ಇತ್ತೀಚಿನ ಸುದ್ದಿ
ಬೆಳಗಾವಿಯಲ್ಲಿ ಭಾರಿ ಪ್ರವಾಹ: 10ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತ; ನೆರೆಗೆ ಕೊಚ್ಚಿ ಹೋದ ಇಬ್ಬರು ಗ್ರಾಮಸ್ಥರು
20/06/2021, 13:59

ಬೆಳಗಾವಿ(reporterkarnataka news)
ಕಳೆದ ಮೂರು ನಾಲ್ಕು ದಿನಗಳಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನೆರೆ ಪರಿಸ್ಥಿತಿ ತಲೆದೊರಿದೆ. ಅನೇಕ ಸೇತುವೆಗಳು ಮುಳುಗಿ ಹೋಗಿವೆ. 10ಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕ ಕಡಿದುಕೊಂಡಿದ್ದು, ಇಬ್ಬರು ಪ್ರವಾಹಕ್ಕೆ ಕೊಚ್ಚಿ ಹೋಗಿದ್ದಾರೆ.
ಗೋಕಾಕ್, ಚಿಕ್ಕೋಡಿ ಭಾಗದಲ್ಲಿ ಕೂಡ ಮಳೆ ಅಬ್ಬರ ಜೋರಾಗಿಯೇ ಇದೆ. ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ತಗ್ಗಿನ ಪ್ರದೇಶದ ಗ್ರಾಮಗಳಲ್ಲಿ ನೀರು ನುಗ್ಗುವ ಅಪಾಯ ಎದುರಾಗಿದೆ.
ಬೆಳಗಾವಿಯ ಮಲಪ್ರಭಾ ಮತ್ತು ಮಾರ್ಕಾಂಡೇಯ ನದಿಯ ಪ್ರವಾಹದಲ್ಲಿ ಇಬ್ಬರು ವ್ಯಕ್ತಿಗಳು ಕೊಚ್ಚಿ ಹೋಗಿದ್ದಾರೆ. ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ 3 ದಿನಗಳ ಕಾಲ ಭಾರಿ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದು ಜನರು ಕತ್ತಲೆಯಲ್ಲಿ ದಿನದೂಡುತ್ತಿದ್ದಾರೆ. ಬೆಳಗಾವಿಯ ಜೊತೆಗೆ ಕೊಡಗು ಮತ್ತು ಉತ್ತರ ಕನ್ನಡದಲ್ಲಿಯೂ ಭಾರಿ ಮಳೆಗೆ ಭೂಕುಸಿತಗಳು ಉಂಟಾಗಿವೆ.