದಾರೆ.
ಯುವತಿ ಮೇಲೆ ಕ್ರಮ: ಡಿಸಿಪಿ
ನಾಲ್ವರು ಮಕ್ಕಳನ್ನು ಮಂಗಳೂರು ನಗರ ಡಿಸಿಪಿ ಹರಿರಾಂ ಶಂಕರ್ ವಿಚಾರಣೆ ನಡೆಸಿದ್ದಾರೆ. ನಾಲ್ವರು ಮಕ್ಕಳು ಒಂದೇ ಲೇಔಟ್ ನಲ್ಲಿ ನಿವಾಸಿಗಳು, ಎಲ್ಲರೂ ಒಟ್ಟಿಗೆ ಆಡೋಕೆ ಹೋಗ್ತಿದ್ರು. ಆದರೆ ಇವರ ಸ್ನೇಹ ಮನೆಯವರಿಗೆ ಹಿಡಿಸಿರಲಿಲ್ಲ. ಪ್ರಯಾಣಕ್ಕೆ ಎಲ್ಲರೂ ಮನೆಯಿಂದ ಹಣವನ್ನು ಹಿಡಿದು ತಂದಿದ್ದರು. ತಮ್ಮ ಗುರುತನ್ನು ಯಾರೂ ಪತ್ತೆ ಹಚ್ಚಬಾರದೆಂದು ಮೊಬೈಲ್ ಸಿಮ್ ಕಾರ್ಡ್ ಮತ್ತು ಮೈ ಮೇಲಿದ್ದ ಚಿನ್ನಾಭರಣವನ್ನು ಮಂಗಳೂರಿನ ಖಾಸಗಿ ಬಸ್ ನಿಲ್ದಾಣದ ಡಸ್ಟ್ ಬಿನ್ ಗೆ ಎಸೆದಿದ್ದಾರೆ. ಆದರೆ ಸದ್ಯ ಪೊಲೀಸರು ಈ ವಸ್ತುಗಳನ್ನು ರಿಕವರಿ ಮಾಡಿದ್ದಾರೆ. ಮಕ್ಕಳು ಸಿಕ್ಕಿರುವ ಬಗ್ಗೆ ಈಗಾಗಲೇ ಬೆಂಗಳೂರು ಡಿಸಿಪಿಗೆ ಮಾಹಿತಿ ನೀಡಿದ್ದೇವೆ. ಬೆಂಗಳೂರಿನಿಂದ ಹೆತ್ತವರು ಮಂಗಳೂರಿಗೆ ಬರುತ್ತಿದ್ದಾರೆ. ಸಣ್ಣ ಮಕ್ಕಳನ್ನು ಹೆತ್ತವರ ಜೊತೆ ಕಳುಹಿಸುತ್ತೇವೆ. ಆದರೆ ಮಕ್ಕಳನ್ನು ಕರೆತಂದ ಯುವತಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಪಿ ಹರಿರಾಂ ಶಂಕರ್ ಹೇಳಿದ್ದಾರೆ.