ಇತ್ತೀಚಿನ ಸುದ್ದಿ
ಆತ್ಮಸಾಕ್ಷಿಗೆ ಅನುಗುಣವಾಗಿ ಕನ್ನಡ ಅನುಷ್ಠಾನಕ್ಕೆ ತನ್ನಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ
08/04/2022, 21:00
ಮಂಗಳೂರು(reporterkarnataka.com): ಆತ್ಮಸಾಕ್ಷಿಗೆ ಅನುಗುಣವಾಗಿ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆಯ ಅನುಷ್ಟಾನ ಮಾಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಟಿ.ಎಸ್. ನಾಗಾಭರಣ ಕರೆ ನೀಡಿದರು.
ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಲ್ಲಿನ ರಾಜ್ಯ ಭಾಷೆ ಕನ್ನಡ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿಯೂ ಅದು ಸಮಪರ್ಕ ಅನುಷ್ಠಾನವಾಗಬೇಕು, ಈ ದಿಸೆಯಲ್ಲಿ ಜಿಲ್ಲೆಯಲ್ಲಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಇಲಾಖೆಗಳು ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದು ಅವರು ಒತ್ತಿ ಹೇಳಿದರು.
ಸರ್ಕಾರಿ ಇಲಾಖೆಗಳ ಮಾಹಿತಿ ನೀಡುವ ವೆಬ್‍ಸೈಟ್‍ಗಳಲ್ಲಿ ಕಡ್ಡಾಯವಾಗಿ ಡೀಫಾಲ್ಟ್ ಕನ್ನಡವನ್ನೇ ಬಳಸಲು ಆದ್ಯತೆ ನೀಡಬೇಕು. ಕೆಲವು ರಾಷ್ಟ್ರೀಕೃತ ಬ್ಯಾಂಕುಗಳ ವೆಬ್‍ಸೈಟ್‍ಗಳಲ್ಲಿ ಡಿಫಾಲ್ಟ್ ಕನ್ನಡದ ಬದಲು ಇಂಗ್ಲಿಷ್ ಭಾಷೆಯನ್ನೇ ಪ್ರಧಾನವಾಗಿ ಬಳಸಲಾಗುತ್ತಿದೆ, ಜಿಲ್ಲೆಯ ಲೀಡ್ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕಿಗೆ ಕನ್ನಡ ಭಾಷೆಯ ಅಪಾರ ಇತಿಹಾಸವಿದೆ, ಬ್ಯಾಂಕ್‍ಗಳಲ್ಲಿ ಕನ್ನಡತನವಿದ್ದಲ್ಲೇ ಆ ಬ್ಯಾಂಕ್ ನಮ್ಮದು ಎಂಬ ಗ್ರಾಹಕರ ಒಲವು ಹೆಚ್ಚುತ್ತದೆ, ಆದ ಕಾರಣ ಕಡ್ಡಾಯವಾಗಿ ಕನ್ನಡವನ್ನು ಬಳಸುವ ಅನಿವಾರ್ಯತೆ ಇದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಕೆಲವು ಎ.ಟಿ.ಎಂಗಳಲ್ಲಿ ಕನ್ನಡದ ಬದಲು ಮಲಯಾಳಂ ಭಾಷೆ ಬಳಕೆಯಾಗುತ್ತಿದೆ ಎಂಬ ದೂರುಗಳು ಬಂದಿವೆ, ಲೀಡ್ ಬ್ಯಾಂಕ್‍ನ ಮ್ಯಾನೇಜರ್ ಎ.ಟಿ.ಎಂಗಳನ್ನು ಪರಿಶೀಲಿಸಿ ಅಲ್ಲಿ ಕನ್ನಡ ಬಳಕೆಯಾಗುತ್ತಿರುವ ಬಗ್ಗೆ ದೃಢೀಕರಿಸಬೇಕು, ತ್ರಿಭಾಷಾ ಸೂತ್ರದನ್ವಯ ಬ್ಯಾಂಕುಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಇರಲೇಬೇಕು ಎಂದರು.
ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಹಾಗೂ ಅಧಿಕಾರಿ, ಸಿಬ್ಬಂದಿಗಳಿಗೆ ಅನುಕೂಲವಾಗುವಂತೆ ಪದಕಣಜ ಎಂಬ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ, ಆ ಆಪ್ ಮೊಬೈಲ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ, ಆ ಮೂಲಕ ದೈನಂದಿನ ಕೆಲಸ ಕಾರ್ಯಗಳಿಗೆ ಅನುಕೂಲವಾಗುವ ಪದಗಳನ್ನು ಪಡೆಯಬಹುದಾಗಿದೆ, ಇದೀಗ 66 ಸಾವಿರ ಪದಗಳಿಗಳಿದ್ದು, ಮುಂದಿನ ಎರಡು ವರ್ಷಗಳಲ್ಲಿ 6 ಲಕ್ಷ ಪದಗಳನ್ನು ಅಳವಡಿಸುವ ಕೆಲಸ ಮಾಡಲಾಗುತ್ತಿದೆ, 210 ನಿಘಂಟುಗಳು ಲಭ್ಯವಾಗಲಿವೆ ಎಂದು ಮಾಹಿತಿ ನೀಡಿದರು.
ಶಾಲೆಗಳಲ್ಲಿ ಕನ್ನಡ ಕಲಿಕೆ ಅಧಿನಿಯಮ-2017ರ ಅನ್ವಯ ಕೇಂದ್ರೀಯ ವಿದ್ಯಾಲಯ ಶಾಲೆಗಳನ್ನು ಹೊರತುಪಡಿಸಿ ಎಲ್ಲಾ ಶಾಲೆಗಳಲ್ಲೂ ಕನ್ನಡ ಕಲಿಸಲು ನಿರ್ದೇಶನ ನೀಡಲಾಗಿದೆ ಎಂದವರು ಜಿಲ್ಲೆಯ ಸ್ಥಿತಿಗತಿಗಳನ್ನು ವಿವರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಧಾಕರ್, ಜಿಲ್ಲೆಯಲ್ಲಿ 714 ಸಂಸ್ಥೆಗಳಿದ್ದು, 310 ಅನುದಾನಿತ ಹಾಗೂ 404 ಅನುದಾನರಹಿತ ಶಾಲೆಗಳಿವೆ, ಕೇಂದ್ರೀಯ ವಿದ್ಯಾಲಯಗಳನ್ನು ಹೊರತುಪಡಿಸಿ ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು ಕಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಂತರ ಮಾತನಾಡಿದ ಅಧ್ಯಕ್ಷರು ಜಿಲ್ಲೆಯಲ್ಲಿರುವ ಮದರಸಗಳ ಪಟ್ಟಿ ತಯಾರಿಸಿ ಅದರಲ್ಲಿ ಕನ್ನಡ ಭಾಷೆಯನ್ನು ಕಲಿಸುತ್ತಿರುವ ಬಗ್ಗೆ ಮಾಹಿತಿ ಸಿದ್ದಪಡಿಸಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.
ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಕಲಿಸುವ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸಾಕಷ್ಟು ಕ್ರಮ ವಹಿಸಲಾಗುತ್ತಿದೆ, ಅದರ ಅಂಗವಾಗಿ ನವದೆಹಲಿ ಹಾಗೂ ಬೆಂಗಳೂರಿನಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಮುಖ್ಯಸ್ಥರನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಎಕ್ಕೂರಿನ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಯಾದವ್ ಮಂಗಳೂರಿಗೆ ಬಂದು 6 ವರ್ಷಗಳಾದರೂ ಕನ್ನಡ ಭಾಷೆ ಕಲಿಯದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅಧ್ಯಕ್ಷರು, ಮುಂದಿನ ವರ್ಷದೊಳಗೆ ಕನ್ನಡವನ್ನು ಕಲಿಯುವಂತೆ ಸಲಹೆ ನೀಡಿದರು, ಕೇಂದ್ರಿಯ ವಿಶ್ವವಿದ್ಯಾಲಯದ ಸ್ಥಾಪನೆಗೆ ಜಾಗ ಕೊಡುವುದು ರಾಜ್ಯ ಸರ್ಕಾರ, ಆದರೆ ಸ್ಥಳೀಯ ಭಾಷೆಯನ್ನು ಕಲಿಯದೇ ಅವರು ಕನ್ನಡ ಕಲಿಕೆ ಬಗ್ಗೆ ನಿರುತ್ಸಾಹ ತೋರುತ್ತಿರುವುದು ಸರಿಯಲ್ಲ ಎಂದರು.
ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾತನಾಡಿ, ಇಲಾಖೆಯಲ್ಲಿ ಕನ್ನಡ ಭಾಷೆ ಯ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ, ಸಂಪೂರ್ಣ ಆಡಳಿತ ಕನ್ನಡ ಭಾಷೆಯಲ್ಲಿ ಆಡಳಿತ ನಡೆಯುತ್ತಿದ್ದು, ಜಾಹೀರಾತು ನೀಡುವುದು, ಸಭೆಗಳು, ಸುತ್ತೋಲೆಗಳು ಹಾಗೂ ಕೇಂದ್ರ ಸರ್ಕಾರದ ಪತ್ರಗಳನ್ನು ಕನ್ನಡ ಭಾಷೆ
ಯಲ್ಲಿ ತರ್ಜುಮೆ ಮಾಡಿ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಮಾತನಾಡಿ, ಮಹಾನಗರಪಾಲಿಕೆ ವತಿಯಿಂದ ಆಸ್ತಿ ತೆರಿಗೆ ಕಟ್ಟುವ ಸಾಫ್ಟ್‍ವೇರ್ ಅನ್ನು ಕನ್ನಡದಲ್ಲಿ ನಿರ್ವಹಿಸಲಾಗುತ್ತಿದೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ನಾಮಫಲಕಗಳು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿರುವಂತೆ ಕ್ರಮಕೈಗೊಳ್ಳಲಾಗಿದೆ, ವಾಣಿಜ್ಯ ಮಳಿಗೆಗಳಿಗೆ ಪರವಾನಿಗೆ ನೀಡುವ ಸಂದರ್ಭಗಳಲ್ಲಿ ಕನ್ನಡ ನಾಮಫಲಕ ಬಳಸುವ ಬಗ್ಗೆ ಖಚಿತ ಪಡಿಸಿಕೊಂಡ ನಂತರ ಅನುಮತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕನ್ನಡದಿಂದ ಇಂಗ್ಲೀಷ್‍ಗೆ ನೇರವಾಗಿ ಭಾμÁಂತರ ಮಾಡಲಾದ ನಾಮಫಕಗಳನ್ನು ಪರಿಶೀಲಿಸಬೇಕು, ಅಪಭ್ರಂಶವಾಗಿರುವ ನಾಮಫಕಗಳನ್ನು ಸರಿಪಡಿಸುವಂತೆ ತಿಳಿಸಿದ ಅಧ್ಯಕ್ಷರು ಜಿಲ್ಲೆಯಿಂದ ವಿದೇಶಗಳಿಗೆ ರಫ್ತಾಗುವ ಉತ್ಪನ್ನಗಳ ಮೇಲೆ ಕನ್ನಡ ಸೇರಿದಂತೆ ತುಳು ಭಾಷೆಯ ಪದಗಳನ್ನು ಬಳಸಬೇಕು ಆ ಮೂಲಕ ಈ ಭಾಷೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಭಾಷೆಯನ್ನಾಗಿ ರೂಪಿಸುವಂತೆ ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸರ್ಕಾರದ ಖಜಾನೆ-2 ಹಾಗೂ ಮಹಾಲೇಖಪಾಲಕರ ಕಚೇರಿಗಳಲ್ಲಿ ಕನ್ನಡ ಭಾಷೆಯನ್ನು ಅನುಷ್ಠಾನಕ್ಕೆ ತರಲು ಈಗಾಗಲೇ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದ ಪ್ರಯುಕ್ತ ಕನ್ನಡ ಭಾಷೆ
