ಇತ್ತೀಚಿನ ಸುದ್ದಿ
Bangaluru | ಪತ್ರಿಕಾ ಸಂಪಾದಕರ ಕೈಕಟ್ಟಿ ಹಾಕಲಾಗುತ್ತಿದೆ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಖೇದ
29/07/2025, 21:40

ಬೆಂಗಳೂರು(reporterkarnataka.com): ಪತ್ರಿಕಾ ಸಂಪಾದಕರು ಈ ಹಿಂದೆ ನೇರ, ನಿಷ್ಠುರ ಹಾಗೂ ವಾಸ್ತವ ನೆಲೆಗಟ್ಟಿನ ಸತ್ಯಾಂಶಗಳನ್ನು ಬರೆಯುವ ಮೂಲಕ ಸಮಾಜವನ್ನು ತಿದ್ದುವ ಮತ್ತು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದರು. ಇಂದೂ ಈ ದಿಸೆಯಲ್ಲಿ ಮುಂದುವರಿದಿದ್ದಾರೆ. ಆದರೆ ಪ್ರಸ್ತುತ ಪತ್ರಿಕಾ ಸಂಪಾದಕರ ಕೈ ಕಟ್ಟಿ ಹಾಕುವ ಕೆಲಸ ನಡೆಯುತ್ತಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆಂಗೇರಿ ಬಸ್ ನಿಲ್ದಾಣದ ಕೆಂಗಲ್ ಹನುಮಂತಯ್ಯ ಸಾರಿಗೆ ಸಂಕೀರ್ಣದಲ್ಲಿರುವ ಕದಂಬ ಗೆಸ್ಟ್ ಲೈನ್ ಸಭಾಂಗಣದಲ್ಲಿ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ-2025 ಹಿರಿಯ ಪತ್ರಕರ್ತರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟನೆಗೆ ಮುನ್ನ ಮಾತನಾಡಿದ ಅವರು, ನಾವು ಬಾಲ್ಯದಲ್ಲಿದ್ದಾಗ ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ದಿ ಹಿಂದೂ ಮತ್ತು ಇಂಡಿಯನ್ ಎಕ್ಸ್ಪ್ರೆಸ್ ನಂತಹ ಹಳೆಯ ಪತ್ರಿಕೆಗಳನ್ನು ಓದಿಕೊಂಡು ಬೆಳೆದಿದ್ದೇವೆ. ನಂತರದಲ್ಲಿ ಹಲವಾರು ಪತ್ರಿಕೆಗಳು ಬಂದವು. ಎಲ್ಲವನ್ನೂ ಗಮನಿಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳ ಸಂಖ್ಯೆ ಹೆಚ್ಚಿದೆ. ಸಂಜೆ ದಿನಪತ್ರಿಕೆಗಳೂ ಹೆಚ್ಚಾಗಿವೆ. 20ಕ್ಕೂ ಹೆಚ್ಚು ನ್ಯೂಸ್ ಚಾನಲ್ ಗಳು ಮತ್ತು ಅನೇಕ ಯ್ಯೂಟ್ಯೂಬ್ ಚಾನಲ್ ಗಳೂ ಇವೆ. ಪತ್ರಿಕಾ ಮಾಧ್ಯಮ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆ ಆಗಿದೆ. ವಿದ್ಯುನ್ಮಾನ ಮಾಧ್ಯಮದಲ್ಲಿ ತತ್ ಕ್ಷಣದ ಸುದ್ದಿಗಳು ನೇರವಾಗಿ ಪ್ರಸಾರವಾದರೆ, ಮುದ್ರಣ ಮಾಧ್ಯಮದಲ್ಲಿ ಕೊಂಚ ತಡವಾಗಿ ಸುದ್ದಿಗಳು ಪ್ರಕಟವಾಗುತ್ತವೆ. ಸಮಾಜ ಮತ್ತು ಸರ್ಕಾರದಲ್ಲಿ ಏನೇ ಇದ್ದರೂ ಪತ್ರಿಕಾ ಮಾಧ್ಯಮಗಳು ಅವುಗಳನ್ನು ಎತ್ತಿ ತೋರಿಸುವ ಕೆಲಸ ಮಾಡಬೇಕು. ಸಮಾಜ ಮತ್ತು ಸರ್ಕಾರದಲ್ಲಿ ಬದಲಾವಣೆ ತರುವಂತಹ ನೇರ, ಸತ್ಯದ ಸುದ್ದಿಗಳನ್ನು ಪ್ರಕಟಿಸಿ, ಬಿತ್ತರಿಸಬೇಕೆಂದರು.
