ಇತ್ತೀಚಿನ ಸುದ್ದಿ
Bangalore | ರಿಕ್ಕಿ ರೈ ಲ್ಯಾಂಬೋರ್ಗಿನಿ ಕಾರು ಸೀಜ್: 35 ಲಕ್ಷ ದಂಡ
04/04/2026, 16:58
ಬೆಂಗಳೂರು(reporterkarnataka.com): ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಅವರಿಗೆ ಸೇರಿದ ಲ್ಯಾಂಬೋರ್ಗಿನಿ ಕಾರಿಗೆ ಮತ್ತೆ ಕಾನೂನು ತೊಡಕು ಉಂಟಾಗಿದೆ. ನಕಲಿ ನಂಬರ್ ಪ್ಲೇಟ್ ಬಳಸಿದ ಹಿನ್ನಲೆಯಲ್ಲಿ ಆರ್ಟಿಒನಿಂದ 35 ಲಕ್ಷ ರೂ. ದಂಡ ವಿಧಿಸಿದ್ದರೂ, ನಿಯಮ ಉಲ್ಲಂಘಿಸಿ ಡ್ರಿಫ್ಟಿಂಗ್ ಮಾಡಿದ್ದರಿಂದ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.
ರಿಕ್ಕಿ ರೈ ಅವರು ದೆಹಲಿಯಲ್ಲಿ ಲ್ಯಾಂಬೋರ್ಗಿನಿ ಕಾರನ್ನು ಖರೀದಿ ಮಾಡಿದ್ದರು. ಬಳಿಕ ಈ ಕಾರಿಗೆ ಕರ್ನಾಟಕದ ನೋಂದಣಿ ಸಂಖ್ಯೆ ಪಡೆಯಲು ಆರ್ಟಿಒ ಮೂಲಕ ಬರೋಬ್ಬರಿ 5 ಲಕ್ಷ ರೂಪಾಯಿ ನೀಡಿ ‘KA 05 NR 0009’ ಎಂಬ ಫ್ಯಾನ್ಸಿ ನಂಬರ್ ಅನ್ನು ಕಾಯ್ದಿರಿಸಿದ್ದರು. ಆದರೆ, ಈ ನಂಬರ್ ಅನ್ನು ಅಧಿಕೃತವಾಗಿ ಕಾರಿಗೆ ರಿಜಿಸ್ಟರ್ ಮಾಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಲಿಲ್ಲ.
ಆರ್ಟಿಒ ದಾಖಲೆಗಳಲ್ಲಿ ಈ ಸಂಖ್ಯೆ ಇನ್ನೂ ಅಧಿಕೃತವಾಗಿ ನೋಂದಣಿಯಾಗಿಲ್ಲದಿದ್ದರೂ, ರಿಕ್ಕಿ ರೈ ಅವರು ಇದೇ ನಂಬರ್ ಪ್ಲೇಟ್ ಅನ್ನು ಕಾರಿಗೆ ಅಳವಡಿಸಿಕೊಂಡು ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಇದು ಕಾನೂನಿನ ಪ್ರಕಾರ ವಂಚನೆ ಮತ್ತು ನಿಯಮಬಾಹಿರ ಕೃತ್ಯವಾಗಿದೆ.
ನೋಂದಣಿ ಮಾಡಿಸದ ನಂಬರ್ ಪ್ಲೇಟ್ ಬಳಸಿದ್ದಕ್ಕಾಗಿ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಆರ್ಟಿಒ ಅಧಿಕಾರಿಗಳು ರಿಕ್ಕಿ ರೈ ಅವರಿಗೆ ಬರೋಬ್ಬರಿ 35 ಲಕ್ಷ ರೂಪಾಯಿ ದಂಡ ವಿಧಿಸಿದ್ದರು.
ದಂಡ ಪಾವತಿಸಿ ನೋಂದಣಿ ಪ್ರಕ್ರಿಯೆ ಮುಗಿಸುವ ಬದಲಿಗೆ ರೈ ಅವರು ಅದೇ ಕಾರಿನಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ‘ಡ್ರಿಫ್ಟಿಂಗ್’ ಮಾಡುವ ಮೂಲಕ ಸಾಹಸ ಪ್ರದರ್ಶನಕ್ಕೆ ಇಳಿದಿದ್ದರು. ಈ ವೇಳೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಕಾರನ್ನು ಸೀಜ್ ಮಾಡಿದ್ದರು.
ಪ್ರಸ್ತುತ, ಈ ಪ್ರಕರಣವು ವಂಚನೆಯ ಹಂತಕ್ಕೆ ತಲುಪಿದೆ. ಆರ್ಟಿಒದಲ್ಲಿ ರಿಜಿಸ್ಟರ್ ಆಗದ ನಂಬರ್ ಪ್ಲೇಟ್ ಬಳಸಿ ಸರ್ಕಾರಕ್ಕೆ ಮತ್ತು ಇಲಾಖೆಗೆ ವಂಚಿಸಿದ ಆರೋಪದ ಮೇಲೆ ಪೊಲೀಸರು ಮತ್ತೊಮ್ಮೆ ಕಾರನ್ನು ಸೀಜ್ ಮಾಡಿದ್ದಾರೆ. ಈ ಬಾರಿ ಕಾರನ್ನು ವಶಕ್ಕೆ ಪಡೆದು ಪಿ.ಎಫ್ ಹಾಕಿ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ. ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ರಿಕ್ಕಿ ರೈ ಅವರಿಗೆ ನೋಂದಾಯಿತ ವಿಳಾಸಕ್ಕೆ ನೊಟೀಸ್ ಕಳುಹಿಸಿದ್ದಾರೆ. ಆದರೆ, ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ ರಿಕ್ಕಿ ರೈ ಅವರು ರಷ್ಯಾದಲ್ಲಿದ್ದಾರೆ ಎನ್ನಲಾಗಿದೆ.












