ಇತ್ತೀಚಿನ ಸುದ್ದಿ
Bangalore | 4 ಲಕ್ಷ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಇನ್ಸ್‌ಪೆಕ್ಟರ್ ಗೋವಿಂದರಾಜು; ಲಾಕ್ ಆಗ್ತಿದ್ದಂತೆ ಡ್ರಾಮಾ ಶುರು
30/01/2026, 20:16
ಗಿರಿಧರ್ ಕೊಂಪುಳಿರ ಬೆಂಗಳೂರು
info.reporterkarnataka@gmail.com
ರಾಜಧಾನಿಯಲ್ಲಿ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲಂಚ ಸ್ವೀಕರಿಸುತ್ತಿದ್ದ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಲಂಚ ಸ್ವೀಕರಿಸುತ್ತಿದ್ದ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಚಾಮರಾಜಪೇಟೆಯ ಸಿಎಆರ್ (CAR) ಮೈದಾನದಲ್ಲಿ ನಡೆದ ಈ ಟ್ರ್ಯಾಪ್ ವೇಳೆ ಇನ್ಸ್‌ಪೆಕ್ಟರ್ ಗೋವಿಂದರಾಜು ಲೋಕಾಯುಕ್ತ ಪೊಲೀಸರ ವಿರುದ್ಧವೇ ಕೂಗಾಡಿ ರಂಪಾಟ ನಡೆಸಿದ ಘಟನೆ ನಡೆದಿದೆ. ರಂಪಾಟ ನಡೆಸಿದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
*ಘಟನೆಯ ಹಿನ್ನೆಲೆ ಏನು:?*
ಈ ಪ್ರಕರಣವು ಹಣ ಹೂಡಿಕೆಗೆ ಸಂಬಂಧಿಸಿದ ವಂಚನೆ ಪ್ರಕರಣದಿಂದ ಆರಂಭವಾಗಿದೆ. ಧನರಾಜ್ ಎಂಬುವವರು ಕೆ.ಪಿ.ಅಗ್ರಹಾರ ಠಾಣೆಗೆ ದೂರು ನೀಡಿದ್ದರು. ಹಣ ಹೂಡಿಕೆ ಮಾಡಿದರೆ ಲಾಭ ಬರುತ್ತದೆ ಎಂದು ನಂಬಿಸಿ ಸೂರಜ್, ಸುಜನ್ ಮತ್ತು ಶ್ರೀನಿವಾಸ್ ಎಂಬುವವರು ಧನರಾಜ್ ಅವರಿಂದ 19 ಲಕ್ಷ ರೂಪಾಯಿ ಪಡೆದು ವಂಚಿಸಿದ್ದರು. ಹಣ ವಾಪಸ್ ಕೇಳಿದಾಗ ಆರೋಪಿಗಳು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಸಂಬಂಧ ಜನವರಿ 22ರಂದು ಕೆ.ಪಿ. ಅಗ್ರಹಾರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
*ಇನ್ಸ್‌ಪೆಕ್ಟರ್ ವಿರುದ್ಧದ ಆರೋಪ ಏನು..?:*
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸೂರಜ್ ಮತ್ತು ಸುಜನ್ ಮನೆಗೆ ಇನ್ಸ್‌ಪೆಕ್ಟರ್ ಗೋವಿಂದರಾಜು ನೇತೃತ್ವದ ತಂಡ ತೆರಳಿತ್ತು. ಈ ವೇಳೆ ಪೊಲೀಸರು ಮತ್ತು ಆರೋಪಿಗಳ ನಡುವೆ ಗಲಾಟೆ ನಡೆದಿತ್ತು. ಬಳಿಕ ಠಾಣೆಯಲ್ಲಿ ಪ್ರಕರಣವನ್ನು ಡೀಲ್ ಮಾಡಲು ಮುಂದಾದ ಇನ್ಸ್‌ಪೆಕ್ಟರ್ ಗೋವಿಂದರಾಜು, ಬಡ್ಸ್ ಕಾಯ್ದೆಯಡಿ ದಾಖಲಾಗಿರುವ ಕೇಸ್‌ನಿಂದ ಬಿಡಿಸಲು ಮತ್ತು ಬಂಧಿಸದಿರಲು 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
*ಲೋಕಾಯುಕ್ತ ಬಲೆಗೆ ಬಿದ್ದಿದ್ದು ಹೇಗೆ:?*
ಆರೋಪಿಗಳ ಕಡೆಯವರಾದ ಮೊಹಮ್ಮದ್ ಅಕ್ಬರ್ ಎಂಬುವವರು ನೀಡಿದ ದೂರಿನನ್ವಯ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್
ದೇವರಾಜು ನೇತೃತ್ವದಲ್ಲಿ ಟ್ರ್ಯಾಪ್ ಪ್ಲಾನ್ ಮಾಡಲಾಗಿತ್ತು.
