5:17 PM Monday31 - March 2025
ಬ್ರೇಕಿಂಗ್ ನ್ಯೂಸ್
PDO | ಮಾದರಿ ಗ್ರಾಮ ಪಂಚಾಯತಿ ನಿರ್ಮಾಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ… Bangalore | ಸಬಲೀಕರಣ ಜತೆಗೆ ಮಹಿಳಾ ಸುರಕ್ಷತೆ: ‘ಬಿ.ಸೇಫ್’ ಸಮೀಕ್ಷಾ ವರದಿ ಬಿಡುಗಡೆ Bangalore | ಬೇಡಿಕೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ನಿವೃತ್ತರ ಒಕ್ಕೂಟಗಳ… MSIL | ಸರಕಾರಿ, ಖಾಸಗಿ ಉತ್ಪನ್ನಗಳ ಮಾರಾಟ, ಖರೀದಿಗೆ ನೆರವಾಗಲಿದೆ ಇ ಪೋರ್ಟಲ್‌ Chikkamagaluru | ಬಾಲ ಹಿಡಿದು ಎತ್ತಿದ ಉರಗ ತಜ್ಞರು: ನುಂಗಿದ್ದ 10 ಮೊಟ್ಟೆಗಳನ್ನು… Speaker Talking | ವಿಧಾನ ಸೌಧಕ್ಕೆ ವರ್ಣರಂಜಿತ ದೀಪಾಲಂಕಾರ; ಯಾವಾಗ ಉದ್ಘಾಟನೆ?; ಸ್ಪೀಕರ್… ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆ: ಹಾಲು ದರ ಏರಿಕೆಗೆ ಕೇಂದ್ರ… ಕೋಲಾರ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿ; ತೇರಹಳ್ಳಿ… Protest in Delhi | ‘ಉದ್ಯೋಗ ಕೊಡಿ ಅಥವಾ ಅಧಿಕಾರ ತ್ಯಜಿಸಿ’: ಕೇಂದ್ರ… Medical College | ಗದಗ ಮೆಡಿಕಲ್ ಕಾಲೇಜಿಗೆ ಕೆ.ಎಚ್. ಪಾಟೀಲ್ ಹೆಸರು: ರಾಜ್ಯ…

ಇತ್ತೀಚಿನ ಸುದ್ದಿ

ಅಪ್ಪ- ಮಕ್ಕಳ ಹಗ್ಗ ಜಗ್ಗಾಟ: ಅಮ್ಮ ಎಂಬ ಅಂಪೈರ್!

03/11/2024, 11:21

ರಾಜೇಶ್ವರಿ ಕುಮಾರ್ ರಾವ್

info.reporterkarnataka@gmail.com

ಮಗುವನ್ನು ಹೆತ್ತ ತಕ್ಷಣ ಹೆಣ್ಣಿಗೆ ‘ಅಮ್ಮ’ ಎಂಬ ಪಟ್ಟ ಸಿಕ್ಕಿಬಿಡುತ್ತದೆ. ಎಳೆಯ ಕಂದಮ್ಮನಿಗೆ ಎದೆ ಹಾಲು ಉಣಿಸುವುದು,ಎಣ್ಣೆ ಸ್ನಾನ ಮಾಡಿಸಿ ಜೋಗುಳ
ಹಾಡಿ ಮಲಗಿಸುವುದು, ಸೊಂಟದಲ್ಲಿ ಎತ್ತಿಕೊಂಡು ಚಂದಮಾಮನನ್ನು ತೋರಿಸುತ್ತ ಊಟ ತಿನ್ನಿಸುವುದು, ಇವೆಲ್ಲಾ ತಾಯಿಯಾದವಳಿಗೆ ಖುಷಿ ಕೊಡುವ ಪ್ರಕ್ರಿಯೆ.