ಪತ್ರಕರ್ತರ ಸಂಘಕ್ಕೆ ಕಟ್ಟಡ ಒದಗಿಸಿಕೊಡಲು ಸೂಕ್ತ ನಿವೇಶನ ಬೇಕು ಎಂದು ಪತ್ರಕರ್ತರು ಮನವಿ ಸಲ್ಲಿಸಿದ್ದಾರೆ. ಈ ಭಾಗದ ಶಾಸಕರಾದ ಎಸ್.ಟಿ.ಸೋಮಶೇಖರ್ ಅವರು ಪತ್ರಕರ್ತರಿಗೆ ಅನುಕೂಲ ಮಾಡಿಕೊಡಲಿ. ನಾನೂ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಮಾನ್ಯತೆ ಕಾರ್ಡ್ ಹೊಂದಿರುವ ಪತ್ರಕರ್ತರಿಗೆ ಬೆಂಗಳೂರಿನಲ್ಲಿ ಸಂಚರಿಸಲು ಬಸ್ ಪಾಸ್ ಸೌಲಭ್ಯ ವಿತರಿಸಲು ಸಂಘದ ಅಧ್ಯಕ್ಷ ಶಿವಾನಂದ್ ತಗಡೂರು ಪತ್ರಕರ್ತರ ಪಟ್ಟಿ ಕೊಟ್ಟರೆ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಸ್ ಪಾಸ್ ಸೌಲಭ್ಯ ನೀಡುವುದಾಗಿ ಹೇಳಿದರು.
*ಬದಲಾವಣೆಗೆ ಮಿಡಿಯಬೇಕು:*
ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ ಅವರು ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ, ಸಂಘಟನೆ ಕೇವಲ ಪತ್ರಕರ್ತರಿಗೆ ಸೌಲಭ್ಯಗಳನ್ನು ಒದಗಿಸಲು ಮಾತ್ರ ಸೀಮಿತವಾಗಬಾರದು. ಯುವ ಪತ್ರಕರ್ತರಿಗೆ ತರಬೇತಿಗೊಳಿಸಬೇಕು. ದಿನೇ ದಿನೇ ಪತ್ರಿಕಾ ಕ್ಷೇತ್ರದಲ್ಲಿ ಬದಲಾವಣೆಗಳು ನಡೆಯುತ್ತಿರಬೇಕು. ಹೊಸ ಆವಿಷ್ಕಾರಗಳಿಗೆ ತೆರೆದುಕೊಳ್ಳುವ ಮನಃಸ್ಥಿತಿಯನ್ನು ಪತ್ರಕರ್ತರು ರೂಢಿಸಿಕೊಳ್ಳಬೇಕು. ಸತ್ಯಕ್ಕೆ ಹತ್ತಿರವಾದ ಸುದ್ದಿಗಳನ್ನು ಕೊಟ್ಟರೆ ಖಂಡಿತ ಜನರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ಇಂದಿನ ಸಾಮಾಜಿಕ ಜಾಲತಾಣಗಳು ಜಗತ್ತಿನ ಯಾವುದೇ ಮೂಲೆಗೂ ಸಂವಹನ ನಡೆಸುವಷ್ಟು ಕ್ಷಿಪ್ರವಾಗಿವೆ. ಅವುಗಳನ್ನು ಅಳವಡಿಸಿಕೊಂಡು ಸತ್ಯ ಮತ್ತು ಮಿಥ್ಯದ ಅವಲೋಕನ ಮಾಡಿಕೊಳ್ಳಬೇಕು. ಸೋಷಿಯಲ್ ಮೀಡಿಯಾದಲ್ಲಿ ಜನ ಸಾಮಾನ್ಯರೂ ಕೂಡ ಇಂದು ವರದಿಗಾರಿಕೆಯನ್ನು ಮಾಡುತ್ತಿದ್ದಾರೆ. ವಸ್ತುನಿಷ್ಠ ಮತ್ತು ವಾಸ್ತವಗಳನ್ನು ನಾವು ಅರಿತುಕೊಳ್ಳಬೇಕು. ಜನರು ಏನು ಬಯಸುತ್ತಾರೆ? ಎನ್ನುವುದನ್ನು ಕಂಡುಕೊಳ್ಳಬೇಕು. ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಂಡು ಸ್ವಯಂ ನಿಯಂತ್ರಣಕ್ಕೆ ಒಳಗಾಗಬೇಕು ಎಂದರು.
