ಇತ್ತೀಚಿನ ಸುದ್ದಿ
ಅಟಲ ಬಿಹಾರಿ ವಾಜಪೇಯಿ ಅಜಾತಶತ್ರು ಜನ ನಾಯಕ: ಕಂಚಿನ ಪ್ರತಿಮೆ ಉದ್ಘಾಟಿಸಿ ಮುಖ್ಯಮಂತ್ರಿ ಬೊಮ್ಮಾಯಿ
25/12/2022, 21:08

ಬೆಂಗಳೂರು(reporterkarnataka.com): ಸ್ವಾತಂತ್ರ್ಯ ನಂತರ ಯಾವುದಾದರೂ ಪ್ರಧಾನ ಮಂತ್ರಿಗೆ ಅಜಾತಶತ್ರು ಎನ್ನುವ ನಾಮಾಂಕಿತವಿದ್ದರೆ, ಅದು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಭಾನುವಾರ ನಗರದಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ಅವರ ಕಂಚಿನ ಪ್ರತಿಮೆ ಹಾಗೂ ಉದ್ಯಾನವನದ ಉದ್ಘಾಟನೆಯನ್ನು ನೆರವೇರಿಸಿದ ಬಳಿಕ ಮಾತನಾಡಿದರು.
ಅಟಲ್ ಬಿಹಾರಿ ವಾಜಪೇಯಿ ಅವರು ಎಲ್ಲರನ್ನು ಪ್ರೀತಿಸುವಂತಹ, ಎಲ್ಲರನ್ನು ಆಧರಿಸುವಂತಹ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದೇಶವನ್ನು ಮುನ್ನಡೆಸಿದ ಸಮರ್ಥ ಪ್ರಧಾನಿಗಳು. ಅಟಲ್ ಬಿಹಾರಿ ವಾಜಪೇಯಿ ಅವರ ಶಕೆ ಬೇರೆಲ್ಲರಿಗಿಂತ ವಿಭಿನ್ನವಾಗಿತ್ತು. ಸುಮಾರು 26 ಪಕ್ಷಗಳನ್ನೊಳಗೊಂಡ ಸಮ್ಮಿಶ್ರ ಸರ್ಕಾರವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದಾರೆ. ಅದಕ್ಕಿಂತ ಪೂರ್ವದಲ್ಲಿ ಅವರಿಗೆ ಸಂಖ್ಯಾಬಲ ಇಲ್ಲದ ಸಂದರ್ಭದಲ್ಲಿ ರಾಜೀನಾಮೆ ನೀಡಿ ಜನರಿಗೆ ಬಳಿಗೆ ಹೋಗಿರುವ ಏಕಮೇವ ನಾಯಕ ವಾಜಪೇಯಿ ಅವರು ಎಂದು ಸಿಎಂ ಹೇಳಿದರು.
ವಾಜಪೇಯಿ ಅವರ ಕಾಲದಲ್ಲಿ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳು ಆಗಿದ್ದು, ನವ ಭಾರತ ನಿರ್ಮಾಣಕ್ಕೆ ನಾಂದಿಯಾಗಿದೆ. ಪೋಕ್ರಾನ್ ಬ್ಲ್ಯಾಷ್ಟ್ ಮಾಡಿ ಆತ್ಮ ಬಲ ಹೆಚ್ಚಿಸಿದ್ದನ್ನು ನಾವು ಸ್ಮರಿಸಿಬೇಕು. ಶಿಕ್ಷಣದಲ್ಲಿ ಅಮೂಲ್ಯಾಗ್ರಹವಾದ ಬದಲಾವಣೆ ಅವರು ತಂದಿದ್ದಾರೆ. ಸರ್ವ ಶಿಕ್ಷಣ ಅಭಿಯಾನದ ಮೂಲಕ ಶಿಕ್ಷಣದ ಕ್ರಾಂತಿಯನ್ನು ಮಾಡಿದ್ದಾರೆ. ಅವರ ದಾರಿಯಲ್ಲಿ ನಮ್ಮ ರಾಜ್ಯ ಸರ್ಕಾರ ನಡೆಯುತ್ತಿದೆ. ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ವಿವೇಕ ಕಾರ್ಯಕ್ರಮದ ಮೂಲಕ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡುತ್ತಿದ್ದು, ಆದರ್ಶವಾದ ಶಾಲೆಗಳ ಕಟ್ಟುವುದಕ್ಕೆ ಅಟಲ ಬಿಹಾರಿ ವಾಜಪೇಯಿ ಅವರು ಪ್ರೇರಣೆ ಆಗಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.
