ಇತ್ತೀಚಿನ ಸುದ್ದಿ
ಅರಣ್ಯ ಪ್ರದೇಶ ಶೇ. 30ಕ್ಕಿಂತ ಕೆಳಗೆ ಕುಸಿದಿರುವುದು ಅಪಾಯಕಾರಿ: ಜಿಲ್ಲಾ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್
25/09/2021, 11:55
ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ಸಾರ್ವಜನಿಕರ ಸಹಭಾಗಿತ್ವ ಮತ್ತು ಬೆಂಬಲ ಇಲ್ಲದಿರುವುದು ಅರಣ್ಯ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಮಾರಕವಾಗಿರುವುದರಿಂದ ನಮ್ಮ ದೇಶದ ಅರಣ್ಯ ಪ್ರದೇಶ ಶೇ .30ಕ್ಕಿಂತ ಕೆಳಗೆ ಕುಸಿದಿರುವುದು ಪರಿಸರ ಸಂರಕ್ಷಣೆ ದೃಷ್ಟಿಯಿಂದ ಅಪಾಯಕಾರಿ ಎಂದು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ ಹಾಗೂ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸಭಾಂಗಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಾಗಿ ಅರಣ್ಯ ಕಾನೂನುಗಳ ಬಗ್ಗೆ ನಡೆದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವನ್ಯಮೃಗಗಳ ದಾಳಿ, ಅರಣ್ಯ ಒತ್ತುವರಿ ಮತ್ತಿತರ ಕಾರಣಗಳಿಂದ ಜನತೆ, ಅರಣ್ಯ ಸಿಬ್ಬಂದಿ ನಡುವಿನ ಘರ್ಷಣೆಗಳು ಹೆಚ್ಚುತ್ತಿರುವುದು ಅರಣ್ಯ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ದೊಟ್ಟ ಪೆಟ್ಟು ಎಂದರು.
ಅರಣ್ಯ ಇಲಾಖೆ ಅರಣ್ಯದ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. ಆದರೂ ಅರಣ್ಯ ನಾಶವಾಗುತ್ತಲೇ ಇದೆ. ಅಭಿವೃದ್ಧಿಪರ ದೇಶದ ದೃಷ್ಟಿಯಿಂದ ಇರಬೇಕಾದ ಶೇಕಡಾವಾರು ಅರಣ್ಯ ಪ್ರದೇಶವೂ ಮಾಯವಾಗುತ್ತಿದ್ದು, ಇದೇ ರೀತಿ ಮುಂದವರೆದರೆ ಮಾನವ ಕುಲ ನಾಶವಾಗುವುದರಲ್ಲಿ ಸಂಶಯವಿಲ್ಲ ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಮಾತನಾಡಿ , ಅರಣ್ಯಕ್ಕೆ ಧಕ್ಕೆ ಮಾಡುವ ಮತ್ತು ಉಳಿಸಿ ಬೆಳೆಸುವ ಎರಡು ಶಕ್ತಿ ಇರುವ ಏಕೈಕ ಜೀವಿ ಮನುಷ್ಯ ಅದರೆ ಇಂದು ಅರಣ್ಯವನ್ನು ಸಂರಕ್ಷಿಸುವ ಬದಲು ಅರಣ್ಯ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿರುವುದು ದುರಾದೃಷ್ಟಕರ ಎಂದರು .
ಪರಿಸ್ಥಿತಿ ಅರಣ್ಯ ಹೀಗೆ ಮುಂದುವರೆದರೆ ಪರಿಸರದ ಸಮತೋಲನವಿಲ್ಲದೆ ಮನುಕುಲ ಬದುಕುವುದು ಕಷ್ಟವಾಗಿದ್ದು , ಅರಣ್ಯಗಳನ್ನು ಉಳಿಸಿ ಬೆಳೆಸುವ ಹೃದಯವಂತಿಕೆ ಇಂದು ಅಗತ್ಯ ಎಂದು ಅವರು ನುಡಿದರು.
ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಸಿ. ಎಚ್.ಗಂಗಾಧರ್ , ಗಿಡಮರಗಳನ್ನು ಉಳಿಸಿ ಬೆಳೆಸುವ ಹೊಣೆ ಪ್ರತಿಯೊಬ್ಬ ಪ್ರಜೆಯದ್ದಾಗಿದೆ , ಒಂದು ಮರ ಕಡಿಯಲು ಅರಣ್ಯ ಇಲಾಖೆ ಅನುಮತಿ ಬೇಕು. ಆದರೆ ಅದನ್ನು ಮೀರಿ ಕಾನೂನುಬಾಹಿರವಾಗಿ ಕಡಿಯುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದರ ತಡೆಗೆ ಕಾನೂನು ಕ್ರಮ ಅಗತ್ಯ ಎಂದರು.
ವಕೀಲರ ಸಂಘದ ಅಧ್ಯಕ್ಷ ಜಿ ಶ್ರೀಧರ್ , ಅರಣ್ಯದ ಅತಿಯಾದ ನಾಶದಿಂದಗಿ ಪರಿಸರ ನಾಶವಾಗಿ ಮಾನವ ಕುಲ ಇಂದು ಸಂತ್ರಸ್ತರಾಗುತ್ತಿದ್ದಾರೆ.
ಪರಿಸರವನ್ನು ರಕ್ಷಿಸಿದರೆ ಮಾತ್ರ ಮುಂದಿನ ಪೀಳಿಗೆ ಆರೋಗ್ಯವಂತರಾಗಿರಲು ಸಾಧ್ಯ ಎಂದು ತಿಳಿಸಿದರು.
ವಕೀಲರಾದ ಕೆ.ಆರ್ ಧನರಾಜ್ ಸೋಮಶೇಖರ್ , ಸುಜಾತ , ಕಾರ್ಯಾಗಾರದಲ್ಲಿ ಅರಣ್ಯ ಸಂಬಂಧಿತ ಕಾನೂನುಗಳ ಮತ್ತು ಘನ ಸರ್ವೋಚ್ಚ ಮತ್ತು ಉಚ್ಚನ್ಯಾಯುಗಳ ತೀರ್ಪುಗಳ ಬಗ್ಗೆ ಉಪನ್ಯಾಸ ನೀಡಿ , ಅರಣ್ಯ ಸಂರಕ್ಷಣೆಗೆ ಇರುವ ಕಾನೂನುಗಳು ಬಲವಾಗಿದ್ದರೂ , ಅದರ ಅನ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ ಎಂದರು.
ಕಾರ್ಯಾಗಾರದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಜಿ.ವೆಂಕಟೇಶ್ , ಟಿ.ಎಂ.ಸಹನ್ ಕುಮಾರ , ಅಶ್ವಥಪ್ಪ , ಮಾಲಿನಿ , ವಾಸದೇವ ಮೂರ್ತಿ ಮೊದಲಾದವರು ಭಾಗವಹಿಸಿದ್ದರು.