ಇತ್ತೀಚಿನ ಸುದ್ದಿ
ವಾಮಂಜೂರು ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ದಿನಾಚರಣೆ
25/03/2025, 18:05

ಮಂಗಳೂರು(reporterkarnataka.com): ವಾಮಂಜೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ದಿನಾಚರಣೆ ಮಾರ್ಚ್ 22 ರಂದು ಕಾಲೇಜು ಆವರಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಜಿಲ್ಲೆಯ ಸರಕಾರಿ ವಕೀಲ, ಕ್ರಿಶ್ಚಿಯನ್ ವಿವಾಹ ನೋಂದಣಿದಾರ ಹಾಗೂ ನೋಟರಿ ಎಂ.ಪಿ. ನೊರೊನ್ಹಾ ಅವರು ಭಾಗವಹಿಸಿದ್ದರು. ಕಾಲೇಜಿನ ನಿರ್ದೇಶಕ ರೆ. ಫಾ. ವಿಲ್ಫ್ರೆಡ್ ಪ್ರಕಾಶ್ ಡಿ’ಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ರಿಯೊ ಡಿಸೋಜಾ ವಾರ್ಷಿಕ ವರದಿಯನ್ನು ಮಂಡಿಸಿದರು. ಉಪ ಪ್ರಾಂಶುಪಾಲ ಡಾ. ಪುರುಷೋತ್ತಮ ಚಿಪ್ಪಾರ್ ಸ್ವಾಗತಿಸಿ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಅತಿಥಿಗಳು ಮತ್ತು ಅಧ್ಯಕ್ಷರು ವಿವಿಧ ಕ್ರೀಡಾ ಚಟುವಟಿಕೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಮತ್ತು ಅಧ್ಯಕ್ಷರು ಪ್ರಶಸ್ತಿ ಪ್ರದಾನ ಮಾಡಿದರು. ವಿಶ್ವವಿದ್ಯಾಲಯ ಮಟ್ಟದ ರ್ಯಾಂಕ್ ಪಡೆದವರು ಮತ್ತು ಅಧ್ಯಾಪಕರ ಸಾಧನೆಗಳನ್ನು ಕೂಡಾ ಗೌರವಿಸಲಾಯಿತು.
ಮುಖ್ಯ ಅತಿಥಿ ಜಿಲ್ಲಾ ಪ್ರಧಾನ ಸರಕಾರಿ ವಕೀಲರಾದ ಎಂ.ಪಿ. ನೊರೊನ್ಹಾ ಅವರು ಮಾತನಾಡಿ ಜೀವನ ಯಶಸ್ವಿಯಾಗುವುದು ಒಳ್ಳೆಯದು; ಆದರೆ ಜೀವನವು ಯಶಸ್ವಿಯಾಗುವದರ ಜತೆಗೆ ಶಾಂತಿಯುತವಾಗುವುದು ಕೂಡಾ ಮುಖ್ಯ. ಇಂದು ಕೆಲವರು ಯಶಸ್ವಿಯಾಗಿದ್ದಾರೆ ಮತ್ತು ಕೆಲವರು ಶಾಂತಿಯುತರಾಗಿದ್ದಾರೆ. ಆದರೆ ಯಶಸ್ವಿಯೂ ಮತ್ತು ಶಾಂತಿಯುತವೂ ಆಗಿರುವವರು ಬಹಳ ವಿರಳ. ಸಾಮಾನ್ಯವಾಗಿ ಯಶಸ್ವೀ ಜನರು ಒತ್ತಡ ಮತ್ತು ಆತಂಕದ ಜೀವನವನ್ನು ನಡೆಸುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಯಶಸ್ವಿ ವೃತ್ತಿಪರ ಜೀವನವನ್ನು ಮಾತ್ರವಲ್ಲದೆ ಶಾಂತಿಯುತ ಜೀವನವನ್ನು ನಡೆಸ ಬೇಕು ಮತ್ತು ಇತರರಿಗೆ ಮಾದರಿಯಾಗಬೇಕು ಎಂದು ನುಡಿದರು.