ಯನ್ನು ಅಳವಡಿಸಿಕೊಳ್ಳಲು ಎರಡು ಇಲಾಖೆಯವರು ಒಪ್ಪಿಗೆ ನೀಡಿರುತ್ತಾರೆ, ಅಧಿಕಾರಿಗಳು ಕನ್ನಡ ಬಳಸುವ ಸಾಧ್ಯತೆಗಳನ್ನು ಹೆಚ್ಚು ಹೆಚ್ಚು ಹುಡುಕಬೇಕು ಹಾಗೂ ಅದು ಆಶಯವಾಗಬೇಕು, ಆ ಮೂಲಕ ಆತ್ಮಸಾಕ್ಷಿಗೆ ಅನುಗುಣವಾಗಿ ಕನ್ನಡವನ್ನು ಬಳಸುವ ಕೆಲಸವಾಗಬೇಕು, ಎಲ್ಲೆಡೆಯೂ ಕನ್ನಡವನ್ನು ಕಾಣಿಸಿ-ಕನ್ನಡವನ್ನು ಕೇಳಿಸುವ ಎನ್ನುವ ಮಂತ್ರದೊಂದಿಗೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಟಿ.ಎಸ್. ನಾಗಾಭರಣ ಅವರು ಹೇಳಿದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಮಾತನಾಡಿ, ಜಿಲ್ಲೆಯಲ್ಲಿ ನಿಯಮಿತವಾಗಿ ಕನ್ನಡ ಅನುಷ್ಠಾನ ಸಮಿತಿಯ ಸಭೆ ನಡೆಸಿ ಕನ್ನಡ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ, ತ್ರೈಮಾಸಿಕ ಕೆಡಿಪಿ ಸಭೆಗಳಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿಸಿಕೊಂಡು ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ ಹಾಗೂ ಕೇಂದ್ರ ಸರ್ಕಾರದಿಂದ ಬರುವ ಎಲ್ಲಾ ಸುತ್ತೋಲೆಗಳನ್ನು ಇಂಗ್ಲಿಷ್
ನಿಂದ ಕನ್ನಡಕ್ಕೆ ತರ್ಜುಮೆ ಮಾಡಿ ಆ ಬಗ್ಗೆ ಮಾಹಿತಿ ನೀಡಲಾಗುತ್ತದೆ ಹಾಗೂ ನಾಮಫಲಕಗಳನ್ನು ಹಾಕುವಾಗ ಕನ್ನಡಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಮಾತನಾಡಿ, ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಬರುವ ಎಲ್ಲಾ ಇಲಾಖೆಗಳ ವೆಬ್‍ಸೈಟ್‍ಗಳಲ್ಲಿ ಕನ್ನಡ ಭಾಷೆ
ಯನ್ನೇ ಬಳಕೆ ಮಾಡಲಾಗುತ್ತಿದೆ ಹಾಗೂ ಡಿ.ಎಲ್.ಬಿ.ಸಿ ಸಭೆ ನಡೆಸುವ ಸಂದರ್ಭದಲ್ಲಿ ಎಲ್ಲಾ ಬ್ಯಾಂಕುಗಳಿಗೂ ಸ್ಥಳೀಯ ಭಾಷೆಯನ್ನು ಬಲ್ಲ ಅಧಿಕಾರಿ, ಸಿಬ್ಬಂದಿಯನ್ನು ಕಡ್ಡಾಯವಾಗಿ ನೇಮಕ ಮಾಡಿಕೊಳ್ಳುವಂತೆ ಹಾಗೂ ಬ್ಯಾಂಕುಗಳಲ್ಲಿ ನೀಡಲಾಗುವ ಅರ್ಜಿಯಲ್ಲಿ ಇಂಗ್ಲಿಷ್ ಭಾಷೆಯೊಂದಿಗೆ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಮುದ್ರಿಸಿ ನೀಡುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಮೇಶ್ ಗುಬ್ಬಿಗೂಡು, ಕಾರ್ಯದರ್ಶಿ ಡಾ.ಸಂತೋಷ್ ಹನಗಲ್ಲಾ ವೇದಿಕೆಯಲ್ಲಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಸ್ವಾಗತಿಸಿದರು.