ಇಂದು ಟಿಸಿಎಸ್ ಮತ್ತು ಹೆಚ್‌ಸಿಎಲ್ ನಂತಹ ಕಂಪನಿಗಳಲ್ಲಿ 12 ಸಾವಿರ ಹುದ್ದೆಗಳನ್ನು ಕಡತಗೊಳಿಸಲಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ಓದಿಕೊಂಡಿರುತ್ತಾರೆ. ಅವರಿಗೆ ಉದ್ಯೋಗವೆಲ್ಲಿ? ಎಂದು ಸಂಬಂಧಿಸಿದ ಕಂಪನಿಗಳಿಗೆ ವಿಚಾರಿಸಿದಾಗ ಕೌಶಲ್ಯ ಇದ್ದವರಿಗೆ ಕೆಲಸಕ್ಕೆ ಕೊರತೆ ಇಲ್ಲ. ಕೌಶಲ್ಯ ಇಲ್ಲದವರಿಗೆ ಅವಕಾಶಗಳು ಕಡಿಮೆ ಎನ್ನುವ ನಿಜಾಂಶ ತಿಳಿಯಿತು. ಪತ್ರಿಕೋದ್ಯಮಕ್ಕೆ ಕಂಪ್ಯೂಟರ್ ಬಂದಾಗ ನಾವು ಇದನ್ನು ವಿರೋಧಿಸಿದ್ದೆವು. ಉದ್ಯೋಗ ಕಡಿತವಾಗುತ್ತದೆ ಎಂದುಕೊಂಡಿದ್ದೆವು. ಹಾಗೆ ನೋಡಿದರೆ ಕಂಪ್ಯೂಟರ್ ನಿಂದ ಉದ್ಯೋಗಾವಕಾಶಗಳು ಹೇರಳವಾಗಿವೆ. ಇಂದು ಬೀದಿ ಬದಿಯ ವ್ಯಾಪಾರಿಯೂ ಯುಪಿಐ ಸ್ಕಾö್ಯನ್ ಕೋಡ್ ಬಳಸುತ್ತಾನೆ. ಪತ್ರಕರ್ತರಾದ ನಾವೂ ಕೂಡ ಹೊಸ ತಾಂತ್ರಿಕತೆಗೆ ಒಗ್ಗಿಕೊಳ್ಳಬೇಕು. ಕ್ರಿಯಾಶೀಲ ಪತ್ರಕರ್ತ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕಾಗಿತ್ತು. ಈಗ ಸ್ವಂತ ಪತ್ರಿಕೆ, ಯ್ಯೂಟ್ಯೂಬ್ ಚಾನಲ್ ತೆರೆದು ಸಮಾಜಕ್ಕೆ ತಮ್ಮ ಕೌಶಲ್ಯ ವ್ಯಕ್ತಪಡಿಸುತ್ತಿದ್ದಾರೆ. ಪತ್ರಕರ್ತನೆಂದರೆ ಸಮಾಜ ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿರಬೇಕು. ಬದಲಾವಣೆಗೆ ಹೊಂದಿಕೊಂಡಿರುವವರು, ವಸ್ತುನಿಷ್ಠವಾಗಿರುವವರು ಈ ಕ್ಷೇತ್ರದಲ್ಲಿ ಉಳಿಯುತ್ತಾರೆ. ನಕಾರಾತ್ಮಕ ಗುಣಗಳನ್ನು ಬೆಳೆಸಿಕೊಳ್ಳದೇ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ದೀರ್ಘಕಾಲ ಪತ್ರಿಕಾ ಸಂಸ್ಥೆಗಳು ಉಳಿಯುವಂತಹ ರೀತಿಯಲ್ಲಿ ಜನರ ವಿಶ್ವಾಸ ಗಳಿಸಿಕೊಳ್ಳಬೇಕು. ಪತ್ರಿಕಾ ಸಂಸ್ಥೆಗಳು ಉಳಿಯಬೇಕೆಂದರೆ ಉತ್ತಮ ಸಹಪಾಠಿಗಳು, ಉತ್ತಮ ಪತ್ರಕರ್ತರು ಅವಶ್ಯಕ ಎಂದರು.
