ಇತ್ತೀಚಿನ ಸುದ್ದಿ
ಅಜಾತಶತ್ರು ಪದ್ಮರಾಜ್ ಸಂಸತ್ ಸದಸ್ಯರಾಗಲೇ ಬೇಕು: ಹಿಂದುಳಿದ ವರ್ಗಗಳ ಸಮಾಲೋಚನಾ ಸಭೆಯಲ್ಲಿ ಒಕ್ಕೊರಲಿನ ಧ್ವನಿ
07/04/2024, 21:41
ಮಂಗಳೂರು(reporterkarnataka.com): ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರು ಖಂಡಿತವಾಗಿಯೂ ಹಿಂದುಳಿದ ವರ್ಗಗಳ ಧ್ವನಿಯಾಗಿ ಕೆಲಸ ಮಾಡುತ್ತಾರೆ. ಅಜಾತಶತ್ರು ಪದ್ಮರಾಜ್ ಸಂಸತ್ ಸದಸ್ಯರಾಗಬೇಕು.
ಓಷಿಯನ್ ಪರ್ಲ್’ನಲ್ಲಿ ಕಾಂಗ್ರೆಸ್ ಏರ್ಪಡಿಸಿದ್ದ ಹಿಂದುಳಿದ ವರ್ಗಗಳಾದ ಗಟ್ಟಿ, ಕುಲಾಲ್, ವಿಶ್ವಕರ್ಮ, ಮೊಗವೀರ, ದೇವಾಡಿಗ, ಕ್ರೈಸ್ತ, ಬ್ರಾಹ್ಮಣ, ಬಲ್ಯಾಯ, ಜಿ.ಎಸ್.ಬಿ., ಎಸ್.ಸಿ., ಎಸ್.ಟಿ., ಜೋಗಿ, ರಾಮ ಕ್ಷತ್ರೀಯಾ, ಗಾಣಿಗ, ಸವಿತಾ, ಮಡಿವಾಳ ಸಮುದಾಯಗಳ ಸಮಾಲೋಚನಾ ಸಭೆಯಲ್ಲಿ ಕೇಳಿ ಬಂದ ಮಾತು ಇದು.
ಪದ್ಮರಾಜ್ ಉತ್ತಮ ವ್ಯಕ್ತಿ. ಅವರ ಸಾಮಾಜಿಕ, ಧಾರ್ಮಿಕ ಕೆಲಸ ಹಾಗೂ ಕಳಕಳಿಯ ಬಗ್ಗೆ ಎರಡು ಮಾತಿಲ್ಲ. ಕುಕ್ಕರ್ ಬ್ಲಾಸ್ಟ್’ನ ಸಂತ್ರಸ್ತ ಹಿಂದುಳಿದ ವರ್ಗದ ಪುರುಷೋತ್ತಮ್ ಅವರಿಗೆ ಮನೆ ನಿರ್ಮಿಸಿಕೊಟ್ಟಿರುವುದು ಅವಿಸ್ಮರಣೀಯ. ಇಂತಹ ಅನೇಕ ಕಾರ್ಯ ನಡೆಸಿದ್ದಾರೆ. ಇಂತಹ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಪ್ರಶಂಸನೀಯ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಹಿಂದುಳಿದ ವರ್ಗಗಳನ್ನು ಗುರುತಿಸಿ, ಸಮಾಲೋಚನೆ ನಡೆಸಿರುವುದು ಉತ್ತಮ ಬೆಳವಣಿಗೆ. ಈ ಮೂಲಕ ಕಾಂಗ್ರೆಸ್ ತನ್ನ ಭವಿಷ್ಯದ ಬಾಗಿಲನ್ನು ತೆರೆದಂತಾಗಿದೆ. ನಮ್ಮನ್ನು ಬಡಿದೆಬ್ಬಿಸಿದಂತಾಗಿದೆ. ಇಂದು ಬದಲಾವಣೆ ತೀರಾ ಅಗತ್ಯ. ಈ ಬದಲಾವಣೆಗೆ, ಪದ್ಮರಾಜ್ ಅವರ ಗೆಲುವಿಗೆ ನಾವೇನು ಮಾಡಬೇಕು ಎಂದು ಕೇಳಿದ ಹಿಂದುಳಿದ ವರ್ಗಗಳ ಮುಖಂಡರು, ಪದ್ಮರಾಜ್ ಗೆಲುವಿಗಾಗಿ ಜವಾಬ್ದಾರಿ ಹಂಚುವಂತೆ ಕೇಳಿಕೊಂಡರು.
*ಹಿಂದುಳಿದ ವರ್ಗದ ಧ್ವನಿಯಾಗಿ ಕೆಲಸ: ಪದ್ಮರಾಜ್ ಆರ್.:*
ಹಿಂದುಳಿದ ವರ್ಗದ ಪ್ರಮುಖರು ವ್ಯಕ್ತಪಡಿಸಿದ ಪ್ರೀತಿಯ, ಅಭಿಮಾನದ ಮಾತಿಗೆ ಅನಿಸಿಕೆ ವ್ಯಕ್ತಪಡಿಸುವ ವೇಳೆ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಭಾವುಕರಾದರು.
ಇದು ಪದ್ಮರಾಜ್’ಗೆ ಸಿಕ್ಕಿರುವ ಅವಕಾಶ ಅಲ್ಲ; ಸಮಸ್ತ ಹಿಂದುಳಿದ ವರ್ಗಕ್ಕೆ ಕೊಟ್ಟಿರುವ ಅವಕಾಶ ಎಂದ ಪದ್ಮರಾಜ್ ಆರ್., ಇದುವರೆಗೆ ತಾನು ಮಾಡಿಕೊಂಡು ಬಂದಿರುವ ಕೆಲಸಗಳೆಲ್ಲಾ, ದೇವರು ನನ್ನಿಂದ ಮಾಡಿಸಿದ್ದಾರೆ ಎಂದುಕೊಂಡಿದ್ದೇನೆ. ನೀವು ತನ್ನ ಮೇಲೆ ಇಟ್ಟಿರುವ ನಂಬಿಕೆ, ಭರವಸೆಗೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸುತ್ತೇನೆ. ಯಾರೂ ಕೂಡ ತಲೆ ತಗ್ಗಿಸುವ ಕೆಲಸ ತಾನು ಮಾಡುವುದಿಲ್ಲ; ತಲೆ ಎತ್ತಿ ನಡೆಯುವಂತಹ ಕೆಲಸ ಮಾಡುತ್ತೇನೆ ಮಾಡುತ್ತೇವೆ ಎಂದರು.
ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ತಿಳಿದುಕೊಳ್ಳುವ ದಿಶೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಸಮಾಲೋಚನಾ ಸಭೆ ಕರೆಯಲಾಗಿದೆ. ಸಮಾಜದ ಅಭಿವೃದ್ಧಿ, ಬೇಡಿಕೆಗಳ ಬಗ್ಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ. ದೈವ ದೇವರುಗಳ ನೆಲೆಬೀಡಾದ ಈ ನೆಲದಲ್ಲಿ ಸಂಪ್ರದಾಯಕ್ಕೆ ಬೆಲೆ ಸಿಗುವಂತಾಗಬೇಕು. ಸಾಮಾಜಿಕ ನ್ಯಾಯ ನೀಡುವಲ್ಲಿ ಬದ್ಧತೆ ಇರುವ ಪಕ್ಷ ಕಾಂಗ್ರೆಸ್. ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಅಧಿಕಾರಿಗಳ ಜೊತೆ ಇದೇ ರೀತಿಯ ಸಮಾಲೋಚನಾ ಸಭೆ ನಡೆಸಲಾಗುವುದು. ಹಿಂದುಳಿದ ವರ್ಗಗಳ ಧ್ವನಿಯಾಗಿ ಕೆಲಸ ನಿರ್ವಹಿಸುತ್ತೇನೆ ಎಂದರು.
ಭೂಸುಧಾರಣಾ ಕಾಯ್ದೆಯಂತಹ ಅನೇಕ ಯೋಜನೆಗಳನ್ನು ಜನರಿಗೆ ನೀಡಿ, ಹಿಂದುಳಿದ ವರ್ಗವನ್ನು ಮೇಲೆ ತರಲು ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಮುಂದೆಯೂ ಸದೃಢ ಮಂಗಳೂರನ್ನು ರೂಪಿಸುವ ಪ್ರಯತ್ನ ಮಾಡಲಾಗುವುದು ಎಂದರು.
*ಕರಾವಳಿಯಿಂದಲೇ ಬದಲಾವಣೆಯ ಗಾಳಿ: ದಿನೇಶ್ ಗುಂಡೂರಾವ್*
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಸಮಾಜದ ಪ್ರತಿಯೋರ್ವನು ಅಭಿವೃದ್ಧಿ ಆಗಬೇಕು. ಈ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡಲಿದೆ. ಇದರ ಹೆಜ್ಜೆಯಾಗಿ ಹಿಂದುಳಿದ ವರ್ಗಗಳ ಸಮಾಲೋಚನಾ ಸಭೆ ಕರೆಯಲಾಗಿದೆ. ಬದಲಾವಣೆಯ ಗಾಳಿ ಬೀಸತೊಡಗಿದೆ. ಅದು ಕರಾವಳಿಯಿಂದಲೇ ಆರಂಭವಾಗಿದೆ ಎನ್ನುವುದು ಸಂತೋಷದ ವಿಷಯ. ನೀವು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದೀರಿ. ನ್ಯಾಯಯುತ ಬದುಕಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮತದಾನ ಚಲಾಯಿಸುವುದು ತುಂಬಾ ಅಗತ್ಯ. ಇದರ ಬಗ್ಗೆ ಇತರರಿಗೂ ಜಾಗೃತಿ ಮೂಡಿಸಬೇಕು ಎಂದ ಅವರು, ಪದ್ಮರಾಜ್ ಆರ್. ಅವರ ಗೆಲುವಿಗೆ ನಿಮ್ಮ ಬೆಂಬಲ, ಆಶೀರ್ವಾದ ಇರಲಿ ಎಂದು ಆಶಿಸಿದರು.
ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಬಿ. ರಮಾನಾಥ ರೈ, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ, ಕಾರ್ಪೋರೇಟರ್ ಎ.ಸಿ. ವಿನಯ್ ರಾಜ್, ಮಾಜಿ ಮೇಯರ್ ಭಾಸ್ಕರ್ ಮೊಯ್ಲಿ, ಜೆ.ಆರ್. ಲೋಬೊ, ಕಣಚೂರು ಮೋನು ಮೊದಲಾದವರು ಉಪಸ್ಥಿತರಿದ್ದರು.