ಇತ್ತೀಚಿನ ಸುದ್ದಿ
ಬಡಗ ಎಡಪದವು: ಕೃತಕ ನೆರೆಗೆ ಕಾರಣವಾದ ನೂತನ ಕಿರು ಸೇತುವೆ; ಶಾಸಕ ಡಾ. ಭರತ್ ಶೆಟ್ಟಿ ಪರಿಶೀಲನೆ
29/06/2024, 20:37
ಬಡಗಎಡಪದವು(reporterkarnataka.com): ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಬೈತರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಸಮರ್ಪಕವಾಗಿ ತೋಡಿನ ನೀರು ಹಾದು ಹೋಗುವ ನೆಲಮಟ್ಟಕಿಂತಲೂ 3-4 ಅಡಿ ಎತ್ತರದಲ್ಲಿ ಅಭಿವೃದ್ಧಿ ಪಡಿಸಿರುವಂತಹ ಕಿರು ಸೇತುವೆಯು ಕಳೆದ ಹಲವಾರು ದಿನಗಳಿಂದ ಸುರಿದ ನೀರಿಗೆ ತಡೆಯಾಗಿ ಪರಿಸರದ ಮನೆ, ಕಟ್ಟಡ, ದೇವಸ್ಥಾನ, ಹತ್ತಾರು ಮನೆಗಳಿಗೆ ಸಂಪರ್ಕಿಸುವ ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೃತಕ ನೆರೆಯ ಪರಿಸ್ಥಿತಿ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು,ಸ್ಥಳೀಯರ ದೂರಿನ ಮೇರೆಗೆ ಶಾಸಕ ಡಾ. ಭರತ್ ಶೆಟ್ಟಿ ವೈ. ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾಮಗಾರಿ ಆರಂಭದಿಂದಲೂ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹಲವಾರು ಬಾರಿ ದೂರು ನೀಡಿದರೂ ಪ್ರತಿಭಟಿಸಿದವರ ಮೇಲೆ ಎಫ್.ಐ.ಆರ್ ಹಾಕಿ ಕಾಮಗಾರಿ ಮುಂದುವರಿಸಿರುವ ಬಗ್ಗೆ ಸ್ಥಳೀಯರು ಶಾಸಕರಲ್ಲಿ ದೂರಿದರು. ಸ್ಥಳೀಯರು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ಕಾಮಗಾರಿ ಮುಂದುವರಿಸಲು ಹಾಗೂ ಈಗ ಅಸಮರ್ಪಕವಾಗಿರುವ ಕಿರುಸೇತುವೆಯ ಬದಲಿಗೆ ನೀರು ನೈಸರ್ಗಿಕವಾಗಿ ಸರಾಗವಾಗಿ ಹರಿದು ಹೋಗುವಂತೆ ಹಾಗೂ ಪರಿಸರದ ಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಚಂದ್ರಹಾಸ್, ಪಂಚಾಯತ್ ಸದಸ್ಯರಾದ ವಸಂತ್, ಸವಿತಾ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತಾ ಕಾರ್ಯದರ್ಶಿ ಲಕ್ಷಣ್ ಸಫಳಿಗ, ಶಕ್ತಿಕೇಂದ್ರ ಪ್ರಮುಖ್ ತಾರನಾಥ ಸಫಳಿಗ, ಬೂತ್ ಅಧ್ಯಕ್ಷರಾದ ಉಮನಾಥ, ಶಿವಪ್ರಸಾದ್ ಶೆಟ್ಟಿ ಗ್ರಾಮಸ್ಥರಾದ ರಘವೀರ್, ಶ್ರೀನಿವಾಸ್ ಭಟ್, ಗ್ರಾಮಸ್ಥರು ಹಾಗೂ ದಿಲೀಪ್ ಬಿಲ್ಡ್ ಕಾನ್ ನ ಪ್ರಾಜೆಕ್ಟ್ ಹೆಡ್ ರಾಘವ ರಾವ್, ಪ್ರತಿನಿಧಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.