ಸವಾಲಿಗೆ ತಕ್ಕಂತೆ ನಾವು ಹೊಂದಿಕೊಳ್ಳಬೇಕು. ಜನಜೀವನದ ಮೇಲೆ ಆಗುವ ಬದಲಾವಣೆಗಳನ್ನು ನಾವು ನೋಡಿಕೊಳ್ಳಬೇಕು. ರಾಜಕೀಯ ಸಮಸ್ಯೆಗಳನ್ನು ದೊಡ್ಡದಾಗಿ ಬಿಂಬಿಸುವ ನಾವು ಸಮಾಜದಲ್ಲಿನ ಸಮಸ್ಯೆಗಳನ್ನೂ ಎತ್ತಿ ತೋರಿಸಿ, ಬದಲಾವಣೆಗೆ ಒಳಗೊಳ್ಳಬೇಕು. ನಮ್ಮ ನಮ್ಮಲ್ಲೇ ಕಾಲೆಳೆಯುವ ಗುಣಗಳನ್ನು ಹೊಂದುವುದಕ್ಕಿಂತ ವೃತ್ತಿ ಬಾಂಧವರ ಯೋಗಕ್ಷೇಮವನ್ನು ನೋಡಿಕೊಳ್ಳುವ ಸದ್ಗುಣಗಳನ್ನೂ ಅಳವಡಿಸಿಕೊಳ್ಳಬೇಕು. ಸಂಕಷ್ಟಗಳಿಗೆ ಸ್ಪಂದಿಸಬೇಕು. ಪತ್ರಿಕಾ ವಲಯಗಳಲ್ಲೂ ಸಾಕಷ್ಟು ಒಡಕುಗಳಿವೆ. ಅದನ್ನು ಸರಿಪಡಿಸಿಕೊಳ್ಳುವ ಕೆಲಸ ಆಗಬೇಕು. ಯುವ ಜನರಲ್ಲಿ ಸುದ್ದಿಗೆ ಸಂಬಂಧಿಸಿದಂತೆ ಕಾಗುಣಿತಗಳ ಕೊರತೆ ಇದೆ. ಅವರಿಂದ ಶುದ್ಧವಾದ ಕನ್ನಡ ಪದ ಬಳಕೆ ಕ್ಷೀಣಿಸುತ್ತಿದೆ. ಜರ್ನಲಿಸಂ ಕೋರ್ಸ್ ನಲ್ಲಿ ಬೋಧನೆ ವಿಧಾನ ಸಮರ್ಪಕವಾಗಿರಬೇಕು. ಹಾಗಾದಾಗ ಮಾತ್ರ ಯುವ ಪತ್ರಕರ್ತರು ಪತ್ರಿಕೋದ್ಯಮದಲ್ಲಿ ಉಳಿಯಲು ಸಾಧ್ಯ ಎಂದು ಅವರು ನುಡಿದರು.
