ಇತ್ತೀಚಿನ ಸುದ್ದಿ
ಬಾಗಲಕೋಟೆ ಮಾಜಿ ಶಾಸಕರಿಂದ ಗೂಂಡಾಗಿರಿ?: ವೀರಣ್ಣ ಚರಂತಿಮಠ ಸಹಿತ 4 ಮಂದಿ ವಿರುದ್ದ ಹಲ್ಲೆ ಆರೋಪ
18/02/2025, 19:46

ಕೆ.ಶಿವು ಲಕ್ಕಣ್ಣವರ ಹುಬ್ಬಳ್ಳಿ
info.reporterkarnataka@gmail.com
ಬಾಗಲಕೋಟೆಯ ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಹಲ್ಲೆ ನಡೆಸಿದ ಗಂಭೀರ ಆರೋಪ ಕೇಳಿ ಬಂದಿದೆ. ಹಿಂದೂ ಜಾಗರಣ ವೇದಿಕೆಯ ಬಾಗಲಕೋಟೆ ಜಿಲ್ಲಾಧ್ಯಕ್ಷ ಆನಂದ್ ಮುತ್ತಗಿ ಎಂಬುವರು ಇಂಥದ್ದೊಂದು ಗಂಭೀರ ಆರೋಪ ಮಾಡಿದ್ದಾರೆ.
ಬ್ಯಾಂಕ್ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ತನ್ನ ಮೇಲೆ ವೀರಣ್ಣ ಚರಂತಿಮಠ ಹಲ್ಲೆ ನಡೆಸಿದ್ದಾರೆ ಅಂತ ಆನಂದ ಮುತ್ತಗಿ ಆರೋಪ ಮಾಡಿದ್ದಾರೆ. ಸದ್ಯ ಹಲ್ಲೆಗೊಳಗಾದ ಆನಂದ ಮುತ್ತಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಮಾಜಿ ಶಾಸಕ ವೀರಣ್ಣ ಚರಂತಿಮಠ ಸೇರಿ ನಾಲ್ವರ ವಿರುದ್ಧ ದೂರು ನೀಡಿದ್ದಾರೆ..!
*ಹಲ್ಲೆ ಮಾಡಿದ್ರಾ ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠರು?*
ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಶ್ರೀ ಬೀಳೂರ ಗುರುಬಸವ ಪತ್ತಿನ ಸಹಕಾರ ಸಂಘ ಎಂಬ ಬ್ಯಾಂಕ್‌ನ ಅಧ್ಯಕ್ಷರಾಗಿದ್ದಾರೆ.
ಇದೇ ಬ್ಯಾಂಕ್‌ನಲ್ಲಿ ಆನಂದ್ ಮುತ್ತಗಿ 35 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಆದರೆ 2018ರಿಂದ ಆನಂದ್ ಸಾಲ ಮರುಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದ್ದರು. ಇದೇ ಸಾಲದ ಹಣ ಕಟ್ಟದಿದ್ದಕ್ಕೆ ವೀರಣ್ಣ ಚರಂತಿಮಠ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆನಂದ್ ಮುತ್ತಗಿ ಆರೋಪಿಸಿದ್ದಾರೆ.
*ವೀರಣ್ಣ ಚರಂತಿಮಠ ವಿರುದ್ಧ ದೂರು:*
ಇನ್ನು ಈ ಬಗ್ಗೆ ಬಾಗಲಕೋಟೆ ಶಹರ ಪೊಲೀಸ್ ಠಾಣೆಯಲ್ಲಿ ಆನಂದ್ ಮುತ್ತಗಿ ದೂರು ದಾಖಲಿಸಿದ್ದಾರೆ. ವೀರಣ್ಣ ಚರಂತಿಮಠ ಸೇರಿದಂತೆ ನಾಲ್ವರ ವಿರುದ್ಧ ದೂರು ನೀಡಿದ್ದಾರೆ. ನನಗೂ ಹಾಗೂ ನನ್ನ ಕುಟುಂಬದವರಿಗೆ ಏನಾದ್ರೂ ಆದ್ರೆ ಅದಕ್ಕೆ ವೀರಣ್ಣ ಚರಂತಿಮಠ ಕಾರಣ ಅಂತ ದೂರಿನಲ್ಲಿ ಆನಂದ್ ಮುತ್ತಗಿ ತಿಳಿಸಿದ್ದಾರೆ.
