ಇತ್ತೀಚಿನ ಸುದ್ದಿ
ಬಳ್ಳಾರಿಯ ನಗರದಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: 67 ವರ್ಷಗಳ ಬಳಿಕ ಒಲಿದ ಭಾಗ್ಯ
24/12/2024, 16:13
ಗಣೇಶ್ ಇನಾಂದಾರ ಬಳ್ಳಾರಿ
info.reporterkarnataka@gmail.com
ಕಳೆದ 67 ವರ್ಷಗಳ ಬಳಿಕ ಗಡಿನಾಡು ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆಂದು ಪರಿಷತ್ತಿನ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಹೇಳಿದ್ದಾರೆ.
ಅವರಿಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ,
ಮಂಡ್ಯದಲ್ಲಿ ನಡೆದಿರುವ 87 ನೇ ಸಮ್ಮೇಳನದಲ್ಲಿ ನಡೆದ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಳ್ಳಾರಿ ಸೇರಿದಂತೆ ರಾಜ್ಯದ ದ 12 ಜಿಲ್ಲೆಗಳಿಂದ ಮುಂದಿನ ಸಮ್ಮೇಳನ ತಮ್ಮಲ್ಲಿ ಹಮ್ಮಿಕೊಳ್ಳಲು ಬೇಡಿಕೆ ಸಲ್ಲಿಸಿತ್ತು. ಅಂತಿಮವಾಗಿ ಬಳ್ಳಾರಿಗೆ ದೊರೆತಿದೆಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1920ರಲ್ಲಿ ಮೊದಲ ಬಾರಿಗೆ ಅಖಂಡ ಜಿಲ್ಲೆಯ ಹೊಸಪೇಟೆಯಲ್ಲಿ ರೊದ್ದ ಶ್ರೀನಿವಾಸ ರಾಯರ ಅಧ್ಯಕ್ಷತೆಯಲ್ಲಿ 6ನೇ ಸಮ್ಮೇಳನ ನಡೆಯಿತು.
ಎರಡನೇ ಬಾರಿಗೆ ಬಾರಿಗೆ 1926ರ ಮೇ 22ರಿಂದ 24ರ ವರೆಗೆ ಮೂರು ದಿನಗಳ ಕಾಲ 12ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿ ನಗರದಲ್ಲಿ ನಡೆದಿತ್ತು. ಇದರ ಅಧ್ಯಕ್ಷತೆಯನ್ನು ವಚನ ಪಿತಾಮಹ ಫಕೀರಪ್ಪ ಗುರುಬಸಪ್ಪ ಹಳಕಟ್ಡಿ (ಫ.ಗು.ಹಳಕಟ್ಟಿ) ಅವರು ವಹಿಸಿದ್ದರು.
ನಂತರದ 12 ವರ್ಷಗಳ ನಂತರ ಮೂರನೇ ಬಾರಿಗೆ 1938ರ ಡಿ.29ರಿಂದ 31ರ ವರೆಗೆ 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಆರ್.ಆರ್.ದಿವಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆದಿತ್ತು. ನಾಲ್ಕನೇ ಬಾರಿಗೆ ಹರಪನಹಳ್ಳಿಯಲ್ಲಿ 1947ರಲ್ಲಿ ಸಿ.ಕೆ.ವೆಂಕಟರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಳಿಕ 11 ವರ್ಷಗಳ ನಂತರ 1958ರ ಜ. 18ರಿಂದ 20ರ ವರೆಗೆ ವಿ.ಕೆ.ಗೋಕಾಕ್ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ 5ನೇ ಬಾರಿಗೆ ನಡೆಯಿತು.
ಈ ಐದು ಸಮ್ಮೇಳನಗಳ ನಂತರ ಹಲವು ಬಾರಿ ಬಳ್ಳಾರಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಲು 2004ರಿಂದ ಮನವಿ ಮಾಡಿದ್ದರೂ ಆಗಿರಲಿಲ್ಲ.
ಕಳೆದ ಬಾರಿ ಹಾವೇರಿಯಲ್ಲಿ ನಡೆದ ಅಖಿಲ ಭಾರತ ಸಮ್ಮೇಳನದಲ್ಲಿ 87ನೇ ಸಮ್ಮೇಳನ ಬಳ್ಳಾರಿಗೆ ನೀಡಬೇಕು ಎಂಬ ತೀವ್ರ ಒತ್ತಾಯ ಕೇಳಿಬಂತು. ಆದರೆ ಕೊನೆ ಗಳಿಗೆಯಲ್ಲಿ ಮಂಡ್ಯದಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಯಿತು.
88ನೇ ಸಮ್ಮೇಳನವನ್ನು ನೆರೆಯ ಆಂಧ್ರ
ಪ್ರದೇಶದ ಕನ್ನಡಿಗರಿಗೂ ಅನುಕೂಲವಾಗುವಂತೆ ಬಳ್ಳಾರಿ ನಗರದಲ್ಲೇ ಜಿಲ್ಲಾ ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ. ಮೂರು ವೇದಿಕೆಯಲ್ಲಿ ಮೂರು ದಿನಗಳ ಕಾಲ ನಡೆಯಲಿದೆ. ಮುಂದಿನ ತಿಂಗಳು ಸ್ವಾಗತ ಸಮಿತಿ ರಚನೆಯಾಗಲಿದೆಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಜಿಲ್ಲಾ ಮಾಜಿ ಅಧ್ಯಕ್ಷರಾದ ಹಂಪನ ಗೌಡ, ಸಿದ್ದರಾಮ ಕಲ್ಮಠ,ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಡಾ. ಶಿವಲಿಂಗಪ್ಪ ಹಂದ್ಯಾಳ, ಚೋರನೂರು ಕೊಟ್ರಪ್ಪ, ಡಾ. ಬಸವರಾಜ್ ಗದಗಿನ, ಕೆ.ವಿ.ನಾಗೀರೆಡ್ಡಿ, ಕೋಳೂರು ವೆಂಕಟೇಶ್ ಹೆಗಡೆ ಮೊದಲಾದವರು
ಇದ್ದರು.