ಇತ್ತೀಚಿನ ಸುದ್ದಿ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ 32ನೇ ಪಕ್ಷಿಕೆರೆ ಶಾಖೆ ಮೇ 10ರಂದು ಉದ್ಘಾಟನೆ
08/05/2024, 19:43
ಮಂಗಳೂರು(reporterkarnataka.com): ನಗರದ ಪಡೀಲ್‌ನಲ್ಲಿ ಸ್ವಂತ ಆಡಳಿತ ಕಟ್ಟಡವನ್ನು ಹೊಂದಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ 31 ಶಾಖೆಗಳನ್ನು ಹೊಂದಿದ್ದು, ಇದೀಗ ಮುಲ್ಕಿಯ ಮುಖ್ಯ ರಸ್ತೆಯಲ್ಲಿರುವ ‘ಲಘುವಿ ಕಾಂಪ್ಲೆಕ್ಸ್’, ನಲ್ಲಿ ತನ್ನ ನೂತನ 32ನೇ ಪಕ್ಷಿಕೆರೆ ಶಾಖೆಯು ಮೇ 10ರಂದು ಅಪರಾಹ್ನ 12.೦೦ ಗಂಟೆಗೆ ಸಾರ್ವಜನಿಕ ಸೇವೆಗಾಗಿ ಲೋಕಾರ್ಪಣೆಗೊಳ್ಳಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ “ಸಹಕಾರ ರತ್ನ” ಚಿತ್ತರಂಜನ್ ಬೋಳಾರ್ ಅವರು ವಹಿಸಲಿದ್ದಾರೆ. ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ನೂತನ ಶಾಖೆಯ ಉದ್ಘಾಟನೆಯನ್ನು ಮಾಡಲಿದ್ದಾರೆ. ಪಕ್ಷಿಕೆರೆ ಸಂತ ಜುದರ ಪುಣ್ಯಕ್ಷೇತ್ರದ ಧರ್ಮಗುರುಗಳಾದ ಮೆಲ್ವಿನ್ ನೊರೊನ್ಹಾ ಅವರು ದೀಪ ಪ್ರಜ್ವಲನೆಯನ್ನು ಮಾಡಲಿದ್ದಾರೆ. ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ. ಸೀತಾರಾಮ್ ಶೆಟ್ಟಿ ಅವರು ಭದ್ರತಾಕೋಶ ಉದ್ಘಾಟನೆಯನ್ನು ಮಾಡಲಿದ್ದಾರೆ. ಕೆಮ್ರಾಲ್ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಮಯ್ಯದಿ ಅವರು ಗಣಕೀಕೃತ ಬ್ಯಾಂಕಿಂಗ್‌ಗೆ ಚಾಲನೆ ನೀಡಲಿದ್ದಾರೆ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ.) ಎಸ್ ಕೋಡಿ, ಪಕ್ಷಿಕೆರೆ ಇದರ ಅಧ್ಯಕ್ಷರಾದ ನವೀನ್ ಹರಿಪಾದೆ ಅವರು ನಿರಖು ಠೇವಣಿ ಪತ್ರ ಬಿಡುಗಡೆಯನ್ನು ಮಾಡಲಿದ್ದಾರೆ. ಸಮಾಜ ಸೇವಕರಾದ ಧನಂಜಯ ಶೆಟ್ಟಿಗಾರ್ ಅವರು ಇ-ಮುದ್ರಾಂಕ ಸೇವೆಗೆ ಚಾಲನೆ ನೀಡಲಿದ್ದಾರೆ. ಪ್ರಿಯದರ್ಶಿನಿ ಸಹಕಾರ ಸಂಘ (ನಿ.) ಹಳೆಯಂಗಡಿ ಇದರ ಅಧ್ಯಕ್ಷರಾದ ಎಚ್. ವಸಂತ್ ಬೆರ್ನಾಡ್ ಅವರು ಆವರ್ತನ ಠೇವಣಿಗೆ ಚಾಲನೆಯನ್ನು ನೀಡಲಿದ್ದಾರೆ. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆಯಾದ ಕಸ್ತೂರಿ ಪಂಜ ಅವರು ಉಳಿತಾಯ ಖಾತೆಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ವಿನೋದ್ ಬೊಳ್ಳೂರು ಹಾಗೂ ಕಟ್ಟಡದ ಮಾಲಕರಾದ ಶ್ರೀನಿವಾಸ ಕೋಟ್ಯಾನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನೂತನ ಶಾಖೆಯ ಉದ್ಘಾಟನಾ ಸಮಾರಂಭದ ಪ್ರಯಕ್ತ ನಿರಖು ಠೇವಣಿಯ ಮೇಲೆ ವಿಶೇಷ ಬಡ್ಡಿ ದರವನ್ನು ನೀಡಲಾಗುವುದು. ಸಂಘದ ಎಲ್ಲಾ ಶಾಖೆಗಳಲ್ಲಿ ಚಿನ್ನಾಭರಣ ಸಾಲ, ನೆಫ್ಟ್, ಆರ್‌ಟಿಜಿಎಸ್, ಇ-ಮುದ್ರಾಂಕ ಸೇವೆಯು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಲಭ್ಯವಿದ್ದು, ಸಂಘದಲ್ಲಿ ಈಗಾಗಲೇ ಕೋರ್-ಬ್ಯಾಂಕಿಂಗ್ ಸೌಲಭ್ಯ ಅಳವಡಿಸಲಾಗಿದೆ. ಅದೇ ರೀತಿ ಎಲ್‌ಐಸಿ, ಕೇರ್, ಇಫ್ಕೋಟೋಕಿಯ ಜನರಲ್ ಇನ್ಸುರೆನ್ಸ್ ಕಂಪೆನಿಯ ವಿಮಾ ಸೌಲಭ್ಯಗಳು ಲಭ್ಯವಿರುತ್ತದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.