ಇತ್ತೀಚಿನ ಸುದ್ದಿ
ಬಹುಭಾಷಾ ಸಂಸ್ಕೃತಿಯಲ್ಲಿ ಏಕತಾ ಭಾವ: ಮಂಚಿಯಲ್ಲಿ ಉಪನ್ಯಾಸಕ ಜಯಾನಂದ ಪೆರಾಜೆ
24/12/2024, 18:38
ಬಂಟ್ವಾಳ(reporterkarnataka com): ಭಾರತೀಯ ಸಂಸ್ಕೃತಿಯು ಕೃಷಿ ಸಂಸ್ಕೃತಿಯ ಮೂಲದಿಂದ ಬೆಳೆದು ಬಂದಿದೆ. ಬಹುಭಾಷಾ ಸಂಸ್ಕೃತಿ ಇದ್ದರೂ ಏಕಭಾವವನ್ನು ಹೊಂದಿದೆ. ವಿವಿಧ ಹಬ್ಬಗಳ ಆಚರಣೆ ಹಾಗೂ ಜಾನಪದ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹಿರಿಯ ಪತ್ರಕರ್ತ, ಉಪನ್ಯಾಸಕ ಜಯಾನಂದೆ ಪೆರಾಜೆ ಹೇಳಿದರು.
ಅವರು ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ ವತಿಯಿಂದ ಕುಕ್ಕಾಜೆಯ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಏರ್ಪಡಿಸಲಾದ 3 ದಿನಗಳ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಂಚಿ ಹಿ.ಪ್ರಾ. ಶಾಲಾ ಸಂಚಾಲಕ ನೂಜಿಬೈಲು ನಾರಾಯಣ ಭಟ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿ ಮಾತನಾಡಿದರು. ನಾಟಕ , ಸಾಹಿತ್ಯ , ಸಂಗೀತ , ಚಿತ್ರಕಲೆಗಳೆಲ್ಲ ಸಂಸ್ಕೃತಿಯ ವಿವಿಧ ರೂಪಗಳಾಗಿವೆ. ಜೀವನವು ಕಲಾವಂತಿಕೆಯಿಂದ ಕೂಡಿರಬೇಕು. ವಿವಿಧ ಕಲೆಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಸಂಸ್ಕೃತಿಯ ಮಹತ್ವವನ್ನು ತಿಳಿಸಿದರು. ಹಿರಿಯ ನ್ಯಾಯವಾದಿ ಚಂದ್ರಶೇಖರ ಕೆ.ವಿ. ಸಭಾಧ್ಯಕ್ಷತೆ ವಹಿಸಿದ್ದರು.
*ಸಾಧಕರಿಗೆ ಸನ್ಮಾನ:*
ಆಕಾಶವಾಣಿ ಕಲಾವಿದೆ ಗಮಕಿ ಮಂಜುಳಾ ಸುಬ್ರಮಣ್ಯ ಭಟ್ , ಕವಯಿತ್ರಿ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವಿಜಯಾ ಶೆಟ್ಟಿ ಸಾಲೆತ್ತೂರು, ಲೇಖಕಿ ಅನಿತಾ ನರೇಶ್ ಮಂಚಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಭಜನಾ ಮಂಡಳಿ ಅಧ್ಯಕ್ಷ ಗಣೇಶ ಐತಾಳ್ ಸ್ವಾಗತಿಸಿದರು. ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಪ್ರಸ್ತಾವನೆ ಗೈದುಸಾರ್ವಜನಿಕರ ಸಹಕಾರವನ್ನು ಸ್ಮರಿಸಿದರು. ಶೈಲಜಾ ಮತ್ತು ಶಿಕ್ಷಕ ಉಮಾನಾಥ ರೈ ಸನ್ಮಾನಪತ್ರ ವಾಚಿಸಿದರು. ಬಾಲಕೃಷ್ಣ ಶೆಟ್ಟಿ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಮಕ ವಿದ್ಯಾರ್ಥಿಗಳಿಂದ ಸಮೂಹ ಗಾಯನ ಮತ್ತು ಕುಮಾರ ವ್ಯಾಸ ಭಾರತದಿಂದ ಆಯ್ದ ಸೌಗಂಧಿಕಾ ಸಂಧಿ ಗಮಕ ವಾಚನ, ವ್ಯಾಖ್ಯಾನ ನಡೆಯಿತು. ಮಂಜುಳಾ ಸುಬ್ರಮಣ್ಯ ವಾಚನ ಮಾಡಿ ಸರ್ಪಂಗಳ ಈಶ್ವರ ಭಟ್ ವ್ಯಾಖ್ಯಾನಿಸಿದರು. ಸಮಾರೋಪ ಸಮಾರಂಭವು ಮಂಚಿ ಗ್ರಾ.ಪಂ ಅಧ್ಯಕ್ಷ ಜಿ.ಎಂ. ಇಬ್ರಾಹಿಂ ಅಧ್ಯಕ್ಷತೆಯಲ್ಲಿ ನಡೆಯಿತು. ಅತಿಥಿಗಳಾಗಿ ರಮೇಶರಾವ್ ಪತ್ತುಮುಡಿ , ನಿಶ್ಚಲ್ ಜಿ.ಶೆಟ್ಟಿ ಕಲ್ಲಾಡಿ ಅತಿಥಿಗಳಾಗಿದ್ದರು.
ಆಕಾಶವಾಣಿ ಕಲಾವಿದೆ ಮಂಜುಳಾ ಗುರುರಾಜ್ ರಾವ್ ಇರಾ ಇವರಿಂದ ಪಾದುಕಾ ಪಟ್ಟಾಭಿಷೇಕ ಹರಿಕಥೆ, ಶಿವರಂಜಿನಿ ಕಲಾಕೇಂದ್ರ ಪೊಳಲಿ ಇವರಿಂದ ಸಾಂಸ್ಕೃತಿಕ ವೈವಿಧ್ಯ, ಶಾರದಾ ಎಸ್ ರಾವ್ ಬಳಗದವರಿಂದ ಸ್ಯಾಕ್ಸೋ ಫೋನ್ ವಾದನ ಜನಮೆಚ್ಚುಗೆ ಪಡೆಯಿತು.