ಇತ್ತೀಚಿನ ಸುದ್ದಿ
ಬಾಳ್ತಿಲ ಪರಿಶಿಷ್ಟ ಕಾಲೋನಿಗೆ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಭೇಟಿ: ಮತ ಯಾಚನೆ
02/05/2023, 00:01
ಬಂಟ್ವಾಳ(reporterkarnataka.com): ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರು ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಸ್ ಸಿ, ಎಸ್ಟಿ ಕಾಲೋನಿ ಹಾಗೂ ಪ್ರಮುಖ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು.
ಅಭಿವೃದ್ಧಿಯನ್ನು ಕರ್ತವ್ಯ ಎಂದು ಮಾಡಿದ್ದೇನೆ. ಅದರ ಜೊತೆಗೆ ಕ್ಷೇತ್ರದ ಜನರೊಂದಿಗೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಂತೆ ಸೇವೆ ಮಾಡಿದ್ದೇನೆ. ಇನ್ನು ಮುಂದೆಯೂ ಇದೇ ರೀತಿ ಕ್ಷೇತ್ರದ ಜನರ ಸೇವಕನಾಗಿ ಕೆಲಸ ಮಾಡಲು ಅಧಿಕಾರ ನೀಡಿ ಎಂದು ಮನವಿ ಮಾಡಿದರು.
ಭಾರತವನ್ನು ವಿಶ್ವಗುರು ಮಾಡಲು ಹೊರಟ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕೇಂದ್ರದಲ್ಲಿ ಶಕ್ತಿವಂತರಾಗಿ ಮಾಡಲು ಬಂಟ್ವಾಳ ದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಅವರು ತಿಳಿಸಿದರು.
ನಾನು ಶಾಸಕನಾಗಿ ಕಳೆದ ಐದು ವರ್ಷಗಳಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂಬುದು ಕ್ಷೇತ್ರದ ಮತದಾರರಿಗೆ ತಿಳಿದಿರುವ ವಿಚಾರ. ಆದರೆ ಯಾವುದೇ ರೀತಿಯ ವಿಚಾರಗಳಿಲ್ಲದ ಕಾಂಗ್ರೆಸ್ ಗೆ ನಿರಾಶೆ ಉಂಟಾಗಿದ್ದು,ಅಧಿಕಾರಕ್ಕೆ ಬರಲು ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದೆ, ಆದರೆ ಕ್ಷೇತ್ರದ ಮತದಾರರಿಗೆ ನಾನು ಏನು ಎಂಬುದು ತಿಳಿದಿರುವ ವಿಚಾರ ಹಾಗಾಗಿಯೇ ನಿರೀಕ್ಷೆಗೂ ಮೀರಿದ ಪ್ರೀತಿ ವಿಶ್ವಾಸ ನೀಡಿದ್ದೀರಿ ಎಂದು ಹೇಳಿದರು .
ಇವರ ಎಲ್ಲಾ ಆರೋಪಗಳಿಗೆ ಮೇ 10ರಂದು ಬಿಜೆಪಿಗೆ ಮತ ನೀಡಿ ಗೆಲ್ಲಿಸುವ ಮೂಲಕ ಉತ್ತರ ನೀಡಬೇಕಾಗಿದೆ ಎಂದು ಮನವಿ ಮಾಡಿದರು.
ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮಾಧವ ಮಾವೆ ಮಾತನಾಡಿ, ರಾಜೇಶ್ ನಾಯ್ಕ್ ಅವರು ಬಂಟ್ವಾಳ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮಾತನಾಡಿ ಎಂದು ಕಾಂಗ್ರೆಸ್ ನವರಿಗೆ ಸವಾಲೆಸದರು. ಕಳೆದ 30 ವರ್ಷಗಳಲ್ಲಿ ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ರಾಜೇಶ್ ನಾಯ್ಕ್ ಅವರು 5 ವರ್ಷಗಳಲ್ಲಿ ಶಾಸಕತ್ವದ ಪ್ರಥಮ ಅವಧಿಯಲ್ಲಿ ಮಾಡಿದ್ದಾರೆ ಎಂಬುದು ನಮಗೆ ಹೆಗ್ಗಳಿಕೆ ಎಂದರು.
ಕಾಂಗ್ರೆಸ್ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡಿ ಎಷ್ಷೇ ಕಸರತ್ತು ಮಾಡಿದರೂ ಮೇ13 ರ ಫಲಿತಾಂಶ ಬಿಜೆಪಿಯದ್ದು ಆಗಿರುತ್ತದೆ, ಆದರೆ ಅತ್ಯಧಿಕ ಅಂತರದ ಗೆಲುವು ರಾಜೇಶ್ ನಾಯ್ಕ್ ಅವರಿಗೆ ತಂದುಕೊಡಬೇಕು ಎಂಬುದು ನಮ್ಮ ಗುರಿಯಾಗಬೇಕು ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ರಮಾನಾಥ ರೈ ಅವರು 5 ಸಾವಿರ ಕೋಟಿ ಅನುದಾನ ತಂದಿರುವುದು ನನಗೆ ಗೊತ್ತಿಲ್ಲ, ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲು ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ ಎಂದು ಆರೋಪ ಮಾಡಿದ ಅವರು, ರಾಜೇಶ್ ನಾಯ್ಕ್ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾರದೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿ.ಪಂ.ಮಾಜಿ ಸದಸ್ಯ ಚೆನ್ನಪ್ಪ ಆರ್ ಕೋಟ್ಯಾನ್ ಮಾತನಾಡಿ, ಬಾಳ್ತಿಲ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಿದ ರಾಜೇಶ್ ನಾಯ್ಕ್ ಅವರನ್ನು ಮುಂದಿನ ಅವಧಿಯಲ್ಲಿ ವಿರೋಧಿಗಳಿಗೆ ನಡುಕ ಹುಟ್ಟಿಸುವ ರೀತಿಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ತೋರಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಬಾಳ್ತಿಲ ಗ್ರಾ.ಪಂ. ಅಧ್ಯಕ್ಷೆ ಹಿರಣ್ಮಿಯಿ,ಸದಸ್ಯರಾದ ಶಿವರಾಜ್, ವಿಠಲ ನಾಯ್ಕ್,ಚಂದ್ರಶೇಖರ್ ಚೆಂಡೆ, ಅಶೋಕ್ ಕುಮಾರ್ ನೀರಪಾದೆ,ಚೈತ್ರ ಕಶೆಕೋಡಿ, ಲತೀಶ್ ಕುರ್ಮಾನ್, ಜ್ಯೋತಿ ಕಡ್ಮಡ್ಕ,ಆನಂದ ಶೆಟ್ಟಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಪಿಎಸ್. ಹಾಗೂ ಪ್ರಮುಖರು ಉಪಸ್ಥಿತರಿದ್ದರು.