10:58 AM Friday6 - March 2026
ಬ್ರೇಕಿಂಗ್ ನ್ಯೂಸ್
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನವೀಕೃತ, ವಿಸ್ತೃತ, ಹವಾನಿಯಂತ್ರಿತ ಬಿ.ಸಿ. ರೋಡ್ ಶಾಖೆ… ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಆರತಕ್ಷತೆ: ಶುಭ ಹಾರೈಸಿದ ಡಿಕೆಶಿ- ಪೊನ್ನಣ್ಣ ಬೇಡ್ತಿ ಸಮೀಪ ಕೆಎಸ್ಸಾರ್ಟಿಸಿ ಬಸ್ -ಕಾರು ಡಿಕ್ಕಿ,: ಮಂಗಳೂರಿನ ಉದ್ಯಮಿ ಸಾವು ದನದ ಅವಶೇಷ ಪತ್ತೆ: ಕೊಪ್ಪ-ತೀರ್ಥಹಳ್ಳಿ ರಾಷ್ಟಿಯ ಹೆದ್ದಾರಿ ತಡೆದು ಭಜರಂಗ ದಳ ಕಾರ್ಯಕರ್ತರ… ಡಿಕೆಶಿ ಮೇಲೆ ಕಣ್ಗಾವಲು | ಎಚ್ ಡಿಕೆ, ಆರ್. ಅಶೋಕ್ ಹೇಳಿಕೆ ‘’ತಾ… ಚೆನ್ನೈ ವಿಶೇಷ ಸಮಾವೇಶದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್: ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಕುರಿತು… ಚೆನ್ನಪಟ್ಟಣ | ಕೊಡಗಿನ ಸಾಕಾನೆಗಳ ಯಶಸ್ವಿ ಕಾರ್ಯಾಚರಣೆ: ನಿರಂತರ ಉಪಟಳ ನೀಡುತ್ತಿದ್ದ ಮಕ್ನಾ… ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ…

ಇತ್ತೀಚಿನ ಸುದ್ದಿ

Bangalore | ಯಜಮಾನಿಯರಿಂದ “ಗೃಹಲಕ್ಷ್ಮೀ ಸಂಘ” ರಚನೆಗೆ ಕಾರ್ಯಯೋಜನೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

22/05/2025, 20:21

*ಸ್ವಸಹಾಯ/ಸ್ತ್ರೀ ಶಕ್ತಿ ಮಾದರಿಯಲ್ಲಿ ಗುಂಪುಗಳ ರಚನೆ ಕುರಿತು ಅಧಿಕಾರಿಗಳ ಸಭೆ ನಡೆಸಿದ ಸಚಿವರು*

ಬೆಂಗಳೂರು(reporterkarnataka.com): ಗೃಹಲಕ್ಷ್ಮೀ ಯಜಮಾನಿಯರನ್ನು ಆರ್ಥಿಕವಾಗಿ ಮತ್ತಷ್ಟು ಸದೃಢರನ್ನಾಗಿ ಮಾಡುವ ಉದ್ದೇಶದಿಂದ “ಗೃಹಲಕ್ಷ್ಮೀ ಸಂಘ” ಗಳನ್ನು ರಚಿಸಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ವಿಧಾನಸೌಧದಲ್ಲಿ ಗುರುವಾರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರಿಂದ ಸ್ವಸಹಾಯ/ಸ್ತ್ರೀ ಶಕ್ತಿ ಗುಂಪುಗಳನ್ನು ರಚಿಸುವ ಸಂಬಂಧ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ‘ಗೃಹಲಕ್ಷ್ಮಿ’ ಸಂಘವನ್ನು ರಚಿಸಲಾಗುವುದು ಎಂದರು.
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 1.25 ಕೋಟಿ ಫಲಾನುಭವಿಗಳಿದ್ದಾರೆ. ಪ್ರತಿ ತಿಂಗಳು ಸಂದಾಯ ಆಗುತ್ತಿರುವ 2 ಸಾವಿರ ರೂಪಾಯಿ ಹಣವನ್ನು ಇನ್ನಷ್ಟು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಸಂಘಗಳನ್ನು ರಚಿಸಲಾಗುವುದು. ಈ ಮೂಲಕ ಗೃಹಲಕ್ಷ್ಮಿ ಯಜಮಾನಿಯರನ್ನು ಆರ್ಥಿಕವಾಗಿ ಮತ್ತಷ್ಟು ಸದೃಢರನ್ನಾಗಿ ಮಾಡುವುದೇ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಈ ಹಿಂದೆ ಮೋಟಮ್ಮನವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದಾಗ ಸ್ತ್ರೀಶಕ್ತಿ ಸಂಘಗಳನ್ನು ಹುಟ್ಟುಹಾಕಿ, ಮಹಿಳೆಯರಲ್ಲಿ ಆರ್ಥಿಕ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದರು. ಅದೇ ರೀತಿ ಈಗ ಗೃಹಲಕ್ಷ್ಮಿ ಸಂಘಗಳ ಮೂಲಕ ಕುಟುಂಬದ ಯಜಮಾನಿಯರಲ್ಲಿ ಆರ್ಥಿಕ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಸಂಘ ರಚಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಗೃಹಲಕ್ಷ್ಮಿ ಸಂಘಗಳನ್ನು ಆಯ್ದ ನಾಲ್ಕೈದು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲು ಉದ್ದೇಶ ಹೊಂದಲಾಗಿದೆ. ನಂತರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಗರ- ಗ್ರಾಮೀಣ ಪ್ರದೇಶಗಳಲ್ಲಿ ಗೃಹಲಕ್ಷ್ಮೀ ಸಂಘಗಳನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದು ಸಚಿವರು ನುಡಿದರು.


ರಾಜ್ಯದಲ್ಲಿ ಅಂಗನವಾಡಿಗಳು ಅಸ್ತಿತ್ವಕ್ಕೆ ಬಂದು ಐವತ್ತು ವರ್ಷಗಳಾಗಿವೆ. ಹಾಗಾಗಿ, ಇಲಾಖೆ ವತಿಯಿಂದ ‘ಅಂಗನವಾಡಿಗಳ ಸುವರ್ಣೋತ್ಸವ’ ವನ್ನು ಅಕ್ಟೋಬರ್ ತಿಂಗಳಿನಲ್ಲಿ ಆಚರಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಮೈಸೂರು ಅಥವಾ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಅದೇ ಸಂದರ್ಭದಲ್ಲಿ ಗೃಹಲಕ್ಷ್ಮಿ ಸಂಘಗಳನ್ನು ಉದ್ಘಾಟಿಸಲಾಗುವುದೆಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಇಲಾಖೆಯ ಕಾರ್ಯದರ್ಶಿ ಡಾ.ಶಾಮ್ಲಾ‌ ಇಕ್ಬಾಲ್, ಕೌಶಲ್ಯ ಅಭಿವೃದ್ಧಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕಿ ಶ್ರೀವಿದ್ಯಾ, ECDC ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ದಿಲೀಶ್ ಸಸಿ, ಇಲಾಖೆಯ ನಿರ್ದೇಶಕ ಟಿ. ರಾಘವೇಂದ್ರ, ಸಚಿವರ ಆಪ್ತ ಕಾರ್ಯದರ್ಶಿ ಡಾ.ಟಿ.ಎಚ್.ವಿಶ್ವನಾಥ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಇಲಾಖೆಯ ಜಂಟಿ ನಿರ್ದೇಶಕ ಬಿ.ಎಚ್.ನಿಶ್ಚಲ್, ಇಲಾಖೆಯ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು