ಇತ್ತೀಚಿನ ಸುದ್ದಿ
ಅನಾಮಿಕ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿ: ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆಗೆ ಮಂಗಳೂರು ಧರ್ಮ ಪ್ರಾಂತ್ಯ ಆಕ್ಷೇಪ
16/08/2025, 20:10

ಮಂಗಳೂರು(reporterkarnataka.com): ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ, ನೆಲ ಅಗೆಯ ಬೇಕು ಎಂಬುದಾಗಿ ಹೇಳಿಕೆ ನೀಡಿರುವ ಅನಾಮಿಕ ಮುಸುಕುಧಾರಿ ವ್ಯಕ್ತಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯಾಗಿರುತ್ತಾನೆ. ಇದಕ್ಕಾಗಿ ವಿದೇಶದಿಂದ ಹಣ ಬರುತ್ತದೆ ಎಂಬುದಾಗಿ ಪ್ರತಿ ಪಕ್ಷ ನಾಯಕ ಆರ್. ಅಶೋಕ್ ಅವರು ಗಾಳಿ ಸುದ್ದಿಯನ್ನು ಆಧರಿಸಿ ನೀಡಿರುವ ಹೇಳಿಕೆಗೆ ಯಾವುದಾದರೂ ಪುರಾವೆ ಇದೆಯೇ? ಅವರ ಹೇಳಿಕೆಗೆ ಆಧಾರವಾದರೂ ಏನು ಎಂದುದನ್ನು ನಾವು ತಿಳಿಯ ಬಯಸುತ್ತೇವೆ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ವಂದನೀಯ ಫಾ. ಜೆ.ಬಿ. ಸಲ್ದಾನ್ಹಾ ಮತ್ತು ರೋಯ್ ಕ್ಯಾಸ್ಟಲಿನೊ ಅವರು ಪ್ರಶ್ನಿಸಿದ್ದಾರೆ.
ಏಕೆಂದರೆ ಪ್ರತಿ
ಪಕ್ಷ ನಾಯಕರಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಯಾವುದೇ ಪುರಾವೆಗಳಿಲ್ಲದೆ ಬಾಲಿಶವಾದ
ಹೇಳಿಕೆ ನೀಡ ಬಾರದು ಎಂದು ತಿಳಿಸಿದ್ದಾರೆ.
ಇನ್ನು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರು ಧರ್ಮಸ್ಥಳದ ಬೆಳವಣಿಗೆ ಕುರಿತು ಕ್ರೈಸ್ತರ ಸ್ಮಶಾನ ಭೂಮಿಯನ್ನು ಎಳೆದು ತಂದಿರುವುದು ಸರಿಯಾದ ಕ್ರಮವಲ್ಲ. ಕ್ರೈಸ್ತರ ದಫನ ಭೂಮಿಯಲ್ಲಿ ಅನಾಮಧೇಯ ಅಥವಾ ಅನಾಥ ಶವಗಳನ್ನು ಹೂಳುವುದಿಲ್ಲ. ಕ್ರೈಸ್ತರ ಸ್ಮಶಾನದಲ್ಲಿ ದಫನ ಮಾಡುವ ಪ್ರತಿಯೊಂದು ಮೃತದೇಹಕ್ಕೂ ಸರಿಯಾದ ದಾಖಲೆಗಳು ಇರುತ್ತವೆ. ಚರ್ಚ್ ಗಳ ಸ್ಮಶಾನದಲ್ಲಿ ಸಂಬಂಧಪಟ್ಟ ಚರ್ಚ್ ಗಳ ಸದಸ್ಯರ ಮೃತ ದೇಹಗಳನ್ನು ಮಾತ್ರ ಹೂಳಲಾಗುತ್ತಿದೆ. ಬೇರೊಂದು ಚರ್ಚಿನ ಸದಸ್ಯರ ಮೃತ ದೇಹವನ್ನು ಕೂಡಾ ದಫನ ಮಾಡುವುದಿಲ್ಲ. ಜನಾರ್ಧನ ಪೂಜಾರಿ ಅವರು ಕ್ರೈಸ್ತರ ದಫನ ಭೂಮಿಯ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲದೆ ಹೇಳಿಕೆ ನೀಡಿರ ಬಹುದೆಂದು ನಮ್ಮ ಅನಿಸಿಕೆ. ಅಂತಹ ಹೇಳಿಕೆಯನ್ನು ಅವರು ನೀಡ ಬಾರದಿತ್ತು. ಧರ್ಮಸ್ಥಳ ಗ್ರಾಮದಲ್ಲಿ ನೆಲ ಅಗೆಯುವ ವಿಚಾರದ ಬಗ್ಗೆ ಹೇಳಿಕೆ ನೀಡುವ ಭರದಲ್ಲಿ ಕ್ರೈಸ್ತರ ದಫನ ಭೂಮಿಯನ್ನು ಎಳೆದು ತಂದಿರುವುದು ನಮಗೆ ಬೇಸರ ತಂದಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.