ಮಕ್ಕಳು ದೊಡ್ಡವರಾದ ಮೇಲೆ ಯುನಿಫಾರ್ಮ್ ಹಾಕಿ
ತಿಂಡಿ ತಿನಿಸಿ ಶಾಲೆಗೆ ಕಳಿಸಿ, ಹೋಂವರ್ಕ್ ಮಾಡಿಸಿದರೆ ಒಂದು ಅಧ್ಯಾಯ ಮುಗಿಯಿತು. ಕಾಯಿಲೆ ಬಂದಾಗ ಶುಶ್ರೂಷೆ ಕೊಡಿಸಿ ಜೋಪಾನವಾಗಿ ನೋಡಿಕೊಂಡರೆ ಆಯ್ತು. ಹೌದೇ? ಇಷ್ಟೇನಾ! ಮಕ್ಕಳನ್ನು ಸಾಕಿ ದೊಡ್ಡವರನ್ನಾಗಿ ಮಾಡುವುದು ಎಷ್ಟು ಸುಲಭ ಅನಿಸುತ್ತದೆ ಅಲ್ಲವೇ? ಈಗಿನ ಕಾಲದಲ್ಲೂ ‘ಇಷ್ಟೇ’ ಅಂದುಕೊಂಡ ಕುಟುಂಬಗಳು ಇನ್ನೂ ಇವೆ. ಆ ಮಕ್ಕಳು ಶಾಲೆಯಲ್ಲಿ ಯಾರ ಸ್ನೇಹ ಮಾಡುತ್ತಾರೆ? ಪಾಠದ ಕಡೆಗೆ ಎಷ್ಟು ಗಮನ ಕೊಡುತ್ತಾರೆ, ಶಾಲೆಗೆ ಸರಿಯಾಗಿ ಹೋಗುತ್ತಾರೆಯೇ ಇಲ್ಲವೇ ಎಂದು ವಿಚಾರಿಸಲೂ ಬಿಡುವಿಲ್ಲದ ಹೆತ್ತವರು ನಮ್ಮ ಸುತ್ತಮುತ್ತಲಿನಲ್ಲಿ ಇದ್ದಾರೆ. ಮುಖ್ಯವಾಗಿ ತಾಯಂದಿರು ತಮ್ಮ ಮಕ್ಕಳ ಬೆಣ್ಣೆ ಮಾತುಗಳನ್ನು ಸುಲಭವಾಗಿ ನಂಬಿ ಬಿಡುತ್ತಾರೆ.
ಶಾಲೆ ಕಾಲೇಜಿನಲ್ಲಿ ಮಗ ಅಥವಾ ಮಗಳ ಸ್ನೇಹಿತ, ಸ್ನೇಹಿತೆಯರು ಯಾರು? ಮೊಬೈಲ್ ನಲ್ಲಿ ಯಾರ ಜೊತೆ ಮಾತನಾಡುತ್ತಾರೆ, ಪಾರ್ಟಿ ಪಿಕ್ನಿಕ್ ಎಂದು ಎಲ್ಲಿಗೆ ಹೋಗುತ್ತಾರೆ? ಇವುಗಳ ವಿವರ ಕೇಳಿದರೆ ನಿಜ ಹೇಳುತ್ತಾರೆಯೇ? ಇಂದಿನ ಸಮಾಜದಲ್ಲಿ ಮಕ್ಕಳಿಗೆ ಹೊರಗಿನ ಆಕರ್ಷಣೆಗಳು ಹಲವಾರು. ಅವರಿಗೆ ಸ್ವಾತಂತ್ರ್ಯವನ್ನು ನಾವಾಗಿ ಕೊಡದಿದ್ದರೆ ಅವರೇ ನಮ್ಮ ಆದೇಶವನ್ನು ಧಿಕ್ಕರಿಸಿ ಹೋಗುತ್ತಾರೆ. ಎಲ್ಲಾ ಮಕ್ಕಳೂ ಹೀಗೇ ಇರುತ್ತಾರೆ ಎಂದು ಸಾರಾಸಗಟಾಗಿ ಹೇಳುವುದು ಸರಿಯಲ್ಲ. ಆದರೆ ಹದಿಹರೆಯದ ಮಕ್ಕಳು ತಮ್ಮ ಚಟುವಟಿಕೆಗಳನ್ನು ಹೆತ್ತವರಿಗೆ ತಿಳಿಸುವ ಅವಶ್ಯಕತೆ ಇದೆ ಎಂದು ಭಾವಿಸುತ್ತಿಲ್ಲ.