*ಉದ್ಯೋಗ ನಷ್ಟದಿಂದ ಸಾಲ ಮರುಪಾವತಿ ಮಾಡಿರಲಿಲ್ಲ:*
ಈ ಬಗ್ಗೆ ಮಾತನಾಡಿರುವ ಆನಂದ ಮುತ್ತಗಿ, ನಾನು ಬೀಳೂರ ಶ್ರೀ ಬಸವೇಶ್ವರ ಬ್ಯಾಂಕ್‌ನಲ್ಲಿ 35 ಲಕ್ಷ ರೂಪಾಯಿ ಸಾಲ ಪಡೆದಿದ್ದೆ. ಆದರೆ ಉದ್ಯೋಗ ನಷ್ಟದಿಂದ ಸಾಲ ಮರುಪಾವತಿ ಮಾಡಲು ಆಗಿರಲಿಲ್ಲ. ನನ್ನ ಜಮೀನು ವ್ಯವಹಾರ ಆದ ಬಳಿಕ ಸಾಲ ತುಂಬಬೇಕು ಅಂದುಕೊಂಡಿದ್ದೆ. ಇಂದು ಬ್ಯಾಂಕ್ ಸಿಬ್ಬಂದಿ ನನ್ನನ್ನು ವೀರಣ್ಣ ಚರಂತಿಮಠ ಬಳಿ ಕರೆದುಕೊಂಡು ಹೋಗಿದ್ರು. ಅಲ್ಲಿ ಚರಂತಿಮಠ ಹಲ್ಲೆ ಮಾಡಿದ್ರು ಅಂತ ಆನಂದ್ ಮುತ್ತಗಿ ಆರೋಪಿಸಿದ್ರು..!
*ವೀರಣ್ಣ ಚರಂತಿಮಠರಿಂದ ಅವಾಚ್ಯ ಶಬ್ದಗಳಿಂದ ನಿಂದನೆ, ಹಲ್ಲೆ:*
ನನ್ನನ್ನು ಬ್ಯಾಂಕ್ ಸಿಬ್ಬಂದಿ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಂಘದ ಕಚೇರಿಗೆ ಕರೆದುಕೊಂಡು ಹೋಗಿದ್ರು. ನಾನು ಹೋಗುತ್ತಿದ್ದಂತೆ ವೀರಣ್ಣ ಚರಂತಿಮಠ ಅವರು ನನಗೆ ಅವಾಚ್ಯ ಶಬ್ದಗಳಿಂದ ಬೈದರು. ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಮಾಡಿದ್ರು, ಬಳಿಕ ನನ್ನ ಮೇಲೆ ಹಲ್ಲೆ ಮಾಡಿದ್ರು ಅಂತ ಆನಂದ್ ಮುತ್ತಗಿ ಆರೋಪಿಸಿದ್ದಾರೆ.
ಈ ವೀರಣ್ಣ ಚರಂತಿಮಠರ ಗೂಂಡಾಗಿರಿ ಇಷ್ಟಕ್ಕೆ ನಿಲ್ಲುವುದಿಲ್ಲ. ಈ ವೀರಣ್ಣ ಚರಂತಿಮಠರು ಗದಗಿನ ತಮ್ಮ ಸುಪರ್ದಿಗೆ ಸೇರಿದ ಬ್ಯಾಂಕ್ ನ ಸಾಲ ವಸೂಲಾತಿಯಲ್ಲೂ ಗದಗದ ದಂಪತಿಗೆ ಹೀಗೆಯೇ ಮಾಡಿದ್ದಾರೆ, ಗೂಂಡಾಗಿರಿ ಮೆರೆದಿದ್ದಾರೆ.
*ದಂಪತಿ ಮೇಲೆ ಹಲ್ಲೆ ಮಾಡಿದ ಬಿಜೆಪಿ ಶಾಸಕ ವೀರಣ್ಣ ಚರಂತಿಮಠರು:*
ಬ್ಯಾಂಕಿನಲ್ಲಿ ಮಾಡಿರುವ 60 ಲಕ್ಷ ಸಾಲ ತೀರಿಸಲಾಗದ್ದಕ್ಕೆ 3 ಕೋಟಿ ರೂಪಾಯಿ ಆಸ್ತಿಯನ್ನು ಬರೆದುಕೊಡಿ ಎಂದು ಗದಗದ ಸೋಮಾಪುರದ ದಂಪತಿ ಮೇಲೆ ಬಿಜೆಪಿ ಶಾಸಕನಿಂದ ಗೂಂಡಾಗಿರಿ ನಡೆಸಿರುವ ಆರೋಪ ಕೇಳಿ ಬರುತ್ತಿದೆ.
ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಬ್ಯಾಂಕ್ ಸಾಲದ ವಿಷಯಕ್ಕೆ, ಗದಗ ತಾಲೂಕಿನ ಅಡವಿಸೋಮಾಪುರ ತಾಂಡಾ ನಿವಾಸಿ ಮಲ್ಲಯ್ಯ ಹಾಗೂ ಆತನ ಪತ್ನಿ ಲಕ್ಷ್ಮೀ ಹಿರೇಮಠ ಎಂಬವವರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಮಲ್ಲಯ್ಯ ಮತ್ತು ಲಕ್ಷೀ ದಂಪತಿ ಬೇಳೂರು ಗುರುಬಸವೇಶ್ವರ ಪತ್ತಿನ ಸಹಕಾರ ಬ್ಯಾಂಕ್‌ನಲ್ಲಿ ಅವಲಕ್ಕಿ ಫ್ಯಾಕ್ಟರಿ ಕಟ್ಟುವುದಕ್ಕಾಗಿ 60 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಆದರೆ ಫ್ಯಾಕ್ಟರಿ ಆಕಸ್ಮಿಕ ಘಟನೆಯಲ್ಲಿ ಬೆಂಕಿ ಬಿದ್ದು ಸುಟ್ಟುಹೋಗಿದೆ. ಇದರಿಂದ ಈ ದಂಪತಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಫ್ಯಾಕ್ಟರಿ ಬೆಂಕಿಗಾಹುತಿಯಾಗಿರುವುದರಿಂದ ಸಾಲ ಮರುಪಾವತಿ ಮಾಡುವುದಕ್ಕೆ ಈ ರೂಪಾಯಿ 60 ಲಕ್ಷಕ್ಕೆ 30 ಲಕ್ಷ ಬಡ್ಡಿಯಾಗಿತ್ತು. ಬಾಗಲಕೋಟೆ ಜಿಲ್ಲೆಯಲ್ಲಿದ್ದ 20 ಕುಂಟೆ ಜಾಗವನ್ನು ಮಾರಿ ಸಾಲವನ್ನು ತೀರಿಸುತ್ತೇವೆ ಎಂದು 3 ತಿಂಗಳು ಕಾಲವಕಾಶ ಕೇಳಲು ದಂಪತಿ ಹೋಗಿದ್ದಾರೆ. ಆದರೆ ನೀವೇನು ಸಾಲ ತೀರಿಸುವುದು ಬೇಡ ಈ ಜಾಗವನ್ನು ಬರೆದುಕೊಡಿ, ಇಲ್ಲ ಅಂದ್ರೆ ಈಗಲೇ ಹಣವನ್ನು ಬಡ್ಡಿ ಸಮೇತ ತುಂಬಿ ಎಂದು ಹಲ್ಲೆ ಮಾಡಿದ್ದಾರೆ ಎಂದು ಲಕ್ಷ್ಮಿ ಆರೋಪ ಮಾಡಿದ್ದಾರೆ.
ಶಾಸಕರಿಂದ ಹಲ್ಲೆ ಆರೋಪ
ಅವಲಕ್ಕಿ ಫ್ಯಾಕ್ಟರಿ ನಡೆಸಲು ಎರಡು ಬ್ಯಾಂಕ್‌ಗಳಲ್ಲಿ ಈ ದಂಪತಿ ಸಾಲ ಮಾಡಿದ್ದರು. ಫ್ಯಾಕ್ಟರಿಗೆ ಬೆಂಕಿ ಬಿದ್ದಿದ್ದರಿಂದ ಒಂದು ಬ್ಯಾಂಕಿನಲ್ಲಿ ಮಾಡಿದ್ದ ಒಂದು ಕೋಟಿ ರೂ ಸಾಲ ಮನ್ನಾ ಆಗಿದೆ. ಮೂರು ಕೋಟಿ ಬೆಲೆಬಾಳುವ ಜಾಗವನ್ನು ಮಾರಿ ಸಾಲ ತೀರಿಸಬೇಕೆಂದು ನವನಗರಕ್ಕೆ ಹೋಗಿದ್ದೆವು. ಆದರೆ ಶಾಸಕ ವೀರಣ್ಣ ಚರಂತಿಮಠ ನಮ್ಮನ್ನು ಅವರ ಗೆಸ್ಟ್‌ಹೌಸ್‌ಗೆ ಕೆರಸಿ ಜಾಗವನ್ನು ಗುರುಬಸವೇಶ್ವರ ಬ್ಯಾಂಕ್‌ನ ಉಪಾಧ್ಯಕ್ಷ ಮುರುಗಪ್ಪ ನಾರಾಯಣ ಎಂಬುವವರ ಹೆಸರಿಗೆ ಬರೆದುಕೊಡು ಎಂದು ಧಮ್ಕಿ ಹಾಕುತ್ತಿದ್ದಾರೆ. ನಾವು ಒಪ್ಪದಿದ್ದಕ್ಕೆ ನನ್ನ ಮೇಲೆ ಮತ್ತು ನನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಲ್ಲಯ್ಯ ಮಾಧ್ಯಮದ ಮುಂದೆ ಆರೋಪಿಸಿದ್ದಾರೆ.
ಸಾಲ ತೀರಿಸಿ, ಇಲ್ಲ ಜಾಗ ಬರೆದುಕೊಡಿ ಎಂದು ಧಮ್ಕಿ
ಶಾಸಕ ಚರಂತಿಮಠ ಗುರುಬಸವೇಶ್ವರ ಪತ್ತಿನ ಸಹಕಾರ ಬ್ಯಾಂಕ್‌ನ ಅಧ್ಯಕ್ಷರಾಗಿದ್ದಾರೆ. ಈ ದಂಪತಿ 3 ಕೋಟಿ ರೂ. ಬೆಲೆ ಬಾಳುವ ಜಾಗ ಮತ್ತು ಕಟ್ಟಡವನ್ನು ಮಾರಿ ಸಾಲವನ್ನು ತೀರಿಸಬೇಕು ಎಂದು ತೆರಳಿದೆ. ಆದರೆ ದಂಪತಿಯನ್ನು ಈಗಲೇ ಸಾಲ ತೀರಿಸಿ, ಇಲ್ಲ ಜಾಗವನ್ನು ಬರೆದುಕೊಡಿ. ಇಲ್ಲವಾದರೆ ನೇಣು ಹಾಕಿಕೊಳ್ಳಿ ಎಂದು ಶಾಸಕ ಮತ್ತು ಸಂಗಡಿಗರು ಸಿಕ್ಕಾಬಟ್ಟೆ ಹಿಂಸೆ ಕೊಡುತ್ತಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ.
ಮಾತುಕತೆಗೆಂದು ಕರೆಸಿ ಹಲ್ಲೆ
ಸಾಲ ತೀರಿಸುವ ಸಲುವಾಗಿ ಬ್ಯಾಂಕಿಗೆ ಭೇಟಿ ನೀಡಿದ್ದ ವೇಳೆ ಮಾತುಕತೆಗೆ ಎಂದು ಶಾಸಕರು ದಂಪತಿಯನ್ನು ತಮ್ಮ ಗೆಸ್ಟ್ ಹೌಸ್‌ಗೆ ಕರೆಸಿಕೊಂಡಿದ್ದಾರೆ. ಆದರೆ ಶಾಸಕರು ಒಂದೂ ಮಾತನಾಡದೆ ಏಕಾಎಕಿ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಮಗೆ ನ್ಯಾಯ ಕೊಡಿಸಬೇಕು ಎಂದು ನೊಂದ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.
*ದೂರು ದಾಖಲಿಸಿಕೊಳ್ಳದ ಪೊಲೀಸರು:*
ಮಾಜಿ ಶಾಸಕರು ನಮ್ಮ ಹಲ್ಲೆ ಮಾಡಿ, ನಮ್ಮ ಮೊಬೈಲ್‌ಗಳನ್ನು ಕಸಿದುಕೊಂಡಿದ್ದಾರೆ. ಕಟ್ಟಿಹಾಕಿ ಎಂದಿರುವುದರಿಂದ ನಮಗೆ ಭಯ ಆಗಿತ್ತು. ಆದರೂ ಈ ಬಗ್ಗೆ ನವನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದರು. ಅಲ್ಲದೆ ನಮ್ಮನ್ನು ಕಟ್ಟಿಹಾಕಿ ಎಂದು ಹೇಳಿದ್ದರಿಂದ ನಾವು ಮತ್ತೆ ಬಾಗಲಕೋಟೆಗೆ ಹೋಗಲಿಲ್ಲ ಎಂದು ದಂಪತಿ ಹೇಳಿದ್ದಾರೆ. ಪ್ರಸ್ತುತ ದಂಪತಿ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.