ಇತ್ತೀಚಿನ ಸುದ್ದಿ
ಅಭಿವೃದ್ದಿಯಾಗದ ಬಣಕಲ್ ಗುಡ್ಡಟ್ಟಿ ರಸ್ತೆ: ಗ್ರಾಪಂ ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ
04/12/2021, 22:08
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೊಟ್ಟಿಗೆಹಾರ ಸಮೀಪದ ಬಣಕಲ್ ಗುಡ್ಡಟಿ ರಸ್ತೆ ಅಭಿವೃದ್ದಿಗೆ ಮುಂದಾಗದೇ ಇರುವುದನ್ನು ವಿರೋಧಿಸಿ ಬಣಕಲ್ ಗ್ರಾಪಂ ವ್ಯಾಪ್ತಿಯ ಕೆಲ ಗ್ರಾಮಗಳ ಗ್ರಾಮಸ್ಥರು ಶನಿವಾರ ಸಂಜೆ ಪ್ರತಿಭಟನೆ ನಡೆಸಿ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದರು.
ಕಳೆದ 2 ದಶಕಗಳಿಂದ ಬಣಕಲ್ ಗುಡ್ಡಟ್ಟಿ ರಸ್ತೆ ಅಭಿವೃದ್ದಿಯಾಗದ ಹಿನ್ನಲೆಯಲ್ಲಿ ಬಣಕಲ್ ಗ್ರಾಪಂ ವ್ಯಾಪ್ತಿಯ ಸುಭಾಷ ನಗರ, ಕುವೆಂಪು ನಗರ, ನರಿಗುಡ್ಡೆ, ಹೊರಟ್ಟಿ ಹಾಗೂ ಗುಡ್ಡಟ್ಟಿಯ ಗ್ರಾಮಸ್ಥರು ಕುವೆಂಪು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಬಿಜೆಪಿ ಮುಖಂಡರಾದ ಬಿ.ಎಂ ಭರತ್, ವಿಕ್ರಂ, ಅನುಕುಮಾರ್, ಗ್ರಾಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ ಮುಂತಾದವರು ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು.
2 ದಶಕಗಳಿಂದ ರಸ್ತೆ ಅಭಿವೃದ್ದಿಯಾಗಿಲ್ಲ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಹೊಂಡಗುಂಡಿಗಳಿಂದ ಕೂಡಿದೆ. ರಸ್ತೆ ಅಭಿವೃದ್ದಿ ಮಾಡುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳನ್ನು ಕೇಳಿದರೆ ಅನುದಾನ ಬಿಡುಗಡೆಯಾಗಿದ್ದು ಕೂಡಲೇ ರಸ್ತೆ ಕಾಮಗಾರಿ ಮಾಡಲಾಗುತ್ತದೆ ಎಂಬ ಭರವಸೆ ನೀಡುತ್ತಾರೆ. ಹಲವು ವರ್ಷ ಕಳೆದರೂ ಭರವಸೆ ಪೂರ್ಣಗೊಂಡಿಲ್ಲ. ಕಳೆದ ಚುನಾವಣೆ ಸಂದರ್ಭದಲ್ಲೂ ಕೂಡ ಗ್ರಾಪಂ ಚುನಾವಣೆಯಲ್ಲಿ ಭರವಸೆ ನೀಡಿ ಹೋದವರೂ ರಸ್ತೆ ಅಭಿವೃದ್ದಿಗೆ ಮುಂದಾಗಿಲ್ಲ. ಆದ್ದರಿಂದ ಈ ಬಾರಿ ಚುನಾವಣೆ ಬಹಿಷ್ಕಾರ ಮಾಡಲು ನಿರ್ಧರಿಸಿದ್ದೇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಬಣಕಲ್ ಹೋಬಳಿ ಬಿಜೆಪಿ ಅಧ್ಯಕ್ಷ ಅನುಕುಮಾರ್ ಮಾತನಾಡಿ, ರಸ್ತೆಗೆ ಅನುದಾನ ಬಿಡುಗಡೆಯಾಗಿದ್ದು ಮಳೆ, ಲಾಕ್‌ಡೌನ್ ಮತ್ತು ಚುನಾವಣೆ ನೀತಿ ಸಂಹಿತೆಯಿಂದಾಗಿ ರಸ್ತೆ ಅಭಿವೃದ್ದಿ ಪ್ರಾರಂಭಗೊಂಡಿಲ್ಲ. ನೀತಿ ಸಂಹಿತೆ ಮುಗಿದೊಡನೆ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಸ್ಥರು, ರಸ್ತೆ ಅಭಿವೃದ್ದಿ ಕಾಮಗಾರಿ ಪ್ರಾರಂಭವಾಗುವವರೆಗೂ ಚುನಾವಣೆ ಬಹಿಷ್ಕಾರವನ್ನು ಹಿಂತೆಗೆದುಕೊಳ್ಳುವುದಿಲ್ಲ. ರಸ್ತೆ ಅಭಿವೃದ್ದಿಯಾಗದೇ ಯಾವುದೇ ಕಾರಣಕ್ಕೂ ಮತದಾನ ಮಾಡುವುದಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ಮೂಡಿಗೆರೆ ಶಾಸಕರು ಬಣಕಲ್ ಗುಡ್ಡಟ್ಟಿ ರಸ್ತೆ ಅಭಿವೃದ್ದಿಗೆ 20 ಲಕ್ಷವನ್ನು ಮೀಸಲಿಟ್ಟಿದ್ದು ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಕಾಮಗಾರಿ ಪ್ರಾರಂಭವಾಗಲಿದೆ.
–ಸತೀಶ್ ಮತ್ತಿಕಟ್ಟೆ, ಅಧ್ಯಕ್ಷರು, ಗ್ರಾ.ಪಂ ಬಣಕಲ್