ಇತ್ತೀಚಿನ ಸುದ್ದಿ
ಅಥಣಿ ಪುರಸಭೆ ಅಧಿಕಾರಿಗಳ ಭಾರಿ ಎಡವಟ್ಟು: ಅತ್ತ ರಸ್ತೆಯೂ ಇಲ್ಲ, ಇತ್ತ ರೈತರಿಗೆ ಜಾಗವೂ ಇಲ್ಲ!
21/01/2022, 21:12
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿ ಪಟ್ಟಣದ ಜಡ್ಡಿ ವರೆಗೆ ಬೈಪಾಸ್ ರಸ್ತೆ ನಿರ್ಮಿಸಲು ಅವಶ್ಯಕವಾದ ಜಮೀನನ್ನು ರೈತರಿಂದ ಸ್ವಾಧೀನಪಡಿಸಿಕೊಂಡಿದ್ದು, ಇತ್ತ ರಸ್ತೆಯು ನಿರ್ಮಿಸದೆ ಅತ್ತ ರೈತರಿಗೆ ಪರ್ಯಾಯ ಜಾಗವನ್ನೂ ಒದಗಿಸದೆ ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
2012- 13ನೇ ಸಾಲಿನಲ್ಲಿ ಕೊಡಬೇಕಾದ ಜಾಗವನ್ನು ಕೊಡಲು ಅಥಣಿ ಪುರಸಭೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. 2012 -13ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ ಕಾಮಗಾರಿ ಆಸ್ತಿ ನಂಬರ್ 2ರ ಅಥಣಿ ಪಟ್ಟಣದ ಜಡ್ಡಿ ವರೆಗೆ ಬೈಪಾಸ್ ರಸ್ತೆ ನಿರ್ಮಾಣ ನಿರ್ಮಿಸುವಲ್ಲಿ ಅವಶ್ಯಕವಾದ ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡು ಅದರ ಬದಲಾಗಿ ರೈತರಿಗೆ ಬೇರೆ ಜಾಗವನ್ನ ಹಸ್ತಾಂತರಿಸಬೇಕಾಗಿತ್ತು. ಈ ಕುರಿತಾಗಿ ದಿನಾಂಕ 09/11/2016 ರ ಅಥಣಿ ಪುರಸಭೆ ಕಾರ್ಯಾಲಯದಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಠರಾವು ಪಾಸ್ ಮಾಡಲಾಗಿತ್ತು.
ಅಂದಿನ ಪುರಸಭೆ ಮುಖ್ಯ ಅಧಿಕಾರಿ ಎಸ್. ಎ. ಕೌಲಾಪುರ ಜಾಗವನ್ನು ನೀಡುವ ಭರವಸೆಯನ್ನು ಕೂಡ ನೀಡಿದ್ದರು. ಆದರೆ ಅಧಿಕೃತವಾಗಿ
ಫಾರ್ಮ್ ನಂ.9 ಇನ್ನು ನೀಡಿಲ್ಲ. ಇದ್ದ ಅಲ್ಪ ಜಮೀನಿನಲ್ಲಿ ಹೇಗೋ ಜೀವನ ಸಾಗಿಸುತ್ತಿದ್ದೆ ಅದನ್ನು ಕಸಿದುಕೊಂಡು ನಮ್ಮನ್ನ ಬೀದಿಗೆ ಬಿಟ್ಟಿದ್ದಾರೆ ಎಂದು ರೈತರು ಗೋಳು ಹೇಳಿಕೊಳ್ಳುತ್ತಿದ್ದಾರೆ.
ಇದ್ದೆರಡು ಮಕ್ಕಳು ನಮ್ಮನ್ನಗಲಿದರು. ಚಿಕ್ಕ ಚಿಕ್ಕ ಮೊಮ್ಮಕಳನ್ನ ಕರೆದುಕೊಂಡು ಜೀವನ ಸಾಗಿಸಲು ಬಹಳ ಕಷ್ಟವಾಗುತ್ತಿದೆ. ಕೂಡಲೇ ಎಚ್ಚೆತ್ತುಕೊಂಡು ಸ್ಥಳೀಯ ಶಾಸಕರು ಸಂಬಂಧಪಟ್ಟ ಅಧಿಕಾರಿಗಳು ನಮಗೆ ನ್ಯಾಯ ಕೊಡಿಸಬೇಕೆಂದು ನೊಂದ ರೈತ ಸಿದ್ದಪ್ಪ ಕಳಸಗೊಂಡ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.
ಈ ಕುರಿತು ಧ್ವನಿ ಎತ್ತಿದ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರಾದ ರಾಜಕುಮಾರ ಜಂಬಗಿ ಅತ್ತ ರಸ್ತೆಯು ಅರ್ಧಕ್ಕೆ ನಿಂತಿದೆ. ಇತ್ತ ರೈತರಿಗೆ ಒದಗಿಸಬೇಕಾದ ಜಾಗವನ್ನ ಕೊಟ್ಟಿಲ್ಲ. ರಸ್ತೆ ಅರ್ಧಕ್ಕೆ ನಿಂತ ಕಾರಣ ಜನರಿಗೆ ತುಂಬಾ ತೊಂದರೆ ಆಗುತ್ತಿದ್ದೂ ಅಥಣಿ ಪುರಸಭೆ ಅಧಿಕಾರಿಗಳು ಎಚೆತ್ತುಕೊಂಡು ಬೇಗ ಕೂಟ್ಟ ಮಾತಿನಂತೆ ನಡೆದುಕೊಳ್ಳಿ. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.