ಇತ್ತೀಚಿನ ಸುದ್ದಿ
ಬಸವ ಕಲ್ಯಾಣದ ಸಮಗ್ರ ಅಭಿವೃದ್ಧಿಗೆ ಕ್ರಮ: ವಿಧಾನ ಪರಿಷತ್ ನಲ್ಲಿ ಸರಕಾರದ ಭರವಸೆ
12/08/2025, 20:02

ಬೆಂಗಳೂರು (reporterkarnataka.com): ಬಸವ ಕಲ್ಯಾಣದ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸಲಾಗುವುದೆಂದು ಸಚಿವ ಈಶ್ವರ್ ಖಂಡ್ರೆವಿಧಾನ ಪರಿಷತ್ ನಲ್ಲಿ ಇಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಡಾ. ಎಂ.ಜಿ.ಮುಳೆ ಅವರು ನಿಯಮ 72 ರ ಗಮನ ಸೆಳೆಯುವ ಸೂಚನೆಯಡಿ ಬಸವ ಕಲ್ಯಾಣ ಅಭಿವೃಧ್ದಿಗೆ ಅನುದಾನ ಕೊರತೆ ಕುರಿತಂತೆ ಕೇಳಲಾದ ಪ್ರಶ್ನೆಗೆ ಕಂದಾಯ ಸಚಿವರ ಪರವಾಗಿ ಉತ್ತರಿಸಿದ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ, ಬಸವ ಕಲ್ಯಾಣದ ಸಮಗ್ರ ಅಭಿವೃದ್ಧಿಗಾಗಿ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ರಚನೆಯಾಗಿದ್ದು, ಇಲ್ಲಿಯವರೆಗೆ 17 ಸ್ಮಾರಕಗಳನ್ನು ಅಭಿವೃದ್ದಿ ಪಡಿಸಲಾಗಿದ್ದು, ಉಳಿದ ಸ್ಮಾರಕಗಳ ಅಭಿವೃದ್ಧಿಯನ್ನು ಅನುದಾನದ ಲಭ್ಯತೆಗೆ ಅನುಗುಣವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. 26-06-2025 ರಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಯೋಜನೆ ಪರಿಷ್ಕೃತ ಗೊಂಡಿದ್ದು, 742 ಕೋಟಿಗಳಿಗೆ ಅನುಮೋದನೆ ನೀಡಲಾಗಿದ್ದು, ಸರ್ಕಾರ ಇದುವರೆಗೆ 325 ಕೋಟಿ ಬಿಡುಗಡೆ ಮಾಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದರು
ಶರಣರ ವಚನಗಳ ಸಂಗ್ರಹ ಕಾರ್ಯ ಪೂರ್ಣಗೊಂಡಿದ್ದು, ಅದನ್ನು ಧ್ವನಿ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ನೂತನ ಅನುಭವ ಮಂಟಪದ ಒಳಾಂಗಣದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಬಸವ ವನ ಉದ್ಯಾನವನದ ಸುತ್ತ ತಡೆಗೋಡೆಯನ್ನು ಸಹ ನಿರ್ಮಿಸಲಾಗಿದೆ ಎಂದರು.