ಇತ್ತೀಚಿನ ಸುದ್ದಿ
22,600 ರೂ. ಲಂಚ ಸ್ವೀಕಾರ: ಎಸ್‌ಡಿಎ ಸಂಪತ್ ಮಂಗಳೂರು ಲೋಕಾಯುಕ್ತ ಬಲೆಗೆ
03/03/2026, 19:26
ಮಂಗಳೂರು(reporterkarnataka.com):ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯ ವಿದ್ಯುತ್ ಉಪವಿಭಾಗ ಎಸ್‌ಡಿಎ ಆಗಿರುವ ಸಂಪತ್ ಅವರು 22,600 ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ರಾಜ್ಯ ಸರ್ಕಾರದ ಮಾನ್ಯತೆ ಪಡೆದ ಇಲೆಕ್ಟ್ರಿಕಲ್ ಪ್ರಥಮ ದರ್ಜೆ ಗುತ್ತಿಗೆದಾರರು 2025ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳಿಗೆ ಒಳಪಟ್ಟ ದಾರಿ ದೀಪ ವಿಸ್ತರಣೆ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಿದ್ದರು. ಕಾಮಗಾರಿಯ ಬಿಲ್ ಪಾವತಿಗೆ 4 ಶೇಕಡಾ ಪ್ರಮಾಣದಲ್ಲಿ ಒಟ್ಟು ₹22,600/- ಲಂಚ ನೀಡುವಂತೆ ಸಂಪತ್ ಅವರು ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಗುತ್ತಿಗೆದಾರರು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧಾರವಾಗಿ ಸಂಪತ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಇದಾದ ಬಳಿಕ 02.03.2026 ರಂದು ಸಂಪತ್ ಅವರು ಫಿರ್ಯಾದುದಾರರಿಂದ ₹22,600/- (ಇಪ್ಪತ್ತೆರಡು ಸಾವಿರ ಆರು ನೂರು ರೂ.) ಲಂಚದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ. ಕಾರ್ಯಾಚರಣೆ ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರಾದ ಬಿ.ಪಿ. ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಸುರೇಶ್ ಕುಮಾರ್ ಪಿ. ಹಾಗೂ ಡಾ. ಗಾನ ಪಿ. ಕುಮಾರ್, ಪಿ.ಐ. ಭಾರತಿ ಜಿ ಅವರ ಉಸ್ತುವಾರಿಯಲ್ಲಿ ಪೊಲೀಸ್ ನಿರೀಕ್ಷಕರಾದ ಚಂದ್ರಶೇಖರ್ ಕೆ.ಎನ್. ಮತ್ತು ಸಿಬ್ಬಂದಿಗಳಾದ ರಾಜಪ್ಪ, ಮಹೇಶ್, ಆದರ್ಶ್, ರಾಮ ನಾಯ್ಕ, ಗಂಗಣ್ಣ, ಮಹಾದೇವ, ಪವಿತ್ರ, ಲಕ್ಷ್ಮೀ, ರವಿ ಪವಾರ್ ಹಾಗೂ ನವೀನ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.












