ಇತ್ತೀಚಿನ ಸುದ್ದಿ
ಎಬಿವಿಪಿ ಗೂಂಡಾಗಿರಿ ಪ್ರವೃತ್ತಿ ಖಂಡನೀಯ: ಎನ್ ಎಸ್ ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ
10/09/2023, 17:57
ಮಂಗಳೂರು(reporterkarnataka.com): ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಸ್ವಾತಂತ್ರ್ಯ ಹೋರಾಟಗಾರ
ಬಿ ವಿ ಕಕ್ಕಿಲ್ಲಾಯರ ನೆನಪಿನಲ್ಲಿ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮವನ್ನು ತಡೆಯಲು ಎಬಿವಿಪಿ ನಡೆಸಿದ ಪ್ರತಿಭಟನೆ ಹಾಗೂ ಗೂಂಡಾಗಿರಿಯನ್ನು ಎನ್ ಎಸ್ ಯುಐ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಹೇಳಿದ್ದಾರೆ.
ಸೆಪ್ಟೆಂಬರ್ 9ರಂದು ದಿಲ್ಲಿ ವಿಶ್ವವಿದ್ಯಾನಿಲಯದ ನಿವೃತ್ತ ಸಹ ಪ್ರಾಧ್ಯಾಪಕ, ಸಂಶೋಧಕ ಡಾ. ಶಂಸುಲ್ ಇಸ್ಲಾಂ ಅವರ ಉಪನ್ಯಾಸವನ್ನು ತಡೆಯಲು ಎಬಿವಿಪಿ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ಕಾಲೇಜಿನ ಹೊರಗೂ, ಒಳಗೂ ಪ್ರತಿಭಟನೆ ನಡೆಸಿ ಗೂಂಡಾಗಿರಿ ನಡೆಸಿದ್ದನ್ನು ಎನ್ ಎಸ್ ಯು ಐ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಉಪನ್ಯಾಸ ಕಾರ್ಯಕ್ರಮವು ನಮ್ಮ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಜಂಟಿ ಬಲಿದಾನಗಳು, ಜಂಟಿ ವಾರಿಸುದಾರಿಕೆ ಎಂಬ ವಿಷಯದಲ್ಲಿತ್ತು. ಜೊತೆಗೆ, ಮೊದಲ ಸ್ವಾತಂತ್ರ್ಯ ಸಂಗ್ರಾಮದ ಅದ್ಭುತ ಘಟನೆಗಳ ಬಗ್ಗೆ ಡಾ. ಶಂಸುಲ್ ಇಸ್ಲಾಂ ಅವರ ಕೃತಿಯ ಕನ್ನಡಾನುವಾದದ ಲೋಕಾರ್ಪಣೆಯೂ ಇತ್ತು. ಅಷ್ಟೇ ಅಲ್ಲದೆ, 1857-58ರ ಆ ಸ್ವಾತಂತ್ರ್ಯ ಸಂಗ್ರಾಮದ ಹುರುಪಿನಲ್ಲಿ ಕನ್ನಡ ನಾಡಿನ ವಿವಿಧೆಡೆಗಳಲ್ಲಿ ನಡೆದ ಬ್ರಿಟಿಷ್ ವಿರೋಧಿ ಬಂಡಾಯಗಳಲ್ಲಿ ಹುತಾತ್ಮರಾದ 136 ವೀರರ ಹೆಸರುಗಳನ್ನು ಅದೇ ಮೊದಲ ಬಾರಿಗೆ ಪ್ರಕಟಿಸಿ ಅವರಿಗೆ ಗೌರವಾರ್ಪಣೆಯನ್ನೂ ಮಾಡುವ ವಿಶೇಷ ಕಾರ್ಯಕ್ರಮವೂ ಇತ್ತು. ಇವೆಲ್ಲವನ್ನೂ ವಿರೋಧಿಸಿ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ಮಾಡಿರುವುದು ಎಬಿವಿಪಿಯ ನಿಜ ಬಣ್ಣವನ್ನು ತೋರಿಸಿದೆ, ಮಾತ್ರವಲ್ಲ, ಆ ಪ್ರತಿಭಟನೆಯು ಸ್ವಾತಂತ್ರ್ಯ ಹೋರಾಟಗಾರರಿಗೆ, ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದ ಹುತಾತ್ಮರಿಗೆ, ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಮಾಡಿರುವ ಅವಮಾನವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಯಾವ ಪಾತ್ರವನ್ನೂ ವಹಿಸದೆ, ಬದಲಿಗೆ ಬ್ರಿಟಿಷರ ಏಜೆಂಟರಾಗಿ ಕೆಲಸ ಮಾಡಿದ ಆರೆಸ್ಸೆಸ್ ನ ಅಂಗಸಂಸ್ಥೆಯಾದ ಎಬಿವಿಪಿ ಸ್ವಾತಂತ್ರ್ಯ ಹೋರಾಟದ ಬಗ್ಗೆ, ದೇಶಕ್ಕಾಗಿ ಮಡಿದ ಹುತಾತ್ಮರ ಬಗ್ಗೆ ಕಾರ್ಯಕ್ರಮ ನಡೆಸುವುದನ್ನು ವಿರೋಧಿಸುವುದು ಯಾವುದೇ ಅಚ್ಚರಿಯ ವಿಷಯ ಅಲ್ಲವಾದರೂ, ವಿದ್ಯಾರ್ಥಿಗಳನ್ನು ಬಳಸಿಕೊಂಡು ಹೀಗೆ ಅವಮಾನಕರವಾಗಿ ವರ್ತಿಸಿರುವುದು ತೀರಾ ನಾಚಿಕೆಗೇಡಿನ ಕೆಲಸವಾಗಿದೆ.
ಸಭೆಯಲ್ಲಿ ಭಾಗವಹಿಸಲು ಒಳಬರುತ್ತಿದ್ದ ನಮ್ಮ ಮಂಗಳೂರು ವಿಶ್ವವಿದ್ಯಾನಿಲಯದಲ್ಲೇ ಇತಿಹಾಸ ವಿಜ್ಞಾನದ ಹಿರಿಯ ಪ್ರಾಧ್ಯಾಪಕರಾಗಿ, ಬಳಿಕ ದಿಲ್ಲಿ ವಿವಿಯಲ್ಲಿಯೂ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಡಾ. ಕೇಶವನ್ ವೇಲುತ್ತಾಟ್ ಅವರನ್ನು ಎಬಿವಿಪಿ ಗೂಂಡಾಗಳು ತಡೆದು ನಿಲ್ಲಿಸಿ ಹಲ್ಲೆ ಮಾಡಲು ಮುಂದಾದದ್ದು ಶಿಕ್ಷಕರ ಮೇಲೆ, ವಿದ್ಯೆಯ ಮೇಲೆ ಅವರಿಗಿರುವ ಕನಿಷ್ಠ ಭಾವನೆಯನ್ನು ತೋರಿಸುತ್ತದೆ. ಡಾ. ಕೇಶವನ್ ವೇಲುತ್ತಾಟ್ ಅವರ ಮೇಲೆ ನಡೆದಿರುವ ದಾಳಿಗೆ ಎಬಿವಿಪಿ ಈ ಕೂಡಲೇ ಅವರಲ್ಲಿ ಕ್ಷಮೆಯಾಚಿಸಬೇಕೆಂದು ನಾವು ಆಗ್ರಹಿಸುತ್ತೇವೆ.
ಒಟ್ಟಿನಲ್ಲಿ ಎಬಿವಿಪಿಯ ಈ ಅನಾಗರಿಕ ಪ್ರತಿಭಟನೆಯು ಶಿಕ್ಷಣಕ್ಕೆ ಹೆಸರಾಗಿರುವ ದಕ ಜಿಲ್ಲೆಗೆ ಕಪ್ಪು ಚುಕ್ಕೆಯಾಗಿದ್ದು, ವಿವಿ ಕಾಲೇಜು ಉಳಿಸಿ ಎಂಬ ಫಲಕ ಹಿಡಿದು ವಿವಿ ಕಾಲೇಜಿನ ಮಾನವನ್ನು ಇಡೀ ಜಗತ್ತಿನೆದುರು ಕಳೆದು ಅವಮಾನ ಮಾಡಿರುವ ಹೇಯ ಕೃತ್ಯವಾಗಿದೆ. ಎನ್ ಎಸ್ ಯು ಐ ಇದನ್ನು ಉಗ್ರವಾಗಿ ಖಂಡಿಸುತ್ತದೆ ಮತ್ತು ಜಿಲ್ಲೆಯ ಹಾಗೂ ನಾಡಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇಂಥ ಶಿಕ್ಷಣ ವಿರೋಧಿ, ಸ್ವಾತಂತ್ರ್ಯ ವಿರೋಧಿ, ದೇಶವಿರೋಧಿ ಸಂಘಟನೆಗಳನ್ನು ಬಹಿಷ್ಕರಿಸಬೇಕೆಂದು ಕರೆ ನೀಡುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.