ಇತ್ತೀಚಿನ ಸುದ್ದಿ
ಬಳ್ಳಾರಿಯಲ್ಲಿ: ಜ.4,5ರಂದು ಜಿಲ್ಲಾ ಕಲಾ ವೈಭವ
02/01/2025, 23:23
ಗಣೇಶ್ ಇನಾಂದಾರ ಬಳ್ಳಾರಿ
info.reporterkarnataka@gmail.com
ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದಿಂದ ಇದೇ ಮೊದಲ ಬಾರಿಗೆ ನಗರದ ಡಾ.ಜೋಳದ ರಾಶಿ ದೊಡ್ಡನಗೌಡರ ರಂಗ ಮಂದಿರದಲ್ಲಿ ಜ.4 ಮತ್ತು 5 ರಂದು ಜಿಲ್ಲಾ ಕಲಾ ವೈಭವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಹೇಳಿದರು.
ನಗರದ ಸಾಂಸ್ಕೃತಿಕ ಸಮುಚ್ಚಯ ಆವರಣದ ಕನ್ನಡ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಜಿಲ್ಲೆಯ ಎಲ್ಲ ಕಲಾವಿದರನ್ನು ಒಗ್ಗೂಡಿಸುವುದು ಕಲಾ ವೈಭವದ ಉದ್ದೇಶವಾಗಿದೆ’ ಎಂದರು.
ಜ.4 ರಂದು ಬೆಳಗ್ಗೆ 9 ಗಂಟೆಗೆ ನಗರದ ರಾಘವ ಕಲಾಮಂದಿರದ ಬಳಿಯಿಂದ ವಸಂತ ವೈಭವ ಎನ್ನುವ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ. ಪ್ರಥಮ ದರ್ಜೆ ಗುತ್ತಿಗೆದಾರ ಮಸೀದಿಪುರ ಸಿದ್ಧರಾಮನಗೌಡ ಮೆರವಣಿಗೆಗೆ ಚಾಲನೆ ನೀಡುವರು. ಮೆರವಣಿಗೆಯೂ ರಾಘವ ಕಲಾಮಂದಿರದಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ತೇರು ಬೀದಿ, ಎಚ್.ಆರ್.ಗವಿಯಪ್ಪ ವೃತ್ತದ ಮಾರ್ಗವಾಗಿ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ನಡೆಯಲಿದೆ. ಛದ್ಮವೇಷ, ಬಯಲಾಟ ವೇಷ, ಎತ್ತಿನಬಂಡಿ ಮೆರವಣಿಗೆ, ತಾಷಾರಾಂ ಡೋಲ್, ತೊಗಲುಗೊಂಬೆ ಸೇರಿ 30 ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ’ ಎಂದು ಅವರು ತಿಳಿಸಿದರು.
ಎಮ್ಮಿಗನೂರು ಹಂಪಿ ಸಾವಿರ ದೇವರಮಠದ ಶ್ರೀವಾಮದೇವ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಸಂಸದ ಈ. ತುಕಾರಂ ಉದ್ಘಾಟಿಸುವರು. ನಗರ ಶಾಸಕ ನಾರಾ ಭರತ್ ರೆಡ್ಡಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಭಾಗವಹಿಸುವರು. ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಜಿಲ್ಲಾ ಕಲಾವಿದರ ಸಂಘದ ಉಪಾಧ್ಯಕ್ಷೆ ವೀಣಾ ಕುಮಾರಿ, ಕಾರ್ಯದರ್ಶಿ ಎಚ್.ತಿಪ್ಪೇಸ್ವಾಮಿ, ಖಜಾಂಚಿ ರಮಣಪ್ಪ ಭಜಂತ್ರಿ, ಜಂಟಿ ಕಾರ್ಯದರ್ಶಿ ವೀರೇಶ್ ದಳವಾಯಿ, ಸುಬ್ಬಣ್ಣ, ಸದಸ್ಯ ಎಂ.ವಿನೋದ್ ಸೇರಿ ಹಲವು ಇದ್ದರು.