ಪರಿಸ್ಥಿತಿ ಹೀಗಿರುವಾಗ ಅಮ್ಮನಾದವಳ ಹೊಣೆ ಏನು?ಸಾಮಾನ್ಯವಾಗಿ ಪತಿ ತನ್ನ ಕೆಲಸದಲ್ಲಿ ವ್ಯಸ್ತನಾಗಿ ಮನೆಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದಷ್ಟೇ ತನ್ನ ಕರ್ತವ್ಯ ಎಂದು ಭಾವಿಸುತ್ತಾನೆ. ಮಕ್ಕಳು ತಿಳಿದೋ ತಿಳಿಯದೆಯೋ ತಪ್ಪುಹೆಜ್ಜೆ ಇಟ್ಟರೆ “ನೀನುಂಟು ನಿನ್ನ ಮಗನುಂಟು.”ಎಂದು ಅಪ್ಪನಾದವನು ಮಕ್ಕಳ ಜವಾಬ್ದಾರಿಯನ್ನು ಪತ್ನಿಯ ಹೆಗಲಿಗೆ ಜಾರಿಸಿ ಬಿಡುತ್ತಾನೆ. ಅವರ ಮೇಲೆ ನಿಗಾ ಇಡುವುದು ಅಮ್ಮನದೊಬ್ಬಳದೇ ಜವಾಬ್ದಾರಿ ಎನಿಸಿಬಿಡುತ್ತದೆ.
ನಮ್ಮ ಮಕ್ಕಳು ಉತ್ತಮ ನಾಗರೀಕರಾಗಿ ಸಮಾಜಕ್ಕೆ ಆಸ್ತಿಯಾಗಬೇಕು, ದೇಶದ ಯೋಗ್ಯ ಪ್ರಜೆಗಳಾಗ ಬೇಕು, ಸೂಕ್ತ ವಿದ್ಯಾಭ್ಯಾಸ ಮುಗಿಸಿ ನೌಕರಿಯೋ ಉದ್ಯೋಗವೋ ವ್ಯಾಪಾರವೋ ಕೈಗೊಂಡು ನಮ್ಮ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ಬದುಕಿ, ಸಂಸಾರಿಯಾಗಿ ಬಾಳಿ,ವೃದ್ಧಾಪ್ಯದಲ್ಲಿ ಹೆತ್ತವರಿಗೆ ಊರುಗೋಲಾಗಬೇಕು ಎಂಬ ಎಷ್ಟೊಂದು ಕನಸುಗಳನ್ನು ಹೆತ್ತವರು ಹೆಣೆದು, ಶಕ್ತಿಮೀರಿ ಮಕ್ಕಳನ್ನು ಸಾಕುತ್ತಾರೆ. ಈ ನಿಟ್ಟಿನಲ್ಲಿ ಅಮ್ಮನಾದವಳ ಪಾತ್ರ ಮಹತ್ತರವಾದುದು. ಕೇವಲ ಹೊಟ್ಟೆ ಬಟ್ಟೆ ನೋಡಿ ಕೊಂಡಿರುವ ಅಮ್ಮನಾದರೆ ಸಾಲದು. ಅವರ ಚಲನವಲನಗಳ ಕಡೆಗೆ ಗಮನ ಹರಿಸಬೇಕು. ಸ್ನೇಹಿತೆಯಂತೆ ಅವರ ವಿಶ್ವಾಸ ಗಳಿಸಬೇಕು. ನಮ್ಮ ಕಾಲದಲ್ಲಿ ಹಾಗಿತ್ತು, ಅದೇ ಸರಿ ಎಂಬ ಮೊಂಡುವಾದ ಮಾಡದೆ ಕಾಲದ ಜೊತೆಗೆ ನಮ್ಮ ವಿಚಾರಧಾರೆಯನ್ನೂ ತಿದ್ದುಪಡಿ ಮಾಡುತ್ತಾ ಇರಬೇಕಾಗುತ್ತದೆ.
