ಇತ್ತೀಚಿನ ಸುದ್ದಿ
ಆಗಸ್ಟ್ 27ರಂದು ಭ್ರಾಮರೀ ಯಕ್ಷವೈಭವ 2022; ಭ್ರಾಮರೀ ಯಕ್ಷಸೇವಾ ಪುರಸ್ಕಾರ
19/08/2022, 12:40

ಮಂಗಳೂರು(reporterkarnataka.com): ಭ್ರಾಮರೀ ಯಕ್ಷಮಿತ್ರರು ಮಂಗಳೂರು ಇದರ 5ನೇ ವರ್ಷದ ಭ್ರಾಮರೀ ಯಕ್ಷವೈಭವ 2022 ಆಗಸ್ಟ್ 27ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಂಜೆ 7 ರಿಂದ ಮರುದಿನ ಮುಂಜಾನೆಯವರೆಗೆ ಜರಗಲಿದೆ.
ಯಕ್ಷಗಾನದ ಹಿರಿಯ ಹಾಸ್ಯಕಲಾವಿದ ಪೆರುವಡಿ ನಾರಾಯಣ ಭಟ್ಟರಿಗೆ ಭ್ರಾಮರೀ ಯಕ್ಷಮಣಿ ಪ್ರಶಸ್ತಿ , ನೇಪಥ್ಯ ಕಲಾವಿದರಾದ ಗೋಪಾಲ ಪೂಜಾರಿ ಹಾಗೂ ಬೊಕ್ಕಸ ಜಗನ್ನಾಥ ರಾವ್ ಅವರಿಗೆ ಭ್ರಾಮರೀ ಯಕ್ಷಸೇವಾ ಪುರಸ್ಕಾರ ನೀಡಿ ಈ ಸಂದರ್ಭದಲ್ಲಿ ಗೌರವಿಸಲಾಗುವುದು.
ಹಿರಿಯ ಯಕ್ಷಗಾನ ಪ್ರಸಂಗಕರ್ತ ಪೊಳಲಿ ನಿತ್ಯಾನಂದ ಕಾರಂತ ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ, ಮೇಯರ್ ಪ್ರೇಮಾನಂದ ಶೆಟ್ಟಿ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್, ಧಾರ್ಮಿಕ ಪರಿಷತ್ ಸದಸ್ಯ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ,ಮಂಗಳೂರು ಗಣೇಶೋತ್ಸವದ ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ದಿವಂಗತ ಬಲಿಪ ಪ್ರಸಾದ ಭಟ್ ಅವರ ಸಂಸ್ಮರಣೆ, ಯಕ್ಷಗಾನ ಪೂರ್ವರಂಗ, ಚೆಂಡೆ ಜುಗಲ್ ಬಂಧಿ, ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ದಮಯಂತಿ ಪುನಃ ಸ್ವಯಂವರ, ಮಾಯಾತಿಲೋತ್ತಮೆ, ವೀರವರ್ಮ ಕಾಳಗ ಯಕ್ಷಗಾನದ ಪ್ರದರ್ಶನ ಜರಗಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೂ ಉಚಿತ ಪ್ರವೇಶ ಇರುತ್ತದೆ.