ಇತ್ತೀಚಿನ ಸುದ್ದಿ
ಬೆಳಗಾವಿಯಲ್ಲಿ ಸನ್ ಶೈನಿಂಗ್: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪುತ್ರನ ರಾಜಕೀಯ ರಂಗ ಪ್ರವೇಶಕ್ಕೆ ಮುನ್ನುಡಿ
11/04/2022, 08:39
ಬೆಳಗಾವಿ(reporterkarnataka.com): ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯ ರಂಗದಲ್ಲಿ ಸನ್ ಶೈನಿಂಗ್ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ, ಆರ್. ಗುಂಡೂ ರಾವ್, ಎಸ್. ಬಂಗಾರಪ್ಪ ಅವರ ಪುತ್ರರೆಲ್ಲ ಈಗಾಗಲೇ ರಾಜಕೀಯ ರಂಗದಲ್ಲಿ ಮಿಂಚಲಾರಂಭಿಸಿದ್ದಾರೆ. ಅವರ ಜತೆಗೆ ಮಂತ್ರಿಗಳ, ಮಾಜಿ ಮಂತ್ರಿಗಳ, ಕೇಂದ್ರ ಸಚಿವರುಗಳ, ಮಾಜಿ ಕೇಂದ್ರ ಸಚಿವರುಗಳ ಪುತ್ರ, ಪುತ್ರಿಯರು ಕೂಡ ರಂಗಪ್ರವೇಶ ಈಗಾಗಲೇ ಮಾಡಿದ್ದಾರೆ. ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ ಅವರ ರಾಜಕೀಯ ಪ್ರವೇಶಕ್ಕೆ ಸಿದ್ದತೆ ನಡೆಯುತ್ತಿದೆ.
ಈ ನಿಟ್ಟಿನಲ್ಲಿ ಸತೀಶ್ ಜಾರಕಿಹೊಳಿ ಅವರ ಉಪಸ್ಥಿತಿಯಲ್ಲೇ ಪುತ್ರ ರಾಹುಲ್ ಜಾರಕಿಹೊಳಿ ಅವರ ಪತ್ರಿಕಾಗೋಷ್ಠಿ ನಡೆದಿದೆ. ಬೆಳಗಾವಿಯಲ್ಲಿರುವ ಸತೀಶ್ ಜಾರಕಿಹೊಳಿ ಅವರ ನಿವಾಸದ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆದಿದೆ. ಪುತ್ರ ರಾಹುಲ್ ಮಾಧ್ಯಮದ ಮಂದಿಯನ್ನು ಉದ್ದೇಶಿಸಿ ಮಾತನಾಡುವಾಗ ಪಕ್ಕದಲ್ಲೇ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರು ನಿಂತಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಜಾರಕಿಹೊಳಿ ಅವರು, ಸಮಾಜ ಸೇವೆಯೇ ನಮ್ಮ ಮುಖ್ಯಗುರಿಯಾಗಿದ್ದು ಸಮಾಜದ ಅಭಿವೃದ್ಧಿಗಾಗಿ ನನ್ನ ವೈಯಕ್ತಿಕ ಹಿತಾಸಕ್ತಿಗಳನ್ನು ತ್ಯಾಗ ಮಾಡುತ್ತೇನೆ ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ, ಏಪ್ರಿಲ್ 12 ಹಾಗೂ 13ರಂದು ಜಿಲ್ಲಾ ಪುರುಷ ಹಾಗೂ ಮಹಿಳಾ ಕಬಡ್ಡಿ ಪಂದ್ಯಾವಳಿಯನ್ನು ಸಿದ್ದೇಶ್ವರ ಪ್ರೌಢ ಶಾಲೆ ಮುಚ್ಚಂಡಿಯಲ್ಲಿ ನಡೆಸುವ ಕುರಿತು ಅವರು ವಿವರಣೆ ನೀಡಿದರು.
ಈಗಾಗಲೇ 65 ತಂಡಗಳು ತಮ್ಮ ಹೆಸರು ನೋಂದಾಯಿಸಿವೆ. ಅದರಲ್ಲಿ 10 ಮಹಿಳಾ ಕಬಡ್ಡಿ ತಂಡಗಳಿವೆ. ಆಟಗಾರರಿಗೆ ಊಟ, ವಸತಿ ಮತ್ತು ಕ್ರೀಡಾ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ಕ್ರೀಡಾ ವೀಕ್ಷಣೆಗೆ ಸುಮಾರು 3500 ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ನುಡಿದರು.
ವಿಜೇತರಿಗೆ ಪ್ರಥಮ ಬಹುಮಾನ 30 ಸಾವಿರ, ದ್ವಿತಿಯ ಬಹುಮಾನ 20 ಸಾವಿರ ಹಾಗೂ ತೃತೀ
ಯ ಬಹುಮಾನ 10 ಸಾವಿರ ರೂ.ನಗದು ನಿಗದಿ ಮಾಡಲಾಗಿದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಕೆಗಳಿಗೆ ನಮ್ಮ ತಂದೆ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದ್ದು ನಾವು ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದರು.
ಇನ್ನೂ ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿ ಎಲ್ಲವೂ ತಂದೆಯವರ ಮಾರ್ಗದರ್ಶನದಂತೆ ಎಂದು ಹೇಳುತ್ತಾ ರಾಜಕೀಯ ಪ್ರವೇಶದ ಸುಳಿವು ನೀಡಿದ್ದಾರೆ.