ಮಕ್ಕಳಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕು, ಎಲ್ಲಿ ಕಡಿವಾಣ ಹಾಕಬೇಕು ಎಂಬುದರ ಬಗ್ಗೆ ಸ್ಪಷ್ಟ ನಿಲುವು ತಾಳಬೇಕು. ಸಾಮಾನ್ಯವಾಗಿ ಹದಿಹರೆಯದ ಮಕ್ಕಳಿಗೂ ತಂದೆಗೂ ಅಭಿಪ್ರಾಯ ಭೇದ ಬಂದು ಕೆಲವೊಮ್ಮೆ ಪರಿಸ್ಥಿತಿ ಕೈ ಮೀರುವ ಸಂಭವವೂ ಘಟಿಸಬಹುದು. ಆಗ ಅಮ್ಮನಾದವಳು ‘ಹಾವೂ ಸಾಯಬಾರದು ಕೋಲೂ ಮುರಿಯಬಾರದು’ ಎಂಬಂತೆ ಪರಿಸ್ಥಿತಿಯನ್ನು ಹಗುರಗೊಳಿಸುವ ಚಾಕಚಕ್ಯತೆಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಮುನಿಸಿಕೊಂಡ ಗಂಡ ನೀನುಂಟು ನಿನ್ನ ಮಗ/ಮಗಳುಂಟು ಎಂದು ಕೋಪದಿಂದ ವಾಕಿಂಗ್ ಹೋದರೆ, ಮಗ ಬೈಕ್ ಏರಿ ಬುರ್ರೆಂದು ಗಾಳಿಯ ವೇಗದಲ್ಲಿ ಹಾರಿಹೋದಾಗ ಅಮ್ಮನೆಂಬ ಬಡಪಾಯಿಯ ಕತೆ ದೇವರಿಗೇ ಪ್ರೀತಿ. ಮಗಳಾಗಿದ್ದರೆ ಮುಖ ಊದಿಸಿ ಕೊಂಡು ರೂಮು ಸೇರಿ ಧಡಾರನೆ ಬಾಗಿಲು ಜಡಿದು ಕುಳಿತುಕೊಳ್ಳುತ್ತಾಳೆ. ತಾಯಿಯೆಂದು ಕರೆಸಿಕೊಳ್ಳುವ ಆ ಮಹಾ ಮಾತೆಯನ್ನು ಸೃಷ್ಟಿಸುವಾಗಲೇ ಭಗವಂತ ಅಪರಿಮಿತವಾದ ತಾಳ್ಮೆಯನ್ನೂ ಸಮಸ್ಯೆಯನ್ನು ಪರಿಹರಿಸುವ ದಿವ್ಯಶಕ್ತಿಯನ್ನೂ ಕೊಟ್ಟುಬಿಟ್ಟಿದ್ದಾನೆ. ಅಪ್ಪ ಮಗನಿಗೆ ಮಾತಿನ ಚಕಮಕಿ ನಡೆದಾಗ ಮುನಿಸಿಕೊಂಡ ಮಗ ತಡವಾಗಿ ಮನೆಗೆ ಬಂದಾಗ, ಅಮ್ಮ ತಾನೂ ಊಟಮಾಡದೆ ಬಾಗಿಲಲ್ಲಿ ಕಾದುಕುಳಿತು ಮಗನ ಹೃದಯ ಕರಗಿಸುತ್ತಾಳೆ. ಆಕೆ ಅಪ್ಪನ ಪರವಾಗಿಯಾಗಲೀ ವಿರೋಧವಾಗಿಯಾಗಲೀ ವಾದಮಾಡದೆ ನುಣ್ಣಗೆ ನುಣುಚಿಕೊಳ್ಳುವ ಮಾತಿನ ವರಸೆಯಿಂದ” ಅಪ್ಪ
ಹಾಗೇನೇ ಕೋಪ ಬಂದಾಗ ಏನೋ ಅಂದು ಬಿಡ್ತಾರೆ. ನೀನು ಸುಮ್ಮನೆ ವಾದ ಮಾಡಬೇಡ. ನಾನೆಲ್ಲಾ ಸರಿಮಾಡ್ತೇನೆ”ಎಂದು ಸಮಾಧಾನ ಮಾಡುತ್ತಾಳೆ.
ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯುಸ್ಸು ಎಂಬಂತೆ ಮರುದಿನ ಎಲ್ಲಾ ಭಿನ್ನಾಭಿಪ್ರಾಯಗಳೂ ಸರಿಯಾಗುತ್ತವೆ. ಆಗಾಗ ನಡೆಯುವ ಈ ಹಗ್ಗ ಜಗ್ಗಾಟಕ್ಕೆ ಅಮ್ಮ ಎಂಬ ಅಂಪೈರ್ ಮುಖ್ಯ ಭೂಮಿಕೆ ನಿಭಾಯಿಸಬೇಕಾಗುತ್ತದೆ.
ಮಕ್ಕಳಿಗೆ ಸ್ನೇಹಿತರಂತಿದ್ದು, ಅವಶ್ಯಕತೆ ಇದ್ದಾಗ ಸ್ಪಷ್ಟವಾಗಿ ಸರಿತಪ್ಪುಗಳ ಅಂತರವನ್ನು ತಿಳಿಸಿ ಲಕ್ಷ್ಮಣ ರೇಖೆಯನ್ನು ಎಳೆಯುವ ಅಮ್ಮನಾಗುವ ಅಗತ್ಯ ಇದೆ.  ಅಮ್ಮನಾಗುವುದು ಸುಲಭ ಆದರೆ ಒಳ್ಳೆಯ ಅಮ್ಮನಾಗುವುದು ಸುಲಭವಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು