ಇತ್ತೀಚಿನ ಸುದ್ದಿ
ಅವಧಿಪೂರ್ವ ಚುನಾವಣೆ ಇಲ್ಲ; ಬಿಜೆಪಿ ಬಿಟ್ಟು ಯಾರೂ ಹೋಗೊಲ್ಲ: ಸಿಎಂ ಬಸವರಾಜ ಬೊಮ್ಮಾಯಿ
13/03/2022, 23:37
ಬೆಂಗಳೂರು(reporterkarnataka.com): ನಮ್ಮ ಬಿಜೆಪಿ ಪಕ್ಷ ತೊರೆದು ಯಾರೂ ಹೋಗುವುದಿಲ್ಲ, ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ನಮ್ಮ ಪಕ್ಷದಿಂದ ಯಾರೂ ಬಿಟ್ಟು ಹೋಗುವುದಿಲ್ಲ ಎಂದು ನಿಖರವಾಗಿ ಹೇಳುತ್ತೇನೆ. ಬೇರೆ ಪಕ್ಷದಿಂದ ಬರುವವರ ಬಗ್ಗೆ ಕಾದು ನೋಡಿ ಎಂದು ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ವಿಧಾನಸಭೆಗೆ ಅವಧಿ ಪೂರ್ವ ಚುನಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾನುವಾರ ತಮ್ಮ ನಿವಾಸದ ಎದುರು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಹೋಗುತ್ತಾರೆ ಎಂಬುದೆಲ್ಲ ಊಹಾಪೋಹಗಳಷ್ಟೆ, ಅವಕ್ಕೆ ರೆಕ್ಕೆ-ಪುಕ್ಕವಿಲ್ಲ, ಬಾಲವಿಲ್ಲ. ನಮ್ಮ ಪಕ್ಷದಿಂದ ಯಾರೂ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ, ಬೇರೆ ಪಕ್ಷಗಳಿಂದ ಬಿಜೆಪಿಗೆ ಬರುವವರ ಬಗ್ಗೆ ಕಾದು ನೋಡಿ ಎಂದು ಕುತೂಹಲ ಕೆರಳಿಸಿದರು.
ಇದೇ ತಿಂಗಳ 30-31ರಂದು ರಾಜ್ಯ ಕಾರ್ಯಕಾರಿಣಿ ಸಭೆ ಇದೆ. ಅದರಲ್ಲಿ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಬಗ್ಗೆ ತೀರ್ಮಾನವಾಗುತ್ತದೆ ಎಂದರು.
ಅವಧಿಪೂರ್ವ ಚುನಾವಣೆ ಇಲ್ಲ: ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಬಗ್ಗೆ ಚರ್ಚೆಯೇ ನಡೆದಿಲ್ಲ, ಅದು ನೀವು ಮಾಧ್ಯಮದವರು ಚರ್ಚೆ ಮಾಡುತ್ತೀರಿ ಅಷ್ಟೆ, ನಮ್ಮ ಪಕ್ಷದಲ್ಲಿ ಯಾವುದೇ ಹಂತದಲ್ಲಿ ಚರ್ಚೆಯಾಗಿಲ್ಲ, ಸಂಪುಟ ವಿಸ್ತರಣೆ ಕುರಿತು ವರಿಷ್ಠರು ಇನ್ನೂ ಸೂಚನೆ ಕೊಟ್ಟಿಲ್ಲ, ವರಿಷ್ಠರು ಸೂಚಿಸಿದಾಗ ದೆಹಲಿಗೆ ಹೋಗಿ ಸಚಿವ ಸಂಪುಟ ಪುನರ್ರಚನೆ ಬಗ್ಗೆ ಮಾತನಾಡಿಕೊಂಡು ಬರುತ್ತೇನೆ ಎಂದರು.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಭೇಟಿ: ಇನ್ನು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬೆನ್ನಲ್ಲೇ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಇಂದು ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನ ರೇಸ್ ವ್ಯೂವ್ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿ ಕೆಲಹೊತ್ತು ಚರ್ಚಿಸಿದ್ದಾರೆ. ಈ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.