ಇತ್ತೀಚಿನ ಸುದ್ದಿ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ‘ಆಟಿದ ಪೊಲಬು’
12/08/2024, 22:34
ಮಂಗಳೂರು(reporterkarnataka.com): ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ
ಆಟಿ ತಿಂಗಳಲ್ಲಿ ತುಳು ಜನರು ಆಚರಣೆ ಮಾಡುವ ಆಟಿಡೊಂಜಿ ದಿನವನ್ನು “ಆಟಿದ ಪೊಲಬು” ಎಂಬ ಹೆಸರಿನಿಂದ ನಗರದ ಪಡೀಲ್ ನಲ್ಲಿರುವ ಸಂಘದ ಪ್ರಧಾನ ಕಚೇರಿ ‘ಆತ್ಮಶಕ್ತಿ ಸೌಧ’ದಲ್ಲಿ ಆಚರಿಸಲಾಯಿತು.
ಹಿರಿಯ ನಾಟಿ ವೈದ್ಯರಾದ ಕಲಾಯಿ ಈಶ್ವರ ಪೂಜಾರಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತಾಡಿದ ಅವರು, ಆಟಿ ತಿಂಗಳ ಮಹತ್ವವನ್ನು ತಿಳಿಸಿ, ನಾಟಿ ಔಷಧಿ ಪದ್ದತಿಗಳ ಬಗ್ಗೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.
ಕಂಕನಾಡಿ ನಗರ ಪೊಲೀಸ್ ಠಾಣೆಯ ಕ್ರೈಂ ಬ್ರಾಂಚ್‌ನ ಪರಶುರಾಮ್ ಅವರು ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಧಿಕವಾಗುತ್ತಿರುವ ಸೈಬರ್ ಅಪರಾಧದ ಬಗ್ಗೆ ಜಾಗೃತಿ ವಹಿಸುವಂತೆ ಹಾಗೂ ಗ್ರಾಹಕರಿಗೆ ಯಾವ ರೀತಿ ಮುನ್ನೆಚರಿಕೆಯನ್ನು ನೀಡಬೇಕು ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು.
ಮೂಲ್ಕಿ ಪೋಲಿಸ್ ಠಾಣೆಯ ಮಹಿಳಾ ಪೋಲಿಸ್ ಸಬ್‌ಇನ್ಸ್ಪೆಕ್ಟರ್ ಅನಿತಾ ಕೆ. ಮಾತನಾಡಿ, ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವಕಾಶವನ್ನು ನೀಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘವು ಹಲವಾರು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಮಹಿಳೆಯರು ಅಪರಾಧಗಳ ಬಗ್ಗೆಯೂ ಜಾಗೃತಿ ವಹಿಸಬೇಕು. ಯಾವುದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸೇವೆಗಳು ಅಗತ್ಯವಿದ್ದಲ್ಲಿ, ಬಿಟ್ ಪೊಲೀಸ್‌ಗೆ ಮಾಹಿತಿಯನ್ನು ನೀಡಿ ತಮ್ಮ ದೂರುಗಳನ್ನು ಸಲ್ಲಿಸುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರು ಮಾತನಾಡಿ, ಆಟಿ ತಿಂಗಳಲ್ಲಿ ತುಳು ಜನರು ಆಚರಣೆ ಮಾಡುವ ಆಟಿಡೊಂಜಿ ದಿನವನ್ನು ನಮ್ಮ ಸಂಸ್ಥೆಯಲ್ಲಿ “ಆಟಿದ ಪೊಲಬು” ಎಂಬ ಹೆಸರಿನಿಂದ ನಮ್ಮ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳ ಪೂರ್ಣ ಸಹಕಾರದಿಂದ ಅತ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಾ ಇದ್ದೇವೆ. ಇದರಲ್ಲಿ ನಮ್ಮ ಸಿಬ್ಬಂದಿಗಳು ಅವರ ಮನೆಯಲ್ಲಿ ತಯಾರು ಮಾಡಿದ ರುಚಿ ರುಚಿಯಾದ ತುಳುನಾಡಿನ ಆಟಿ ತಿಂಗಳಿನ ವಿವಿಧ ತಿಂಡಿ ತಿನಿಸುಗಳು, ಭಕ್ಷ ಭೋಜನಗಳನ್ನು ತಂದಿರುತ್ತಾರೆ. ಅಲ್ಲದೇ ಈ ಬಾರಿಯ ವೇದಿಕೆಯನ್ನು ಆಟಿ ತಿಂಗಳ ಮಹತ್ವವನ್ನು ಸಾರುವ ವಿಷಯವನ್ನು ಅಳವಡಿಸಿ ಅತ್ಯಂತ ಅರ್ಥಪೂರ್ಣವಾಗಿ ನಿರ್ಮಿಸಲಾಗಿದೆ. ಆತ್ಮಶಕ್ತಿ ಎಂಬುದು ಒಂದು ಕುಟುಂಬ ಇದ್ದ ಹಾಗೆ, ಇಲ್ಲಿಯ ಸಿಬ್ಬಂದಿಗಳು ಇಲ್ಲಿಯ ಕೆಲಸವನ್ನು ತನ್ನ ಸ್ವಂತ ಕುಟುಂಬದ ಕೆಲಸ ಎನ್ನುವ ಹಾಗೆ ಮಾಡುತ್ತಾ ಇದ್ದು, ಈ ಆಟಿದ ಕೂಟದಲ್ಲಿ ಭಾಗವಹಿಸಿದ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ಅವರ ಮನೆಯವರಿಗೆ ಧನ್ಯವಾದಗಳನ್ನು ಸಮರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯ ಪೋಲಿಸ್ ಸಬ್‌ಇನ್ಸ್ಪೆಕ್ಟರ್ ಸತೀಶ್ ಕೆ., ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ವಾಮನ್ ಕೆ, ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಮತ್ತಿತ್ತರರರು ಉಪಸ್ಥಿತರಿದ್ದರು.
ಕಂಕನಾಡಿ ನಗರ ಪೊಲೀಸ್ ಠಾಣೆಯ ಕ್ರೈಂ ಬ್ರಾಂಚ್‌ನ ನಟರಾಜ್, ಯುವರಾಜ್, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾದ ಪರಮೇಶ್ವರ ಜಿ. ಪೂಜಾರಿ, ಆನಂದ್ ಎಸ್. ಕೊಂಡಾಣ, ಸೀತಾರಾಮ್ ಎನ್, ರಮಾನಾಥ್ ಸನಿಲ್, ಚಂದ್ರಹಾಸ್ ಮರೋಳಿ, ದಿವಾಕರ್ ಬಿ.ಪಿ , ಗೋಪಾಲ್ ಎಮ್, , ಸಲಹೆಗಾರ ಅಶೋಕ್ ಕುಮಾರ್, ಹಿರಿಯ ಗ್ರಾಹಕರಾದ ಸುಲತಾ ತಲ್ವಾರ್ ಮತ್ತಿತರರು ಭಾಗವಹಿಸಿದರು.
ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಸ್ವಾಗತಿಸಿದರು. ಉಪಾಧ್ಯಕ್ಷ ನೇಮಿರಾಜ್ ಪಿ. ವಂದಿಸಿದರು. ಶಾಖಾಧಿಕಾರಿ ಧನಲಕ್ಷ್ಮೀ
ಕಾರ್ಯಕ್ರಮ ನಿರೂಪಿಸಿದರು.