ಹಿಂದಿನ ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಅಂತ ಕರೆ ಕೊಟ್ಟಿದ್ದರು. ನವ ಭಾರತ ನಿರ್ಮಾಣದ ಕಲ್ಪನೆಗೆ ಅಟಲ್ ಬಿಹಾರಿ ವಾಜಪೇಯಿ ಅವರು ಜೈ ಜವಾನ್, ಜೈ ಕಿಸಾನ್ , ಜೈ ವಿಜ್ಞಾನ ಎಂದು ಕರೆ ಕೊಟ್ಟಿದ್ದರು. ವಿಜ್ಞಾನದ ಮಹತ್ವವನ್ನು ಅರಿತ ಅವರು ಇವತ್ತು ನಮ್ಮ ಐಟಿಬಿಟಿ ಮತ್ತು ಎಲ್ಲಾ ಬೆಳವಣಿಗೆಗಾಗಿ ಕೇಂದ್ರ ಸರ್ಕಾರದ ಐಟಿ ಪಾಲಿಸಿಗಳನ್ನು ಮಾಡಿ ದೊಡ್ಡ ಕ್ರಾಂತಿ ಮಾಡಿದ್ದಾರೆ. ಇವತ್ತು ಬೆಂಗಳೂರು ದೊಡ್ಡ ಪ್ರಮಾಣದಲ್ಲಿ ಬೆಳೆಯುವುದಕ್ಕೆ ಅವರ ಕಾಲದಲ್ಲಿ ಸಾಫ್ಟವೇರ್ ಪಾರ್ಕ್ ನಿರ್ಮಾಣ ಆಗಿದ್ದು ಕಾರಣ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಅವರ ರಾಜಕಾರಣ, ಅವರ ವಿಚಾರ, ಅವರ ಮಾತುಗಳು ಸದಾ ಪ್ರಜಾಪ್ರಭುತ್ವದ ಏಳಿಗೆಗಾಗಿ ಭಾರತದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ. ಅವರ ಆದರ್ಶಗಳು ನಮಗೆ ಮಾರ್ಗದರ್ಶನವಾಗಿದೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ಮುನ್ನೆಡೆಯುತ್ತೆವೆ. ಅವರ ಹುಟ್ಟಿದ ದಿನದಂದು ಈ ಮೂರ್ತಿ ಅನಾವರಣ ಮಾಡಿದ್ದು ಅತ್ಯಂತ ಒಳ್ಳೆಯ ಕೆಲಸ. ಈ ಕೆಲಸ ಮಾಡಿದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ದೇಶದಲ್ಲಿ ಅತ್ಯುತ್ತಮ ಆಡಳಿತವನ್ನು ನೀಡಿದವರು ಅಟಲ್ ಬಿಹಾರಿ ವಾಜಪೇಯಿ ಅವರು. ಈ ದಿನವನ್ನು ಸುಶಾಸನ ದಿನ ಅಂತಲೂ ನಾವು ಕರೆಯುತ್ತೇವೆ. ಜನರ ಮನದಾಳದಲ್ಲಿ ಅವರು ಸದಾ ಅಚ್ಚಳಿಯದೆ ಉಳಿಯುತ್ತಾರೆ.
ಇಂತಹ ಸಾಧಕರನ್ನು ಮನಸ್ಸಿನಲ್ಲಿಟ್ಟಕೊಂಡು ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳಿದ್ದಾರೆ. “ಸಾಧಕರಿಗೆ ಸಾವು ಅಂತ್ಯವಲ್ಲ. ಸಾವಿನ ನಂತರ ಬದುಕುವವನು ಸಾಧಕ” ಎಂದು. ಇವತ್ತು ಅವರು ನಮ್ಮ ಜೊತೆಗೆ ಇಲ್ಲ. ಆದರೆ ಅವರ ಮೌಲ್ಯಗಳು, ವಿಚಾರಗಳು ನಮಗೆ ದಾರಿದೀಪವಾಗಿರುತ್ತದೆ. ಅದರ ಮುಖಾಂತರ ನಮ್ಮ ಕೆಲಸ ಮಾಡೋಣ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಂದಾಯ ಸಚಿವ ಆರ್.ಅಶೋಕ್, ಸಂಸದರಾದ ಪಿ.ಸಿ ಮೋಹನ್, ತೇಜಸ್ವಿ ಸೂರ್ಯ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ವಲಯ ಆಯುಕ್ತರಾದ ಜಯರಾಮ್ ರಾಯಪುರ ಉಪಸ್ಥಿತರಿದ್ದರು.