ಇತ್ತೀಚಿನ ಸುದ್ದಿ
ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಖದೀಮ: ಬಾಳೆಹೊನ್ನೂರು ಪೊಲೀಸರಿಂದ ಬಂಧನ
25/09/2024, 19:29
ಶಶಿ ಬೆತ್ತದಕೊಳಲು ಕೊಪ್ಪ
info.reporterkarnataka@gmail.com
ಅನ್ನ ಹಾಕಿದ ಮನೆ ಮಾಲಿಕನ ಮನೆಗೆ ಕನ್ನ ಹಾಕಿದ ಕಳ್ಳನೊಬ್ಬ ಮಾಲಿಕನ ಮನೆಯ ಬೀರುವಿನಲ್ಲಿದ್ದ ಚಿನ್ನದ ಬ್ರೇಸ್ ಲೈಟ್ ಕಳವು ಮಾಡಿ, ಬಾಳೆಹೊನ್ನೂರು ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಸಾಗರ ತಾಲೂಕಿನ ಕುಂಸಿ ಮೂಲದ ರವಿ ಬಿನ್ ತಿಮ್ಮಪ್ಪ ಎಂಬಾತ ಚಿನ್ನದ ಬ್ರೇಸ್ ಲೈಟ್ ಕಳವು ಮಾಡಿರುವ ಆರೋಪಿಯಾಗಿದ್ದಾನೆ. ಹೇರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಿಬ್ಳಿಯ ತಿಮ್ಮಪ್ಪಗೌಡ ಎಂಬುವವರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ಆರೋಪಿ ರವಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಮನೆಯಲ್ಲಿದ್ದ ಸುಮಾರು 8 ಗ್ರಾಂ ತೂಕದ ಚಿನ್ನದ ಬ್ರೇಸ್ ಲೈಟ್ ಕಳವು ಮಾಡಿ ಬಚ್ಚಿಟ್ಟಿದ್ದ. ಆರೋಪಿಯ ನಡತೆಯಿಂದ ಅನುಮಾನಗೊಂಡ ಮಾಲಿಕ ತಿಮ್ಮಪ್ಪಗೌಡ ಬಾಳೆಹೊನ್ನೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯ ಪ್ರವೃತ್ತರಾದ ಬಾಳೆಹೊನ್ನೂರು ಪಿಎಸ್ಐ ರವೀಶ್ ಹಾಗೂ ಕ್ರೈಂ ಎಸ್ಐ ಅಭಿಷೇಕ್ ಆರೋಪಿಯನ್ನು ಬಂಧಿಸಿದ್ದಲ್ಲದೆ. ತಡರಾತ್ರಿ 2 ಘಂಟೆಯವರೆಗೆ ವಿಚಾರಣೆ ನಡೆಸಿ ಮಾಲಿಕರ ತಿಮ್ಮಪ್ಪಗೌಡರ ಮನೆಯ ಹಿಂಬಾಗದ ಕೊಟ್ಟಿಗೆಯ ಮಣ್ಣಿನ ಇಟ್ಟಿಗೆಗಳ ನಡುವೆ ಆರೋಪಿ ಬಚ್ಚಿಟ್ಟಿದ್ದ 8 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್ ಅನ್ನು ವಶ ಪಡಿಸಿಕೊಂಡಿದ್ದಾರೆ.
ಆರೋಪಿ ರವಿ ತಡ ರಾತ್ರಿಯವರೆಗೂ ಕಳ್ಳತನ ಮಾಡಿರುವುದನ್ನು ಮುಚ್ಚಿಟ್ಟು, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಪ್ರಯತ್ನಿಸಿದ್ದರೂ, ಮದ್ಯರಾತ್ರಿ 2 ಘಂಟೆಯವರೆಗೂ ಚಲಬಿಡದೆ ವಿಚಾರಣೆ ನಡೆಸಿದ ಪಿಎಸ್ಐ ರವೀಶ್, ಕ್ರೈಂ ಎಸ್ಐ ಅಭಿಷೇಕ್ ಹಾಗೂ ಸಿಬ್ಬಂದಿ ಶಂಕರ್ ಹಾಗೂ ಇತರ ಸಿಬ್ಬಂಧಿಗಳಿದ್ದ ತಂಡ ಕಳ್ಳತನ ನಡೆದ 10 ಘಂಟೆಯೊಳಗೆ ಆರೋಪಿಯನ್ನು ಕದ್ದ ಮಾಲಿನ ಸಮೇತ ಹೆಡೆ ಮುರಿ ಕಟ್ಟಿದೆ. ಕಳ್ಳತನ ಮಾಡುವವರಿಗೆ ಪೊಲೀಸರ ನಡೆ ನಡುಕಹುಟ್ಟಿಸಿದ್ದು, ಬಾಳೆಹೊನ್ನೂರು ಪೊಲೀಸರ ಈ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ.