ಇತ್ತೀಚಿನ ಸುದ್ದಿ
ಬಡವರು ಉಣ್ಣುವ ಪಡಿತರ ಅಕ್ಕಿಗೆ ಕನ್ನ: ಮಹಾರಾಷ್ಟ್ರಕ್ಕೆ ಎಗ್ಗಿಲ್ಲದೆ ಸಾಗಾಟ; ಅಧಿಕಾರಿಗಳು ಶಾಮೀಲು?
25/03/2022, 19:38
ಬೆಳಗಾವಿ(reporterkarnataka.com): ಬೆಳಗಾವಿಯ ಹುಕ್ಕೇರಿ ತಾಲೂಕಿನಿಂದ ಪಡಿತರ ಅಕ್ಕಿಯನ್ನು ನಿಪ್ಪಾಣಿ ಮೂಲಕ ಮಹಾರಾಷ್ಟ್ರಕ್ಕೆ ಅಕ್ರಮ ಸಾಗಾಟ ಮಾಡುವುದು ಮತ್ತೆ ಬೆಳಕಿಗೆ ಬಂದಿದ್ದು, ಅಕ್ರಮವನ್ನು ವೀಡಿಯೊ ಮಾಡಲೆತ್ನಿಸಿದವರ ಮೇಲೆ ಕಾರು ಹಾಯಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ.
ಮಹಾರಾಷ್ಟ್ರ ನೋಂದಣಿ ಹೊಂದಿರುವ ಒಮಿನಿ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಹುಕ್ಕೇರಿ ತಾಲ್ಲೂಕಿನ ಕನಗಲಾ ಗ್ರಾಮದಿಂದ ಅಕ್ಕಿ ತುಂಬಿಕೊಂಡು ನಿಪ್ಪಾಣಿ ಮೂಲಕ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿತ್ತು. ಇದನ್ನು ವಿಡಿಯೋ ಮಾಡಲು ಹೋದ ಪತ್ರಕರ್ತರ ಮೇಲೆ ಕಾರು ಹರಿಸಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೆ ಅಕ್ರಮ ಅಕ್ಕಿ ಕಳ್ಳರು ದುಡ್ಡು ಕೊಟ್ಟು ಬೆಂಬಲಿಗರನ್ನು ಇಟ್ಟುಕೊಂಡು ಸುದ್ದಿ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಬೇರೆ ಬೇರೆ ಜಿಲ್ಲೆಗಳಿಂದ ಅಕ್ರಮ ಅಕ್ಕಿ ತುಂಬಿಕೊಂಡು ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದೆ. ಅಧಿಕಾರಿಗಳು ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳದೆ ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ. ಹಿಂದೆ ಕೆಲವು ಜನ ಅಕ್ಕಿ ಕಳ್ಳರು ಒಬ್ಬ ಪತ್ರಕರ್ತನ ಮೇಲೆ ಹಲ್ಲೆ ಮಾಡಿ ತಮ್ಮ ಲಾರಿಯನ್ನು ತೆಗೆದುಕೊಂಡು
ಹೋದರು. ರಾಜಾರೋಷವಾಗಿ ಅಕ್ಕಿ ತುಂಬಿಕೊಂಡು ಮಹಾರಾಷ್ಟ್ರಕ್ಕೆ ಹೋಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಧಾರವಾಡ,
ರಾಣೆಬೆನ್ನೂರು, ಹಾವೇರಿ, ಬೆಳಗಾವಿ ಎಪಿಎಂಸಿಯಿಂದ ಅಕ್ರಮ ಅಕ್ಕಿ
ಸಾಗಾಟವಾಗುತ್ತಿದೆ. ಇವರಿಂದ ಕೆಲವು ಪತ್ರಕರ್ತರು ತಿಂಗಳಿಗೆ ಇಂತಿಷ್ಟು ಹಣ ಪಡೆದುಕೊಂಡು ಅವರಿಗೆ ಸಹಾಯ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ನಿಷ್ಠೆಯಿಂದ ಕೆಲಸ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಾರೆ. ಅಂತವರ ವಿರುದ್ದ ಕ್ರಮಕೈಗೊಳ್ಳಬೇಕೆಂದು ಮಾಧ್ಯಮದ ಮಂದಿ ಮನವಿ ಮಾಡಿದ್ದಾರೆ.
ಬೆಳಗಾವಿ ಎಪಿಎಂಸಿಯಿಂದ ದೊಡ್ಡ ಪ್ರಮಾಣದಲ್ಲಿ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಅಕ್ಕಿ ಸಾಗಣೆ ಮಾಡುತ್ತಿದ್ದಾರೆ. ಇದರ ವಿರುದ್ಧ ಸೂಕ್ತವಾದ ಕ್ರಮಕೈಗೊಳ್ಳದಿದ್ದರೆ ಕೆಲವೇ ದಿನಗಳಲ್ಲಿ ಸೂಕ್ತವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.?