ಇತ್ತೀಚಿನ ಸುದ್ದಿ
ಅವಕಾಶಗಳ ಸದುಪಯೋಗದಿಂದ ಜೀವನದ ಯಶಸ್ಸು ನಮ್ಮದಾಗಲು ಸಾಧ್ಯ: ಉಪನ್ಯಾಸಕ ವಿಶ್ವನಾಥ ರೈ
20/03/2022, 23:59
ನೆಲ್ಯಾಡಿ(reporterkarnataka.com) : ಅವಕಾಶಗಳ ಸದುಪಯೋಗದಿಂದ ಜೀವನದ ಯಶಸ್ಸು ನಮ್ಮದಾಗಬೇಕು ಎಂದು ಕೊಕ್ಕಡ ಸರಕಾರಿ ಪಿಯು ಕಾಲೇಜಿನ ಉಪನ್ಯಾಸಕ ವಿಶ್ವನಾಥ ರೈ ಹೇಳಿದರು.
ನೆಲ್ಯಾಡಿ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜಿನ ಸಿಲ್ವರ್ ಜೂಬಿಲಿ ಸಭಾಂಗಣದಲ್ಲಿ ನಡೆಸಿದ ಆನ್ಲೈನ್ ಜಾನಪದ ಗೀತ ಗಾಯನ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ನಿರ್ಧೇಶಕರಾದ ರೆ|ಫಾ| ಸತ್ಯನ್ ತೋಮಸ್ ಮಾತನಾಡಿ, ವಿದ್ಯಾರ್ಥಿಗಳು ಜೀವನದ ಕಷ್ಟಗಳನ್ನು ಎದುರಿಸಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೆ|ಫಾ| ತೋಮಸ್ ಬಿಜಿಲಿ ಒ.ಐ.ಸಿ,, ಸಂಸ್ಥೆಯ ಪ್ರಾಂಶುಪಾಲರಾದ ಸಜಿ.ಕೆ.ತೋಮಸ್, ತರಬೇತಿ ಅಧಿಕಾರಿ ಜೋನ್ ಪಿ.ಎಸ್. ಉಪಸ್ಥಿತರಿದ್ದು ಶುಭ ಹಾರೈಸಿದರು. ಕಿರಿಯ ತರಬೇತಿ ಅಧಿಕಾರಿ ಸುಬ್ರಾಯ ನಾಯಕ್ ಸ್ವಾಗತಿಸಿದರು. ತರಬೇತಿ ಅಧಿಕಾರಿ ಜೋನ್ ಪಿ.ಎಸ್. ವಂದಿಸಿದರು. ಕಿರಿಯ ತರಬೇತಿ ಅಧಿಕಾರಿ ಹರಿಪ್ರಸಾದ್ ರೈ ಬಿ ಕಾರ್ಯಕ್ರಮ ನಿರೂಪಿಸಿದರು.
ಆನ್ಲೈನ್ ಜಾನಪದ ಗೀತ ಗಾಯನ ಸ್ಪರ್ಧೆಯಲ್ಲಿ ಜ್ಞಾನೋದಯ ಬೆಥನಿ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಥಮ ಹಾಗೂ ಬಿಷಪ್ ಪೋಳಿಕಾರ್ಪಸ್ ಪಬ್ಳಿಕ್ ಸ್ಕೂಲ್ ಉದನೆ ದ್ವಿತೀಯ ಸ್ಥಾನ ಪಡೆದುಕೊಂಡು ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ತಮ್ಮದಾಗಿಸಿಕೊಂಡರು. ಸ್ಪರ್ಧೆಯಲ್ಲಿ ಒಟ್ಟು 13 ಶಾಲೆಗಳು ಭಾಗವಹಿಸಿದ್ದು ಎಲ್ಲಾ ತಂಡಗಳಿಗೂ ಭಾಗವಹಿಸುವಿಕೆಯ ಪ್ರಮಾಣಪತ್ರ ನೀಡಲಾಯಿತು.