*ಸುಳ್ಳು, ಜೊಳ್ಳು ಮತ್ತು ಪೊಳ್ಳುಗಳ ಹಾವಳಿ ನಿಲ್ಲಬೇಕು:*
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಬೆಂಗಳೂರು ನಗರ ಜಿಲ್ಲಾ ಘಟಕದ ಪತ್ರಕರ್ತರು ಕೌಶಲ್ಯಭರಿತರಿದ್ದಾರೆ. ಸಾಮಾಜಿಕ ಕಾರ್ಯ, ಕ್ರೀಡೆ, ಸಂಸ್ಕೃತಿ, ಕಲೆಗಳಲ್ಲಿ ಕರಗತರಾಗಿದ್ದಾರೆ. ಅವರು ಮನಸ್ಸು ಮಾಡಿದ್ದರೆ ಎಂದೋ ಸಂಘಕ್ಕೆ ಕಟ್ಟಡವನ್ನು ಹೊಂದಬಹುದಿತ್ತು ಎಂದರು. ಇಂದು ಪತ್ರಿಕಾ ಮಾಧ್ಯಮ ಕ್ಷೇತ್ರದಲ್ಲಿ ಅಕ್ಷರ ಬರೆಯಲು ಬಾರದವರು ಕೂಡ ನಾವು ಪತ್ರಕರ್ತರು ಎಂದು ಹೇಳಿಕೊಳ್ಳುತ್ತಿದ್ದಾರೆ. ವಿಸಿಟಿಂಗ್ ಕಾರ್ಡ್ ಉಳ್ಳ ಪತ್ರಕರ್ತರ ಸಂಖ್ಯೆ ಹೆಚ್ಚುತ್ತಿದೆ. ಈ ಕ್ಷೇತ್ರಕ್ಕೆ ಸುಳ್ಳು, ಪೊಳ್ಳು, ಜೊಳ್ಳು ಪತ್ರಕರ್ತರು ಬರುತ್ತಿದ್ದಾರೆ. ಅವರಿಗೆ ಸದಸ್ಯತ್ವ ಕೊಡಬೇಕೋ, ಬೇಡವೋ ಅರ್ಥವಾಗುತ್ತಿಲ್ಲ. ಕಾರ್ಯನಿರತರಿಗೆ ಮಾತ್ರ ಈ ಸಂಘ ಇದೆ. ನಗರ ಪತ್ರಕರ್ತರಿಗೆ ಎಲ್ಲ ಶಕ್ತಿ ಇದ್ದು ಸಂಘಕ್ಕಾಗಿ ಒಂದು ಕಾರ್ಪೋರೇಟ್ ಮಟ್ಟದ ಕಟ್ಟಡ ನಿರ್ಮಿಸಿಕೊಳ್ಳಬೇಕು ಎಂದರು. ಪತ್ರಿಕಾ ಮಾಧ್ಯಮ ನಾಲ್ಕು ಅಂಗಳಲ್ಲಿ ಪ್ರಮುಖವಾಗಿದ್ದು ಇಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರೂ ಕೂಡ ಪತ್ರಿಕಾ ರಂಗದ ಮುಂದೆ ಬರುತ್ತಿದ್ದಾರೆ. ಒಬ್ಬರ ಕಣ್ಣೀರು ಒರೆಸುವ, ನ್ಯಾಯ ಕೊಡಿಸುವುದಾದರೆ ನಮ್ಮ ವೃತ್ತಿಯಲ್ಲಿ ಸಾರ್ಥಕತೆ ಬರುತ್ತದೆ ಎಂದರು.
*ಪತ್ರಕರ್ತರಿಗೆ ನಿವೇಶನ:*
ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಸುರಕ್ಷತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಪತ್ರಕರ್ತರ ಸಂಘಕ್ಕೆ ಕಟ್ಟಡದ ಅವಶ್ಯಕತೆ ಇದೆ. ನಿವೇಶನಕ್ಕಾಗಿ ಒಂದೆರಡು ದಿನ ಬಿಟ್ಟು ನನ್ನ ಕಚೇರಿಗೆ ಬಂದರೆ ಬಿಡಿಎ ಅಧಿಕಾರಿಗಳನ್ನು ಸ್ಥಳಕ್ಕೆ ಆಹ್ವಾನಿಸಿ ನಿವೇಶನ ಕೊಡಿಸುವ ಪ್ರಯತ್ನ ಮಾಡುತ್ತೇನೆ. ಪತ್ರಕರ್ತರು ಸರ್ಕಾರಕ್ಕೆ ನಿರ್ದೇಶನ ಮಾಡಬೇಕು ಮತ್ತು ಈ ಕುರಿತು ನಿರಂತರ ಪ್ರಯತ್ನವನ್ನು ಮುಂದುವರಿಸಿದರೆ ಮುಂದಿನ ವರ್ಷದಲ್ಲಿ ಶಂಕುಸ್ಥಾಪನೆ ಮಾಡಲು ಸಾಧ್ಯ. ಉಪಮುಖ್ಯಮಂತ್ರಿಗಳು ಈಗಾಗಲೇ ಸಿಎ ಸೈಟ್‌ಗಳಿಗೆ ನೋಟಿಫಿಕೇಶನ್ ಕೊಡಿಸಿದ್ದಾರೆ. ಪತ್ರಕರ್ತರು ನಿರಂತರ ಪ್ರಯತ್ನ ಮುಂದುವರಿಸಿದರೆ ಅಧಿಕಾರಿಗಳು ಮತ್ತು ಸರ್ಕಾರದ ಸಹಯೋಗದಲ್ಲಿ ನಿವೇಶನ ದೊರೆಯುತ್ತದೆ ಎಂದರು.
