ಇತ್ತೀಚಿನ ಸುದ್ದಿ
ಅಗ್ರಹಾರ-ಹೊರಬೈಲು ರಸ್ತೆಯಲ್ಲಿ ಹೊಂಡ ಗುಂಡಿ: ವಾಹನ ಸವಾರರ ಪರದಾಟ; ಗ್ರಾಮಸ್ಥರಿಂದ ಪ್ರತಿಭಟನೆ ಎಚ್ಚರಿಕೆ
12/11/2024, 17:05

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ತೀರ್ಥಹಳ್ಳಿಯ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಟಣದಿಂದ ಕುರುವಳ್ಳಿ , ಅಗ್ರಹಾರ ಹೊರಬೈಲು ಸಂಪರ್ಕ ರಸ್ತೆಗಳು ಮರಳು ಸಾಗಾಣಿಕೆಯಿಂದ ಹೊಂಡ ಗುಂಡಿ ಬಿದ್ದು ಮೂರು ವರ್ಷಗಳಿಂದ ಹದಗೆಟ್ಟಿರುವ ಹಿನ್ನಲೆಯಲ್ಲಿ ರಸ್ತೆಯಲ್ಲಿ ಇತರ ವಾಹನಗಳು ಸಂಚರಿಸಲು ಪರದಾಡುತ್ತಿದ್ದು ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.
ಬೊಮ್ಮಸಯ್ಯನ ಅಗ್ರಹಾರದಿಂದ ಹೊರಬೈಲಿನವರೆಗೆ ಹಲವೆಡೆ ಅಲ್ಲಲ್ಲಿ ದೊಡ್ಡದಾದ ಹೊಂಡ ಗುಂಡಿ ಬಿದ್ದಿವೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಮೊದಲೇ ದುರಸ್ತಿ ಕಾಣದಿರುವ ರಸ್ತೆಯಲ್ಲಿ ವಾಹನ ಸವಾರರು ಸ್ವಲ್ಪ ವೇಗವಾಗಿ ತೆರಳಿದರೂ ಅಪಾಯ ಕಟ್ಟಿಟ್ಟಬುತ್ತಿ. ಈ ರಸ್ತೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿತ್ಯ ಓಡಾಡುತ್ತಾರೆ. ಹೊಂಡ ಗುಂಡಿ ಬಿದ್ದು ಸಮಸ್ಯೆಗಳಿದ್ದರೂ ಸ್ಪಂದಿಸುವ ಮನೋಭಾವ ಮಾತ್ರ ಅವರಿಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ಭಾಗದ ಶಾಲಾ ಮಕ್ಕಳು, ಶಾಲೆಯ ವಾಹನಗಳು, ಪಾಲಕರು ಮಕ್ಕಳನ್ನು ಶಾಲೆಗೆ ಬಿಡಲು-ಕರೆದುಕೊಂಡು ಹೋಗಲು ದ್ವಿಚಕ್ರ ವಾಹನಗಳಲ್ಲಿ ಬರುತ್ತಾರೆ. ರಸ್ತೆಯಲ್ಲಿನ ಹೊಂಡ ಗುಂಡಿಯಿಂದಾಗಿ ಅಪಾಯಕಾರಿ ಸ್ಥಿತಿಯಲ್ಲಿ, ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ. ಈ ರಸ್ತೆ ದುಸ್ಥಿತಿಯ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳು ತಕ್ಷಣ ಗಮನ ಹರಿಸಬೇಕಿದೆ.
ಈ ರಸ್ತೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಕೂಡ ಯಾವುದೇ ಕ್ರಮವನ್ನು ಇದುವರೆಗೆ ಕೈಗೊಂಡಿಲ್ಲ. ಇದರಿಂದ ರೋಸಿ ಹೋದ ಗ್ರಾಮಸ್ಥರು ನಾಳೆ ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ರಸ್ತೆ ತಡೆದು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.
ಸುಮಾರು 20 ವರ್ಷದ ಹಿಂದೆ ಗ್ರಾಮಕ್ಕೆ ಇಂತಹ ರಸ್ತೆ ಇತ್ತು. ತೀರ್ಥಹಳ್ಳಿ ಪಟ್ಟಣಕ್ಕೆ ಬರಲು ಮೂರು ಕೀಲೋ ಮೀಟರ್ ದೂರವನ್ನು ಕ್ರಮಿಸಲು ಅರ್ಧ ಗಂಟೆಗೂ ಅಧಿಕ ಸಮಯ ಬೇಕಾಗಿತ್ತು. ಅಂದು ದುರಸ್ತಿ ಮರೀಚಿಕೆಯಾಗಿತ್ತು. ಇಂದು ರಸ್ತೆ ಉತ್ತಮವಾಗಿ ಇದ್ದರು ಕೂಡ ಮೂರು ವರ್ಷಗಳಿಂದ ಈ ರಸ್ತೆಯಲ್ಲಿ ಮರುಳು ಲಾರಿ ಓಡಾಟದಿಂದ ಹೊಂಡ ಗುಂಡಿ ಬಿದ್ದು ಇಂತಹ ಸ್ಥಿತಿ ಬಂದೊದಗಿದೆ. ಪಟ್ಟಣಕ್ಕೆ ಬರಲು ಗಂಟೆಗೂ ಹೆಚ್ಚುಕಾಲ ಹಿಡಿಯುವ ಗತವೈಭವ ನೆನಪಿಸುತ್ತದೆ ಎಂದು ಬುಕ್ಲಾಪುರ ಸಾರ್ವಜನಿಕರು ಹೇಳುವಂತಾಗಿದೆ.