ಇನ್ಸ್‌ಪೆಕ್ಟರ್ ಗೋವಿಂದರಾಜು ಈಗಾಗಲೇ 1 ಲಕ್ಷ ರೂಪಾಯಿ ಲಂಚ ಪಡೆದಿದ್ದರು.
ಉಳಿದ 4 ಲಕ್ಷ ರೂಪಾಯಿ ಪಡೆಯಲು ಚಾಮರಾಜಪೇಟೆಯ ಸಿಎಆರ್ ಮೈದಾನಕ್ಕೆ ಬಂದಿದ್ದರು.
ಹಣ ಸ್ವೀಕರಿಸುತ್ತಿದ್ದಂತೆಯೇ ಲೋಕಾಯುಕ್ತ ಪೊಲೀಸರು ಸುತ್ತುವರಿದರು.
*ಮೈದಾನದಲ್ಲಿ ಇನ್ಸ್‌ಪೆಕ್ಟರ್ ರಂಪಾಟ..!:*
ಲೋಕಾಯುಕ್ತ ಪೊಲೀಸರು ತನ್ನನ್ನು ಹಿಡಿಯುತ್ತಿದ್ದಂತೆಯೇ ಇನ್ಸ್‌ಪೆಕ್ಟರ್ ಗೋವಿಂದರಾಜು ಕೂಗಾಡಲು ಶುರು ಮಾಡಿದರು. “ನಾನು ನಿಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿಲ್ಲ ಸರ್” ಎಂದು ಜೋರಾಗಿ ಕಿರುಚುತ್ತಾ ಹೈಡ್ರಾಮಾ ಸೃಷ್ಟಿಸಿದರು. ಆದರೆ ಲೋಕಾಯುಕ್ತ ಪೊಲೀಸರು ಇನ್ಸ್‌ಪೆಕ್ಟರ್ ಅನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
*ಲೋಕಾಯುಕ್ತ ಎಸ್‌ಪಿ ಹೇಳಿಕೆ:*
“ಪ್ರಿವೆನ್ಷನ್ ಆಫ್ ಕರಪ್ಷನ್ ಆ್ಯಕ್ಟ್ ಅಡಿ ನಾವು ಟ್ರ್ಯಾಪ್ ಮಾಡಿದ್ದೇವೆ. ಕೆ.ಪಿ. ಅಗ್ರಹಾರ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರು 5 ಲಕ್ಷ ಹಣ ಡಿಮ್ಯಾಂಡ್ ಮಾಡಿದ್ದರು. ಉಳಿದ 4 ಲಕ್ಷ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣದಲ್ಲಿ ಇನ್ನು ಕೆಲವು ಅಧಿಕಾರಿಗಳ ಭಾಗಿಯಾಗಿರುವ ಸಾಧ್ಯತೆಯಿದ್ದು, ತನಿಖೆ ನಡೆಸುತ್ತಿದ್ದೇವೆ” ಎಂದು ಎಸ್‌ಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.
ಮತ್ತೊಂದೆಡೆ, ಆರೋಪಿಗಳು ತಾವು ಈಗಾಗಲೇ ಹಣವನ್ನು ವಾಪಸ್ ಕೊಟ್ಟಿದ್ದೇವೆ ಮತ್ತು ಇದು ಸಿವಿಲ್ ಪ್ರಕರಣವಾಗಿದ್ದರೂ ಬರ್ಡ್ಸ್ ಆ್ಯಕ್ಟ್ ಹಾಕಲಾಗಿದೆ ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಇನ್ಸ್‌ಪೆಕ್ಟರ್ ಗೋವಿಂದರಾಜು ಲೋಕಾಯುಕ್ತ ಅತಿಥಿಯಾಗಿದ್ದಾರೆ.