*ಎ-ಐ ತಾಂತ್ರಿಕತೆಯಿಂದ ಆತಂಕ:*
ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಪತ್ರಕರ್ತರಾದವರು ತಮ್ಮ ತಪ್ಪುಗಳನ್ನು ಆತ್ಮಾವಲೋಕನ ಮಾಡಿಕೊಂಡು ಮುಂದೆ ಹೋದರೆ ಪತ್ರಿಕಾ ದಿನಾಚರಣೆಗೆ ಒಂದು ಅರ್ಥ ಬರುತ್ತದೆ. ಈ ಕ್ಷೇತ್ರದಲ್ಲಿ ಪತ್ರಕರ್ತರಲ್ಲದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದರ ನಿಯಂತ್ರಣಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಬಿಲ್ ಪಾಸ್ ಮಾಡುವುದಾಗಿ ಹೇಳಿದ್ದಾರೆ. ಸರ್ಕಾರದಿಂದ ಪಾಸ್ ಆಗುವ ಬಿಲ್ ಪತ್ರಕರ್ತರ ಗೌಪ್ಯತೆ, ಘನತೆ, ಸ್ವಾತಂತ್ರ್ಯಕ್ಕೆ ವ್ಯತಿರಿಕ್ತವಾಗಿದ್ದರೆ ಖಂಡಿತವಾಗಿಯೂ ಈ ಬಿಲ್ ವಿರುದ್ಧವಾಗಿ ರಾಜ್ಯಾದ್ಯಂತ ಚಳುವಳಿ ರೂಪಿಸುವುದಾಗಿ ಎಚ್ಚರಿಸಿದರು. ಎಲ್ಲ ಕ್ಷೇತ್ರಗಳಲ್ಲೂ ಇಂದು ಬದಲಾವಣೆಗಳಾಗಿವೆ. ನಮ್ಮಲ್ಲೂ ಬದಲಾವಣೆಗಳಾಗಬೇಕು. ಎಲ್ಲ ಕ್ಷೇತ್ರಗಳೂ ಮಾರ್ಕೆಟಿಂಗ್ ವ್ಯವಸ್ಥೆಯಲ್ಲಿವೆ. ಪತ್ರಕರ್ತರು ತಮ್ಮನ್ನು ತಿದ್ದಿಕೊಂಡು ತಮ್ಮ ವ್ಯಕ್ತಿತ್ವ ಮತ್ತು ವೃತ್ತಿ ಪಾವಿತ್ರತೆಯನ್ನು ಕಾಪಾಡಿಕೊಳ್ಳಬೇಕೆಂದರು. ಎ-ಐ ಬಂದ ಮೇಲೆ ನಮ್ಮ ಭವಿಷ್ಯದ ಬಗ್ಗೆ ಆತಂಕ ಉಂಟಾಗಿದೆ. ಎ-ಐ ಮಾನವ ಬುದ್ಧಿ ಶಕ್ತಿ ಮೀರಿದ್ದಲ್ಲದಿದ್ದರೂ ಆ ಭೀತಿ ಎದುರಾಗಿದೆ ಎಂದರು.