ನಮ್ಮ ಮಾತುಗಳು ಸಿಹಿಯಾಗಿರ ಬೇಕು. ನೀವು ಸತ್ಯವನ್ನೇ ಹೇಳುತ್ತಿದ್ದರೂ ನಿಮ್ಮ ಮಾತುಗಳು ಕಹಿಯಾಗಿರ ಬಾರದು, ಇದರಿಂದ ನೀವು ಶಾಂತಿಯಿಂದ ಇರುತ್ತೀರಿ ಮತ್ತು ಇತರರೂ ಶಾಂತಿಯುತವಾಗಿರುತ್ತಾರೆ. ನೋಡುವುದು ಮತ್ತು ಗ್ರಹಿಸುವುದರ ನಡುವೆ ವ್ಯತ್ಯಾಸವಿದೆ. ನಾವೆಲ್ಲರೂ ಒಂದೇ ಜಗತ್ತಿನಲ್ಲಿ ವಾಸಿಸುತ್ತಿದ್ದರೂ, ಪ್ರತಿಯೊಬ್ಬರೂ ವಿಭಿನ್ನ ಗ್ರಹಿಕೆಗಳಿಂದಾಗಿ ತಮ್ಮದೇ ಆದ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಸರಿಯಾದ ಗ್ರಹಿಕೆಗಳನ್ನು ಹೊಂದ ಬೇಕು ಮತ್ತು ಆಗ ಮಾತ್ರ ಅವರು ಶಾಂತಿಯುತ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು ರಾಜ್ಯದ ಉನ್ನತ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ನಿರ್ದೇಶಕ ರೆ. ಫಾ. ವಿಲ್ಫ್ರೆಡ್ ಪ್ರಕಾಶ್ ಡಿ’ಸೋಜಾ ಅವರು ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಿದರು. ಶಿಕ್ಷಣವು ಪಠ್ಯಪುಸ್ತಕಗಳು ಮತ್ತು ಪರೀಕ್ಷೆಗಳಿಗಿಂತ ಹೆಚ್ಚಿನದಾಗಿದೆ, ಬಹುಕಿನ ಪಯಣದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಉತ್ತಮ ಚಾರಿತ್ರ್ಯ ನಿರ್ಮಾಣ ಅಗತ್ಯ. ಇತರರನ್ನು ಮೇಲಕ್ಕೆತ್ತಿದಾಗ ಮಾತ್ರ ಯಶಸ್ಸು ಹೆಚ್ಚು ಅರ್ಥಪೂರ್ಣವಾಗುತ್ತದೆ. ಸಣ್ಣ ಪ್ರಯತ್ನಗಳು ಕೂಡಾ ಇನ್ನೊಬ್ಬರ ಜೀವನದಲ್ಲಿ ದೊಡ್ಡ ಪರಿಣಾಮ ಬೀರುತ್ತವೆ. ವಿದ್ಯಾರ್ಥಿಗಳು ಜೀವನದಲ್ಲಿ ಕೃತಜ್ಞತಾ ಭಾವವನ್ನು ಬೆಳೆಸಿಕೊಳ್ಳ ಬೇಕೆಂದು ಹೇಳಿದರು.
ಕಾರ್ಯಕ್ರಮದ ಸಂಚಾಲಕ ಡಾ. ರವಿಕಾಂತ ಪ್ರಭು ವಂದಿಸಿದರು. ಕಾಲೇಜಿನ ಸಹಾಯಕ ನಿರ್ದೇಶಕರಾದ ರೆ. ಫಾ. ಕೆನ್ನೆತ್ ಆರ್ ಕ್ರಾಸ್ತಾ, ವಿವಿಧ ಡೀನ್ಗಳು ಮತ್ತು ಮುಖ್ಯಸ್ಥರು ಹಾಗೂ ಕಾರ್ಯಕ್ರಮದ ಸಹ-ಸಂಚಾಲಕ ಡಾ. ಸುನೀತಾ ಪ್ರಸಾದ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆಲ್ಡ್ರಿನ್ ಸಿಯಾನ್ ಪಿರೇರಾ ಮತ್ತು ಶಿಜಿ ಅಬ್ರಹಾಂ ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ವೈಭವದೊಂದಿಗೆ ವಿದ್ಯಾರ್ಥಿಗಳು ತಮ್ಮ ಅದ್ಭುತ ಸಂಗೀತ ಮತ್ತು ನೃತ್ಯ ಕೌಶಲ್ಯಗಳನ್ನು ಪ್ರದರ್ಶಿಸಿದರು. ಡೈಮಂಡ್ಸ್ ಆಂಡ್ ರಸ್ಟ್ ವತಿಯಿಂದ ರೋಮಾಂಚಕ ಬ್ಯಾಂಡ್ ಪ್ರದರ್ಶನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಜೇಡೆನ್ ಡಿಸೋಜಾ ಮತ್ತು ಡಿಯೋನಾ ರೇಗೊ ನಿರೂಪಿಸಿದರು.