ಇತ್ತೀಚಿನ ಸುದ್ದಿ
Bantwal Bjp | ಬಿ.ಸಿ. ರೋಡ್: ಬಿಜೆಪಿ ಬಂಟ್ವಾಳ ಮಂಡಲ ವತಿಯಿಂದ ಸಹಕಾರಿ ಸಮಾವೇಶ
25/03/2025, 14:54

ಜಯಾನಂದ ಪೆರಾಜೆ ಬಂಟ್ವಾಳ
info.reporterkarnataka@gmail.com
ಸಹಕಾರಿ ಸಂಘದ ಚುನಾವಣೆಯ ಕಾರ್ಯವನ್ನು ಬಿಜೆಪಿ ಮಂಡಲ ಅತ್ಯಂತ ಯಶಸ್ವಿಯಾಗಿ ನಿಷ್ಠೆಯಿಂದ ನಿರ್ವಹಿಸಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಹೇಳಿದರು.
ಅವರು ಬಂಟ್ವಾಳ ಬಿಜೆಪಿ ಮಂಡಲದ ವತಿಯಿಂದ ಬಿ.ಸಿ. ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಸಹಕಾರಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಪಕ್ಷ ದೊಡ್ಡ ಪಕ್ಷವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಪ್ರತಿ ಚುನಾವಣೆಯಲ್ಲಿ ಸಣ್ಣ ಪುಟ್ಟ ಗೊಂದಲಗಳು ಸಹಜ. ಅವೆಲ್ಲವನ್ನೂ ಬದಿಗಿರಿಸಿ ನಿರೀಕ್ಷೆಗೂ ಮೀರಿ ಸಹಕಾರಿ ಕ್ಷೇತ್ರದಲ್ಲಿ ಗೆಲುವು ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಅರ್ಥಿಕವಾಗಿ ಗಟ್ಟಿ ಮಾಡುವುದರ ಜೊತೆ ಪಕ್ಷವನ್ನು ಸದೃಢಗೊಳಿಸಲು ಸಹಕಾರಿ ಕ್ಷೇತ್ರದ ಗೆಲುವು ಪೂರಕವಾಗಿವೆ ಎಂದು ತಿಳಿಸಿದ ಅವರು, ಗೊಂದಲಕ್ಕೆ ಅವಕಾಶ ಮಾಡಿಕೊಡದೆ ಪ್ರತಿ ಚುನಾವಣೆಯಲ್ಲಿ ಒಂದಾಗಿ ಕೆಲಸ ಮಾಡಿದರೆ ಮುಂದಿನ ಪ್ರತಿ ಚುನಾವಣೆಯ ಗೆಲುವು ನಮ್ಮದಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಹಕಾರಿ ಸಂಸ್ಥೆಯ ಜವಾಬ್ದಾರಿ ದೊಡ್ಡದಿದ್ದು, ನಿಷ್ಠೆಯಿಂದ ಮಾಡಿದರೆ ಪಕ್ಷಕ್ಕೂ ಒಳಿತಾಗಲಿದೆ ಎಂದು ಅವರು ತಿಳಿಸಿದರು.
ಸಂಸದ ಕ್ಯಾ.ಬೃಜೇಶ್ ಚೌಟ ಮಾತನಾಡಿ, ಸಹಕಾರಿ ಕ್ಷೇತ್ರ ಪ್ರಮುಖ ಪಾತ್ರವನ್ನು ರಾಷ್ಟ್ರನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ದಕ್ಷಿಣ ಕನ್ನಡ ಸಹಕಾರ ಕ್ಷೇತ್ರ ಅಧ್ಯಯನಯೋಗ್ಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಮಹತ್ವದ ಯೋಜನೆಗಳನ್ನು ನಿರ್ದಿಷ್ಟ ಗುರಿಯೊಂದಿಗೆ ನಿಜವಾದ ಅರ್ಥದಲ್ಲಿ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಹಕಾರಿ ಸಮಾವೇಶ ಮಾಡಲಾಗುತ್ತದೆ. ಬಳಿಕ ಕೇಂದ್ರ ಸಚಿವ ಅಮಿತ್ ಶಾ ಅವರು ಜಿಲ್ಲೆಗೆ ಬಂದಾಗ ಜಿಲ್ಲಾ ಮಟ್ಟದ ಸಮಾವೇಶ ಮಾಡಲಾಗುತ್ತದೆ ಎಂದರು. ಬಿಜೆಪಿಯ ಗೆಲುವಿನ ಓಟವನ್ನು ಬಲಾಢ್ಯ ರಾಜಕಾರಣಿಗಳು ವಿರೋಧ ಪಕ್ಷದಲ್ಲಿದ್ದರೂ ನಿಲ್ಲಿಸಲು ಸಾಧ್ಯವಿಲ್ಲ ಎಂದರು. ಸಹಕಾರ ಸಂಸ್ಥೆಗಳಲ್ಲಿ ಗೆದ್ದವರೂ ನಮ್ಮವರೇ, ಸೋತವರೂ ನಮ್ಮವರೇ ಆಗಿದ್ದಾರೆ ಎಂದರು.
ಜಿಲ್ಲೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಕ್ಕೂ ಪ್ರೇರಣಾದಾಯಕ ಶಕ್ತಿ ಬಂಟ್ವಾಳವಾಗಿದ್ದು, ಶಾಸಕ ರಾಜೇಶ್ ನಾಯ್ಕ್ ಅವರ ನೇತ್ರತ್ವವೇ ಕಾರಣ ಎಂದು ಅವರು ಹೇಳಿದರು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ, ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಸಹಕಾರಿ ಸಂಚಾಲಕ ರಾಜಾರಾಮ ಭಟ್ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್ ವಹಿಸಿದ್ದರು.
ಈ ಸಂದರ್ಭ ಸಹಕಾರಿ ರತ್ನ ರವೀಂದ್ರ ಕಂಬಳಿ ಅವರನ್ನು ಹಾಗೂ ಸಹಕಾರಿ ಸಂಘಗಳಿಗೆ ನಡೆದ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ಶ್ರಮಿಸಿದ ಪ್ರಕೋಷ್ಢದ ಸಂಚಾಲಕ ಜಯರಾಮ ರೈ ಅವರನ್ನು ಗೌರವಿಸಲಾಯಿತು.
ಅಭೂತಪೂರ್ವ ಗೆಲುವು ಸಾಧಿಸಿ, ಪಕ್ಷದಿಂದ ಗೌರವ ಸ್ವೀಕರಿಸಿದ ಸಹಕಾರಿ ಸಂಘಗಳ ಹೆಸರನ್ನು ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ ವಾಚಿಸಿದರು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಸಹಕಾರಿ ಸಂಘಗಳು ನಿರ್ದೇಶಕರಗಳಾಗಿ ಆಯ್ಕೆಯಾದ ನಿರ್ದೇಶಕರುಗಳಿಗೆ ಗೌರವಾರ್ಪಣೆ ಮಾಡಲಾಯಿತು. ಬಂಟ್ವಾಳ ಮಂಡಲ ಸಹಕಾರಿ ಪ್ರಕೋಷ್ಠ ಸಂಚಾಲಕ ಜಯರಾಮ ರೈ ಸ್ವಾಗತಿಸಿದರು. ಮಾತೇಶ್ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.