*ಪತ್ರಕರ್ತರಿಗೆ ಸನ್ಮಾನ-ಪ್ರತಿಭಾನ್ವಿತರಿಗೆ ಪುರಸ್ಕಾರ:*
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ರಾಜ್ಯ ಖಜಾಂಚಿ ವಾಸುದೇವ ಹೊಳ್ಳ ಮತ್ತು ಪದಾಧಿಕಾರಿಗಳು ವಿಜಯವಾಣಿಯ ನಿವೃತ್ತ ಸಹಾಯಕ ಸಂಪಾದಕ ವೀರಣ್ಣ ಜಿ., ವಿಜಯ ಕರ್ನಾಟಕ ಬೆಂಗಳೂರು ಸ್ಥಾನಿಕ ಸಂಪಾದಕ ಶಿವರಾಮ, ಪ್ರಜಾವಾಣಿ ನಿವೃತ್ತ ಸಹಾಯಕ ಸಂಪಾದಕ ಎಂ.ನಾಗರಾಜ್, ಹಿರಿಯ ಪತ್ರಕರ್ತೆ ಡಾ.ಆಶಾ ಕೃಷ್ಣಸ್ವಾಮಿ, ರಾಜ್ ನ್ಯೂಸ್ ನ ಹೆಚ್ ಜಿ ಶ್ರೀನಿವಾಸ್, ಗಗನ ಕುಸುಮ ಪತ್ರಿಕೆಯ ಸಂಪಾದಕ ಎಂ.ಪಿ.ಶರತ್ ಚಂದ್ರ ಮತ್ತು ಹಿರಿಯ ಪತ್ರಕರ್ತ ಕೆ.ಎನ್.ಜಯಸಿಂಹ ಅವರಿಗೆ ಸನ್ಮಾನಿಸಿ ಗೌರವಿಸಿದರು. ಇದೇವೇಳೆ ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸ್ವರ ಚಿಂತನ ಮ್ಯೂಸಿಕೆ ಇವೆಂಟ್ಸ್ ನ ವೀರೇಶ್ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.
ಸಂಘದ ಉಪಾಧ್ಯಕ್ಷ ಎನ್. ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ, ಕೆ.ಆರ್.ದೇವರಾಜ್, ಉಪಾಧ್ಯಕ್ಷರಾದ ಕೆ.ಎನ್.ಜಕ್ರಿಯಾ, ಆರ್.ಜಯಕುಮಾರ್, ಪ್ರಧಾನ ಕಾರ್ಯದರ್ಶಿ ನರೇಂದ್ರ ಎಂ.ಪಾರೆಕಟ್, ರುದ್ರಸ್ವಾಮಿ ಅರ್., ಹೆಚ್ ಕೆ ಬಸವರಾಜ್, ಎಸ್.ಡಿ.ಚಿಕ್ಕಣ್ಣ, ಕೆ.ಎಲ್.ಲೋಕೇಶ್, ಹರೀಶ್ ಕೆ., ಟಿ.ಮೋಹನ್, ಕೆ.ವಿ.ಪರಮೇಶ್, ವೈ.ಎಸ್.ಎಲ್.ಸ್ವಾಮಿ, ಕೆ.ಯು.ವೆಂಕಟೇಶ್, ರಮೇಶ್ ಎಂ., ಡಿ.ಎಲ್.ಹರೀಶ್, ಮು.ವೆಂಕಟೇಶಯ್ಯ, ಕೆ.ಎಸ್.ಸ್ವಾಮಿ, ನರಸಿಂಹರಾಜು ಎಚ್., ನಾಗರಾಜ್ ಶೆಟ್ಟಿ, ಕೃಷ್ಣೇಗೌಡ, ಎ.ಬಿ.ಶಿವರಾಜು, ಗೋದಾವರಿ, ಡಿ.ಎಸ್., ನಾಮನಿರ್ದೇಶಿತ ಸದಸ್ಯರಾದ ಜಿ.ಟಿ.ಶ್ರೀನಿವಾಸ್, ಬಿ.ಸಿ.ಜಗಧೀಶ, ಎ.ವಿಜಯಕುಮಾರ್, ಆರ್.ವೆಂಕಟಮುನಿ ಇನ್ನಿತರರು ಇದ್ದರು.