ಇತ್ತೀಚಿನ ಸುದ್ದಿ
ಮತ್ತೆ ಅವಘಡ ಸಂಭವಿಸಿದರೆ ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳೇ ಜವಾಬ್ದಾರರು: ಸ್ಪೀಕರ್ ಖಾದರ್ ಎಚ್ಚರಿಕೆ
30/06/2024, 14:36
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.ಕಂ
ಮಳೆಗಾಲದಲ್ಲಿ ಸಾವು -ನೋವು ಸಂಭವಿಸಬಹುದಾದ ಡೇಂಜರ್ ಸ್ಪಾಟ್ ಗಳನ್ನು ಮೊದಲೇ ಗುರುತಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಮತ್ತೆ ಅವಘಡ ಸಂಭವಿಸಿದರೆ ಸಂಬಂಧಪಟ್ಟ ಮೆಸ್ಕಾಂನ ಅಧಿಕಾರಿಗಳೇ ಸಂಪೂರ್ಣ ಜವಾಬ್ದಾರರು ಅಗಲಿದ್ದಾರೆ. ಆಯಾ ವ್ಯಾಪ್ತಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ
ನಗರದ ಬಿಜೈನಲ್ಲಿರುವ ಮೆಸ್ಕಾಂ ಕಚೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ವಿದ್ಯುತ್ ತಂತಿ ತಗುಲಿ ಜಿಲ್ಲೆಯಲ್ಲಿ ಮೂರು ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಸಭೆ ಕರೆದಿದ್ದರು.
ಡೇಂಜರ್ ಸ್ಪಾಟ್ ಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಕಾರ್ಯ ಕೂಡ ಆಗಬೇಕು. ಇದರಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದು ಸಲಹೆ ನೀಡಿದರು.
ತಂತಿ ಮೇಲೆ ಮರ ಉರುಳುವ ಸಂಭವ, ವಿದ್ಯುತ್ ಕಂಬ ಬೀಳುವ ಸಾಧ್ಯತೆ ಇತ್ಯಾದಿಗಳನ್ನು ಮೊದಲೇ ಗುರುತಿಸಿ ನಿರ್ವಹಣೆ ಮಾಡಬೇಕು. ಇದಕ್ಕಾಗಿ ಮೆಸ್ಕಾಂ ಪಿಡಬ್ಲ್ಯೂಡಿ ಮತ್ತು ಅರಣ್ಯ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ವಿದ್ಯುತ್ ತಂತಿಗೆ ಬೀಳುವ ಮರಗಳನ್ನು ತೆರವು ಮಾಡಲು ವಿಳಂಬ ಮಾಡುವುದು ಯಾಕೆ? ಈ ಆಧುನಿಕ ತಂತ್ರಜ್ಞಾನದಲ್ಲಿ ಎಲ್ಲ ರೀತಿಯ ಸಲಕರಣೆಗಳಿದ್ದರೂ ಕೂಡ ಕಾಲಕಾಲಕ್ಕೆ ಇಂಥ ಕೆಲಸಗಳನ್ನು ಯಾಕೆ ಮಾಡುತ್ತಿಲ್ಲ? ಇದರಿಂದಾಗಿಯೇ ಮೊನ್ನೆ ಮೂರು ಸಾವು ಸಂಭವಿಸಿದ್ದು. ಆಯಾ ವ್ಯಾಪ್ತಿಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಇರುವ ಇಂತಹ ಸ್ಪಾಟ್ ಗಳನ್ನು ಗುರುತಿಸಿ ಯುದ್ಧೋಪಾದಿಯಲ್ಲಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಮಂಗಳೂರಿನಲ್ಲಿ ರಿಕ್ಷಾ ಚಾಲಕರಿಬ್ಬರ ಸಾವು ಪ್ರಕರಣದ ಕುರಿತು ಸ್ಪಷ್ಟನೆ ನೀಡಿದ ಮೆಸ್ಕಾಂ ಅಧಿಕಾರಿ, ಘಟನೆ ನಡೆದ ಪಾಂಡೇಶ್ವರ ಪ್ರದೇಶದಲ್ಲಿ ಸಂಪೂರ್ಣ ಅಂಡರ್ ಗ್ರೌಂಡ್ ಕೇಬಲ್ ಕಾಮಗಾರಿ ನಡೆದಿದೆ. ಆದರೆ ಘಟನೆ ನಡೆದ ರಸ್ತೆಯಲ್ಲಿ ಬೀದಿ ದೀಪಗಳು ಇರಬೇಕು ಎಂದು ಮಹಾನಗರ ಪಾಲಿಕೆಯವರು ತಿಳಿಸಿದ್ದರಿಂದ ಎಚ್ ಟಿ ತಂತಿಯನ್ನು ಹಾಗೇ ಉಳಿಸಲಾಗಿತ್ತು. ಇದೇ ತಂತಿಯ ಮೇಲೆ ಮರ ಬಿದ್ದ ದುರ್ಘಟನೆ ಸಂಭವಿಸಿದೆ ಎಂದು ಹೇಳಿದರು.
ಮಳೆಗಾಲ ಸಂದರ್ಭದಲ್ಲಿ ಸಮುದ್ರ ತೀರ, ನದಿ, ರಾಜ ಕಾಲುವೆ ಚರಂಡಿ ಬಳಿ ವಿದ್ಯುತ್ ಅಪಘಾತ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬ, ಮರಗಳು ತಕ್ಷಣ ತೆರವು ಮಾಡಿ. ಅಲ್ಲದೆ ಇಂತಹ ಸ್ಪಾಟ್ ಗಳು ಕಂಡು ಬಂದರೆ ಜನರಿಗೆ ಮಾಹಿತಿ ನೀಡಲು ಸೂಕ್ತ ವೇದಿಕೆಯನ್ನು ಕಲ್ಪಿಸಬೇಕು. ಇಂಥ ವಿದ್ಯುತ್ ತಂತಿ ಬಿದ್ದು ಸಾವು -ನೋವು ಸಂಭವಿಸುವ ಮೊದಲು ಕಡಿದು ಬೀಳುವ ತಂತಿಯಲ್ಲಿ ವಿದ್ಯುತ್ ಪ್ರವಹಿಸದಂತೆ ಸ್ವಿಚ್ ಗಳನ್ನು ಅಳವಡಿಸುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು ಎಂದು ತಾಕೀತು ಮಾಡಿದರು.
ಬೇರೆ ದೇಶಗಳು ಮತ್ತು ಇತರ ರಾಜ್ಯಗಳಲ್ಲಿ ಟ್ರಾನ್ಸ್‌ಫಾರ್ಮರ್ ಪ್ರದೇಶಗಳನ್ನು ಸುಂದರೀಕರಣ ಮಾಡಿದ್ದಾರೆ. ಆದರೆ ನಮ್ಮಲ್ಲಿ ಟ್ರಾನ್ಸ್‌ಫಾರ್ಮರ್ ಗೆ ಬೇಲಿ ಹಾಕುತ್ತಾರೆ. ಅದರೊಳಗೆ ಜನ ಕಸ ಹಾಕ್ತಾರೆ. ಇದರ ಬಗ್ಗೆ ಕೂಡ ಗಮನಹರಿಸಿ ಸುಂದರೀಕರಣಕ್ಕೆ ಆದ್ಯತೆ ನೀಡುವಂತೆ ಹೇಳಿದರು.
ಮಂಗಳೂರು ನಗರದಲ್ಲಿ ಪ್ರಸ್ತುತ ಖಾಲಿ ಜಾಗ ಇಲ್ಲದೆ ಇರುವುದರಿಂದ ಮುಂದಿನ ವರ್ಷಗಳಲ್ಲಿ ಕಾಲೇಜುಗಳು, ಉದ್ಯಮಗಳು ಉಳ್ಳಾಲ ಮತ್ತು ಮೂಲ್ಕಿ ಭಾಗದಲ್ಲಿ ಬರಲಿವೆ. ಹಾಗಾಗಿ ಇಂತಹ ಅಭಿವೃದ್ದಿ ಶೀಲ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗದಂತೆ ಮುಂದಿನ 30 ವರ್ಷಗಳ ಮುಂದಾಲೋಚನೆ ಇಟ್ಟುಕೊಂಡು ಮೆಸ್ಕಾಂ ಕಾಮಗಾರಿಗ ನಿರ್ವಹಿಸಬೇಕು.
ಇಂತಹ ಕಾಮಗಾರಿ ನಡೆಸುವ ವೇಳೆ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಕಂಡು ಬಂದರೆ ಅವುಗಳನ್ನು ತಾನು ಬಗೆಹರಿಸುವುದಾಗಿ ಸ್ಪೀಕರ್ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲಂ ಮಾತನಾಡಿ, ಮಂಗಳೂರಿನ ರಿಕ್ಷಾ ಚಾಲಕರ ಸಾವು ಪ್ರಕರಣದಲ್ಲಿ ಒಬ್ಬರು ರಿಕ್ಷಾ ಚಾಲಕರು ಸಾವಿಗೀಡಾದ ಬಳಿಕ ಮತ್ತೊಬ್ಬ ರಿಕ್ಷಾ ಚಾಲಕ ಗೋಣಿಚೀಲವನ್ನು ತಂದು ಆತನನ್ನು ರಕ್ಷಣೆಗೆ ಮಾಡಲು ಪ್ರಯತ್ನಿಸಿದ್ದರು. ಆದರೆ ತಿಳುವಳಿಕೆ ಇಲ್ಲದೆ ಅವರೂ ಸಾವಿಗೀಡಬೇಕಾಯಿತು. ಆದ್ದರಿಂದ ವಿದ್ಯುತ್ ಅಪಘಾತಗಳ ಸಂದರ್ಭದಲ್ಲಿ ಅದನ್ನು ಸಾರ್ವಜನಿಕರು ಯಾವ ರೀತಿ ನಿರ್ವಹಿಸಬಹುದು ಎಂಬ ಕುರಿತಾದ ಜಾಗೃತಿ ವಿಡಿಯೋಗಳನ್ನು ಮಾಡುವುದು ಮತ್ತು ಕರಪತ್ರಗಳನ್ನು ಮುದ್ರಿರಿಸಿ ಹಂಚಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಪ್ರಸ್ತುತ ಜಿಲ್ಲೆಯಲ್ಲಿ ಲೈನ್ ಮ್ಯಾನ್ ಗಳ ಕೊರತೆ ಇದೆ. ಜಿಲ್ಲೆಗೆ ನಿಯೋಜನೆಯಾಗುವ ಲೈನ್ ಮ್ಯಾನ್ ಗಳು ವರ್ಗಾವಣೆ ತೆಗೆದುಕೊಂಡು ತಮ್ಮ ಜಿಲ್ಲೆಗೆ ತೆರಳುವುದರಿಂದ ಈ ಸಮಸ್ಯೆ ಉದ್ಭವ ಆಗಿದೆ ಎಂದು ಮೆಸ್ಕಾಂ ಅಧಿಕಾರಿಯೊಬ್ಬರು ಗಮನಕ್ಕೆ ತಂದರು.
ವರ್ಗಾವಣೆ ಸಂದರ್ಭದಲ್ಲಿ ಮೆಸ್ಕಾಂ ಪರಿಶೀಲನೆ ಮಾಡಿ ಎನ್ ಓ ಸಿ ನೀಡುವಂತೆ ಖಾದರ್ ಸಲಹೆ ನೀಡಿದರು.
ಮೆಸ್ಕಾಂ ಎಂಡಿ, ಡಿಸಿಎಫ್ ಅಂತೋನಿ ಮರಿಯಪ್ಪ ಉಪಸ್ಥಿತರಿದ್ದರು.