ಇತ್ತೀಚಿನ ಸುದ್ದಿ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಹಂಪನಕಟ್ಟೆ ಶಾಖೆ: ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ಮತ್ತು ದಂತ ತಪಾಸಣಾ ಶಿಬಿರ
15/09/2025, 10:20

ಮಂಗಳೂರು(reporterkarnataka.com):ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಹಂಪನಕಟ್ಟ ಶಾಖೆ ಮತ್ತು ದ.ಕ. ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ ಮಂಗಳೂರು ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಇದರ ಜಂಟಿ ಸಹಯೋಗದೊಂದಿಗೆ ಕೆಎಂಸಿ ಆಸ್ಪತ್ರೆ ಅತ್ತಾವರ ಮತ್ತು ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ಮಂಗಳೂರು ಇವರ ನುರಿತ ವೈದ್ಯರ ತಂಡದವರಿಂದ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ತಪಾಸಣಾ ಶಿಬಿರವು ರಾಜ್ಯ ಸರ್ಕಾರಿ ನೌಕರರ ಸಂಘದ ಸಮುದಾಯ ಭವನ ಕಟ್ಟಡದ ಎರಡನೇ ಮಹಡಿಯಲ್ಲಿ ಜರುಗಿತು.
ಈ ಕಾರ್ಯಕ್ರಮವನ್ನು ನಿವೃತ್ತ ಸಹಕಾರಿ ಸಂಘಗಳ ಉಪ ನಿಬಂಧಕರಾದ ಚಂದ್ರಶೇಖರ್ ಸುವರ್ಣ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲಯನ್ಸ್ ಕ್ಲಬ್ ಮಂಗಳೂರು, ಆದಿತ್ಯ ಇದರ ಅಧ್ಯಕ್ಷರಾದ ಲಯನ್ ನರಸಿಂಹ ಪೈ ಅವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ಮುಂದಾಳತ್ವದಲ್ಲಿ ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜದ ಎಲ್ಲಾ ವರ್ಗದ ಜನರಿಗೆ ಆರೋಗ್ಯದ ದೃಷ್ಟಿಯಿಂದ ಜನರ ಕಾಳಜಿ ಮಾಡುತ್ತಿರುವುದು ಸಂಘದ ಉನ್ನತಿಗೆ ಮುಖ್ಯವಾದ ಕಾರಣ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಯೋಗದೊಂದಿಗೆ ನಿರಂತರವಾಗಿ ಶಿಬಿರಗಳನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ” ಎಂದರು.
ದ ಕ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಸೀತಾರಾಮ್ ಎನ್. ಅವರು ಮಾತನಾಡಿ ಹಿರಿಯ ನಾಗರಿಕರಿಗೆ ಆರೋಗ್ಯದ ಕಾಳಜಿಯ ದೃಷ್ಟಿಯಿಂದ ಆರೋಗ್ಯ ತಪಾಸಣಾ ಶಿಬಿರಗಳು ಅಗತ್ಯವಾಗಿರುತ್ತದೆ. ಆದ್ದರಿಂದ ಎಲ್ಲರೂ ಈ ಶಿಬಿರದ ಪ್ರಯೋಜನೆಯನ್ನು ಪಡೆದು ಶಿಬಿರವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರು ಮಾತನಾಡಿ, “ಸಂಘವು ಎಲ್ಲಾ ಶಾಖೆಗಳಲ್ಲಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಿದೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ೮೯ಕ್ಕೂ ಮಿಕ್ಕಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿದ್ದು, ಶಿಬಿರಾರ್ಥಿಗಳಿಗೆ ಉಚಿತ ಔಷಧಿ ವಿತರಣೆ, ಅಗತ್ಯವುಳ್ಳವರಿಗೆ ಉಚಿತ ಕಣ್ಣಿನ ಪೊರೆಯ ಚಿಕಿತ್ಸೆಯನ್ನು ಸಹಭಾಗಿ ಆಸ್ಪತ್ರೆಗಳಲ್ಲಿ ನಡೆಸುತ್ತಾ ಬಂದಿರುತ್ತದೆ. ನಮ್ಮ ಶಿಬಿರಗಳಲ್ಲಿ ಒಟ್ಟು ೧೯,೦೦೦ ಕ್ಕೂ ಮಿಕ್ಕಿ ಕನ್ನಡಕವನ್ನು ಉಚಿತವಾಗಿ ವಿತರಿಸಲಾಗಿದೆ. ಸಂಘವು ಹಿರಿಯ ನಾಗರಿಕರ ಆರೋಗ್ಯದ ಕಾಳಜಿಯ ದೃಷ್ಟಿಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ಪ್ರತಿ ವರ್ಷ ನಿರಂತರವಾಗಿ ದ.ಕ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ (ರಿ). ಮಂಗಳೂರು ಇವರ ಮಹಾಸಭೆಯ ದಿನದಂದು ಆಯೋಜಿಸುತ್ತಾ ಬರುತ್ತಿದೆ. ಈ ಶಿಬಿರಕ್ಕೆ ಸಂಪೂರ್ಣ ಸಹಕಾರ ನೀಡಿರುವ ದ.ಕ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ (ರಿ). ಮಂಗಳೂರು ಇವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಹಾಗೆಯೇ ಶಿಬಿರದ ಯಶಸ್ಸಿಗೆ ಸಹಕರಿಸಿರುವ ಲಯನ್ಸ್ ಕ್ಲಬ್ ಮಂಗಳೂರು ಆದಿತ್ಯ ಇದರ ಸರ್ವ ಪದಾಧಿಕಾರಿಗಳಿಗೆ ಹಾಗೂ ಕೆಎಂಸಿ ಆಸ್ಪತ್ರೆ ಅತ್ತಾವರ ಮತ್ತು ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ಮಂಗಳೂರು ಇವರ ಆಡಳಿತ ವರ್ಗ ಹಾಗೂ ವೈದ್ಯರ ತಂಡದವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಇಂದಿನ ಈ ಶಿಬಿರವು ಎಲ್ಲ ಶಿಬಿರಾರ್ಥಿಗಳಿಗೆ ಉಪಯುಕ್ತವಾಗಲಿ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ, ನಿರ್ದೇಶಕರಾದ ರಮಾನಾಥ್ ಸನಿಲ್, ಬಿ.ಪಿ.ದಿವಾಕರ್, ಗೋಪಾಲ್ ಎಂ., ಉಮಾವತಿ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಸೌಮ್ಯ ವಿಜಯ್ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಸ್ಥಾಪಕಾಧ್ಯಕ್ಷರಾದ ವಾಮನ್ ಕೆ, ದ.ಕ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ (ರಿ). ಮಂಗಳೂರು ಇದರ ಗೌರವಾಧ್ಯಕ್ಷರಾದ ಉಮೇಶ್, ನಿಕಟಪೂರ್ವ ಅಧ್ಯಕ್ಷರಾದ ಬಿ.ಎಂ ರಾಜ್ ಗೋಪಾಲ್, ಲಯನ್ಸ್ ಮತ್ತು ಲಿಯೊ ಕ್ಲಬ್ ಮಂಗಳೂರು ಇದರ ಝೋನಲ್ ಚೇರ್ ಪರ್ಸನ್ ಆಗಿರುವ ಲಯನ್ ಶೀನ ಪೂಜಾರಿ, ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ಮಂಗಳೂರು ಇದರ ದಂತ ವೈದ್ಯರಾದ
ಸೌಮ್ಯ ಮತ್ತಿತ್ತರರು ಉಪಸ್ಧಿತರಿದ್ದರು.
ಸುಮಾರು ೧೫೦ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಶಾಖಾಧಿಕಾರಿ ಪ್ರಣೀತಾ ಇವರು ಸ್ವಾಗತಿಸಿ, ಶಾಖಾಧಿಕಾರಿ ಅಕ್ಷತಾ ವಂದಿಸಿದರು. ಹಿರಿಯ ಶಾಖಾಧಿಕಾರಿ ಸ್ವಾತಿ ಅವರು ಕಾರ್ಯಕ್ರಮ ನಿರೂಪಿಸಿದರು.