ಇತ್ತೀಚಿನ ಸುದ್ದಿ
ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ
10/10/2025, 13:55

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕಾಟಕೇರಿಯ ಬಳಿಯ ಹರಿಮಂದಿರ್ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡದಿಂದ ಗಾಯಾಳುಗಳಾಗಿ ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಧ್ಯಾರ್ಥಿಗಳ ಆರೋಗ್ಯವನ್ನು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಖುದ್ದು ಭೇಟಿ ನೀಡಿ ವಿಚಾರಿಸಿದರು.
ಸಂಪುಟ ಸಭೆಯ ಮಧ್ಯದಲ್ಲಿಯೇ ಮಡಿಕೇರಿಗೆ ದೌಡಾಯಿಸಿದ ಪೊನ್ನಣ್ಣ ನವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಭೇಟಿಯಾಗಿ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.ಮಕ್ಕಳ ಪೋಷಕರಿಗೆ ಸಾಂತ್ವನ ಹೇಳಿದರು.
ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಶಾಲೆಯ ವಾರ್ಡನ್ ಬಳಿ ಘಟನೆಯ ಬಗ್ಗೆ ಮಾಹಿತಿ ಪಡೆದರು.
ದುರ್ಘಟನೆಯಲ್ಲಿ ಮೃತ ಪಟ್ಟ ಬಾಲಕ ಕುಂದಚೇರಿಯ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ ರೂಗಳ ಪರಿಹಾರವನ್ನು ಸರ್ಕಾರದಿಂದ ಘೋಷಣೆ ಮಾಡಿದ್ದು ಹೆಚ್ಚಿನ ಪರಿಹಾರಕ್ಕೆ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಆಶ್ರಮ ಶಾಲೆಯಲ್ಲಿ ದುರಂತ ನಡೆದ ಬಗ್ಗೆ ಪೂರ್ಣ ತನಿಖೆಗೆ ಸೂಚಿಸಿದ್ದು ವರದಿ ಬಂದ ನಂತರ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ ಪೊನ್ನಣ್ಣ ನವರು ಘಟನೆಯಿಂದ ತೀವ್ರ ಅಘಾತವಾಗಿದೆ ಎಂದು ತಿಳಿಸಿದರು.
ಆಶ್ರಮ ಶಾಲೆಗೆ ಅನುಮತಿ ಇದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಅದರ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳಿಂದ ಕೇಳಿದ್ದು ಯಾವುದಾದರೂ ಲೋಪ ಕಂಡು ಬಂದಲ್ಲಿ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.