ಇತ್ತೀಚಿನ ಸುದ್ದಿ
ಅಕ್ರಮ ಕಳ್ಳಭಟ್ಟಿ ಅಡ್ಡೆಯ ಮೇಲೆ ಪೊಲೀಸರ ದಾಳಿ: ಸುಮಾರು 400 ಲೀಟರ್ ಮದ್ಯ ನಾಶ; ಆರೋಪಿಗಳ ಹುಡುಕಾಟ
13/02/2022, 19:09
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೊಟ್ಟಿಗೆಹಾರ ಸಮೀಪದ ಬಾಳೂರು ಠಾಣಾ ವ್ಯಾಪ್ತಿಯ ಮಲೆಮನೆ ಗುಡ್ಡದಲ್ಲಿರುವ ಅಕ್ರಮ ಕಳ್ಳಬಟ್ಟಿ ಅಡ್ಡೆಯ ಮೇಲೆ ಬಾಳೂರು ಪೊಲೀಸರು ದಾಳಿ ನಡೆಸಿದ್ದಾರೆ.
ಮಲೆಮನೆ ಗ್ರಾಮದಲ್ಲಿ ಅಕ್ರಮ ಕಳ್ಳಭಟ್ಟಿ ದಂಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಬಾಳೂರು ಠಾಣಾ ಪಿಎಸ್‌ಐ ರೇಣುಕಾ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು 25 ಕೊಡಗಳಲ್ಲಿ ತುಂಬಿದ್ದ ಸುಮಾರು 400 ಲೀಟರ್ ಕಳ್ಳಭಟ್ಟಿ ಕೊಳೆಯನ್ನು ನಾಶ ಪಡಿಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ ಪರಿಕರಗಳನ್ನು ವಶಪಡಿಸಿಕೊಂಡಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ರಿಪೋರ್ಟರ್ ಕರ್ನಾಟಕಕ್ಕೆ ಪ್ರತಿಕ್ರಿಯಿಸಿರುವ ಬಾಳೂರು ಠಾಣೆಯ ಪಿಎಸ್‌ಐ ರೇಣುಕಾ ಅವರು, ಅಕ್ರಮ ಕಳ್ಳಭಟ್ಟಿ ದಂಧೆ ನಡೆಸುತ್ತಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕಳ್ಳಬಟ್ಟಿ ದಂಧೆ ಹಾಗೂ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣಕ್ಕೆ ಒತ್ತಾಯ ಕಳ್ಳಭಟ್ಟಿ ದಂಧೆ ಮಿತಿಮೀರಿದ್ದು ಭಾನುವಾರ ದೊಡ್ಡ ಪ್ರಮಾಣದಲ್ಲಿ ಕಳ್ಳಭಟ್ಟಿ ಕೊಳೆ ಪತ್ತೆಯಾಗಿರುವುದು ಆತಂಕಕಾರಿ ಬೆಳೆವಣಿಗೆಯಾಗಿದೆ. ಮಲೆನಾಡಿನ ಗ್ರಾಮಗಳ ಸ್ವಾಸ್ಥ್ಯವನ್ನು ಕೆಡಿಸುವ ಕಳ್ಳಭಟ್ಟಿ ದಂಧೆಗೆ ಕಡಿವಾಣ ಹಾಕಬೇಕು ಮತ್ತು ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು. ಬಾಳೂರು ಠಾಣಾ ವ್ಯಾಪ್ತಿಯ ಕೆಲ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.