ಇತ್ತೀಚಿನ ಸುದ್ದಿ
ಬೆಳಗಾವಿ ಸುವರ್ಣಸೌಧಕ್ಕೆ ಬೆಳಕಿನ ಖದರ್: ವೀಕೆಂಡ್ ನಲ್ಲಿ ಬಣ್ಣದ ಬೆಳಕಿನಲ್ಲಿ ಬೆಳಗುವ ಯೋಜನೆಗೆ ಸ್ಪೀಕರ್ ಖಾದರ್ ಚಾಲನೆ
02/12/2023, 10:03
ಬೆಳಗಾವಿ(reporterkarnataka.com): ದಶಮಾನೋತ್ಸವ ಪೂರೈಸಿರುವ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4 ರಿಂದ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ. ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಸುವರ್ಣ ವಿಧಾನಸೌಧಕ್ಕೆ ಹೊಸ ಖದರ್ ತರಲು ವಿನೂತನ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದಾರೆ. ಸುವರ್ಣ ಸೌಧ ಕೇವಲ ವರ್ಷದ ಅಧಿವೇಶನಕ್ಕೆ ಸೀಮಿತಗೊಳಿಸದೇ ಅದೊಂದು ಗಡಿ ಪ್ರದೇಶದ ಪ್ರವಾಸಿ ತಾಣವಾಗಿ ಮಾರ್ಪಾಡಾಗಲು ಚಿಂತನೆ ನಡೆಯುತ್ತಿದೆ.
ಈ ಹಿಂದೆ ವರ್ಷದಲ್ಲೊಮ್ಮೆ ಅಧಿವೇಶನ ಸಂದರ್ಭ ಹತ್ತದಿನೈದು ದಿವಸ ಮಾತ್ರ ರಾತ್ರಿಯ ಬೆಳಕಿನ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಸ್ಪೀಕರ್ ಖಾದರ್ ಅವರು ಅದರಲ್ಲಿ ಮಹತ್ತರ ಬದಲಾವಣೆಗೆ ಅಂಕಿತ ಹಾಕಿದ್ದಾರೆ. ಅಧಿವೇಶನ ನಡೆಯುವ ದಿನಗಳಲ್ಲದೇ ಪ್ರತಿ ಶನಿವಾರ ಮತ್ತು ಭಾನುವಾರ ಹಾಗೂ ರಾಷ್ಟ್ರೀಯ ದಿನಾಚರಣೆಗಳಂದು ಬಣ್ಣಬಣ್ಣದ ವಿನ್ಯಾಸದ ಬೆಳಕಿನೊಂದಿಗೆ ಸುವರ್ಣ ಸೌಧ ಕಂಗೊಳಿಸಲು ರೂಪುರೇಷೆಯನ್ನು ತಯಾರಿಸಿದ್ದಾರೆ. ರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಬೆಳಕಿನ ವ್ಯವಸ್ಥೆ ಮಾಡುತ್ತಿರುವ ಗುತ್ತಿಗೆದಾರರಿಗೆ 10 ವರ್ಷದ ಸುವರ್ಣಸೌಧದ ಬೆಳಕಿನ ನಿರ್ವಹಣೆ ಕೊಟ್ಟಿರುವ ಸ್ಪೀಕರ್ ಡಿಸೆಂಬರ್ 4 ಅಥವಾ 5 ರಂದು ಅದನ್ನು ಉದ್ಘಾಟಿಸುವರು.
RGBW ಎಲ್ಇಡಿ ಡೈನಾಮಿಕ್ ಲೈಟ್ ನೊಂದಿಗೆ ಮುಂದೆ ಸುವರ್ಣ ಸೌಧ ಕಂಗೊಳಿಸಲಿದೆ. ಬಗೆಬಗೆಯ ವಿನ್ಯಾಸ, ಹಲವು ಬಣ್ಣಗಳಲ್ಲಿ ಕಂಪ್ಯೂಟರೀಕೃತ ಸೌಲಭ್ಯದೊಂದಿಗೆ ಸೌಧದ ಅಂದ ನೂರ್ಮಡಿಗೊಳಿಸಲಿದೆ. ವಿಶೇಷ ಅಂದರೆ ಈ ಹಿಂದೆ ಹತ್ತದಿನೈದು ದಿನ ಉರಿದ ಬೆಳಕಿನ ಅದೇ ಖರ್ಚು ವೆಚ್ಚದಲ್ಲಿ ಈ ಡಿಜಿಟಲೈಸ್ಡ್ ಲೈಟ್ಸ್ ಕೂಡಾ ವರ್ಷಪೂರ್ತಿ ಬೆಳಗಲಿದೆ. ಹೀಗೇ 10 ವರ್ಷದ ಕರಾರನ್ನು ಈ ಯೋಜನೆಗೆ ನೀಡಲಾಗಿದೆ. ಸ್ಪೀಕರ್ ಯು.ಟಿ. ಖಾದರ್ ಅವರ ವಿನೂತನ ದೂರದೃಷ್ಟಿಯ ಯೋಜನೆಗೆ ಎಲ್ಲರೂ ಶಹಬ್ಬಾಸ್ ಗಿರಿ ವ್ಯಕ್ತಪಡಿಸಿದ್ದಾರೆ.