ಇತ್ತೀಚಿನ ಸುದ್ದಿ
ರೈತ ವಿರೋಧಿ ಸರ್ಕಾರ ತೊಲಗುವವರೆಗೂ ಹೋರಾಟ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
28/11/2025, 19:43
ಹಾವೇರಿ(reporterkarnataka.com): ಸಿಎಂ ಡಿಸಿಎಂ ತಾವು ಏನು ಮಾಡಿದರೂ ನಡೆಯುತ್ತದೆ ಎಂದು ತಿಳಿದುಕೊಂಡಿದ್ದಾರೆ. ರೈತರು,ಬಡವರು, ಕೂಲಿಕಾರರು ನಿಮ್ಮ ಆಟವನ್ನು ನೋಡುತ್ತಿದ್ದಾರೆ. ಇದಕ್ಕೆ ತಕ್ಕ ಪಾಠವನ್ನು ನಿಮಗೆ ಕಲಿಸುತ್ತಾರೆ. ರೈತ ವಿರೋಧಿ ಸರ್ಕಾರವನ್ನು ಕಿತ್ತೊಗೆಯುವವರೆಗೂ ಹೋರಾಟ ನಡೆಸುತ್ತೇವೆ.
ರೈತರನ್ನು ಎದುರು ಹಾಕಿಕೊಂಡರೆ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.



ಇಂದು ಹಾವೇರಿಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂಭಾಗದಲ್ಲಿ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ, ಭಾರತೀಯ ಜನತಾ ಪಕ್ಷದ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ, ಮಾತನಾಡಿದರು. ಸತ್ತಿರುವ ಸರ್ಕಾರವನ್ನು ಬಡಿದೆಬ್ಬಿಸಲು ನಾವೆಲ್ಲ ದೊಡ್ಡ ಪ್ರಮಾಣದಲ್ಲಿ ಸೇರಿದ್ದೇವೆ. ನಾವು ಹಗಲಿರುಳು ಕಷ್ಟ ಪಟ್ಟು ಬೆವರು ಸುರಿಸಿ ದುಡಿದಿರುವ ಕಬ್ಬು, ಮೆಕ್ಕೆಜೋಳ, ಸೋಯಾಬಿನ್ ಗೆ ಬೆಲೆ ಕುಸಿದಿದೆ. ನ್ಯಾಯಯುತ ಬೆಲೆ ಕೊಡಿ ಎಂದು ರೈತರು ಕೇಳುತ್ತಿದ್ದಾರೆ. ಅದಕ್ಕೆ ಇವರಿಗೆ ಸಮಯ ