ಇತ್ತೀಚಿನ ಸುದ್ದಿ
ಬಕ್ರೀದ್ ಸೌಹಾರ್ದತೆ ಸಾರುವ ಹಬ್ಬ: ವಿಧಾನಸಭೆ ಸ್ಪೀಕರ್ ಖಾದರ್
18/06/2024, 17:47
ಉಳ್ಳಾಲ(reporterkarnataka.com): ಬಕ್ರೀದ್ ಸೌಹಾರ್ದತೆಯ ಸಂದೇಶ ಸಾರುತ್ತದೆ. ಈ ಹಬ್ಬ ಆಚರಿಸುವ ಜೊತೆಗೆ ಸಹೋದರತೆಯನ್ನು ಬೆಳೆಸಬೇಕು. ಪರಸ್ಪರ ಸಂಸ್ಕೃತಿ, ಸೌಹಾರ್ದತೆಯನ್ನು ಹಂಚುವ ಮೂಲಕ ದೇಶದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ವಿಧಾನ ಸಭಾ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಬಕ್ರೀದ್ ಹಬ್ಬದ ಪ್ರಯುಕ್ತ ಗುರುವಾರ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಝಿಯಾರತ್ ನಡೆಸಿದ ಬಳಿಕ ಮಾಧ್ಯಮದ ಜೊತೆ ಅವರು ಮಾತನಾಡಿದರು.
ಬಕ್ರಿದ್ ಹಬ್ಬವನ್ನು ಸಹೋದರತೆ ಸಾಮರಸ್ಯ ಪ್ರೀತಿ ಮಾನವೀಯತೆ ಸಾಮರಸ್ಯದ ಹಬ್ಬವಾಗಿ ಸರ್ವ ಧರ್ಮೀಯರ ಜತೆಗೂಡಿ ಆಚರಿಸುತ್ತಿದ್ದೇವೆ. ಸಮೃದ್ಧ ಭಾರತ, ನಾಡಿನೆಲ್ಲೆಡೆ ಶಾಂತಿಯುತ ವಾತಾವರಣ, ಭವಿಷ್ಯದ ಜನಾಂಗ ಉತ್ತಮ ಸಂಸ್ಕಾರ ಸಂಸ್ಕೃತಿ ಬೆಳೆಸಿಕೊಂಡು ಬಾಳಲಿ ಎಂದು ಆಶಿಸಿದರು.
ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಮಾತನಾಡಿ, ಪ್ರವಾದಿ ಇಬ್ರಾಹಿಂ ಅವರ ಕಾಲದಲ್ಲಿ ನಡೆದ ಘಟನೆಯನ್ನು ನೆನಪಿಸುವಂತಹ ಹಬ್ಬ ಬಕ್ರೀದ್ ಆಗಿದೆ. ಇಡೀ ಜಗತ್ತಿನ ಮುಸ್ಲಿಮರು ಪವಿತ್ರವಾದ ಈ ಹಬ್ಬ ಆಚರಿಸುತ್ತಿದ್ದು ತ್ಯಾಗ ಬಲಿದಾನದ ಸಂಕೇತವಾಗಿದೆ. ಪ್ರವಾದಿ ಇಬ್ರಾಹಿಂ, ಪ್ರವಾದಿ ಇಸ್ಮಾಯಿಲ್ ಅವರ ಆದರ್ಶವನ್ನು ಜಗತ್ತಿನ ಎಲ್ಲ ಮುಸ್ಲಿಮರು ಪಾಲಿಸುತ್ತಾ ಬರುತ್ತಾರೆ ಎಂದು ಹೇಳಿದರು.
ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ ಖತೀಬ್ ಇಬ್ರಾಹಿಂ ಸಅದಿ ನಮಾಝ್ ಮತ್ತು ಕುತುಬ ನೆರವೇರಿಸಿದರು.
ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಕೋಶಾಧಿಕಾರಿ ನಾಝಿಮ್ ರಹ್ಮಾನ್ ಮುಕ್ಕಚೇರಿ, ಜತೆ ಕಾರ್ಯದರ್ಶಿ ಮುಸ್ತಫ ಮದನಿ ನಗರ, ಸಮಿತಿ ಸದಸ್ಯರಾದ ಝೈನಾಕ ಮೇಲಂಗಡಿ ಉಪಸ್ಥಿತರಿದ್ದರು.