ಇತ್ತೀಚಿನ ಸುದ್ದಿ
ಆಳ್ವಾಸ್ ಉದ್ಯೋಗ ಮೇಳ: ಶಾಸಕ ಕಾಮತ್ ನೇತೃತ್ವದಲ್ಲಿ ಪೂರ್ವಭಾವಿ ಶಿಬಿರ; 500ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗಿ
25/07/2025, 21:05

ಮಂಗಳೂರು(reporterkarnataka.com): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ವತಿಯಿಂದ ಆಗಸ್ಟ್ 1 ಮತ್ತು 2 ರಂದು ಆಳ್ವಾಸ್ ಕಾಲೇಜ್ ಕ್ಯಾಂಪಸ್ ನಲ್ಲಿ “ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ” ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಮಂಗಳೂರಿನಲ್ಲಿ ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆದ ಮಾಹಿತಿ ಶಿಬಿರದಲ್ಲಿ 500 ಕ್ಕೂ ಅಧಿಕ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಶಾಸಕರು, ನೀವು ಒಂದು ಉದ್ಯೋಗ ಪಡೆದು ಆರ್ಥಿಕವಾಗಿ ಸದೃಢರಾದರೆ ಮೊದಲು ಖುಷಿ ಪಡುವುದು ನಿಮ್ಮ ಹೆತ್ತವರು. ಆ ಕಾರಣಕ್ಕಾಗಿ ಆಳ್ವಾಸ್ ಕಾಲೇಜಿನ ಕ್ಯಾಂಪಸ್ ನಲ್ಲಿ ನಡೆಯುವ ಬೃಹತ್ ಉದ್ಯೋಗ ಮೇಳದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ಡಿಗ್ರಿ, ಡಿಪ್ಲೊಮ, ಇಂಜಿನಿಯರಿಂಗ್, ಐಟಿಐ, ಹೀಗೆ ವಿವಿಧ ವಿದ್ಯಾರ್ಹತೆಗೆ ಅನುಗುಣವಾಗಿ 5 ಸಾವಿರಕ್ಕೂ ಅಧಿಕ ಅವಕಾಶಗಳಿವೆ. ನಿಮ್ಮ ಅನುಕೂಲಕ್ಕಾಗಿ ಮಂಗಳೂರಿನಿಂದ ಬಸ್ ವ್ಯವಸ್ಥೆಯೂ ಸಹ ಇರಲಿದ್ದು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಈ ಕಾರ್ಯಾಗಾರದಲ್ಲಿ ಉದ್ಯೋಗಾಕಾಂಕ್ಷಿ ಯುವ ಮಿತ್ರರಲ್ಲಿ ಹೊಸ ಭರವಸೆ ತುಂಬಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರಮುಖರು ಹಾಗೂ ಆತ್ಮೀಯರಾಗಿರುವ ವಿವೇಕ್ ಆಳ್ವರು ಹಾಗೂ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯು ವಿಶೇಷ ಅಭಿನಂದನೆಗೆ ಅರ್ಹರು ಎಂದರು.
ಈ ಸಂದರ್ಭದಲ್ಲಿ ಮಂಡಲದ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು, ನಿವೃತ್ತ ಪ್ರಾಂಶುಪಾಲರಾದ ಬಾಲಕೃಷ್ಣ,ಪ್ರಾಂಶುಪಾಲರಾದ ಜಯಕರ ಭಂಡಾರಿ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.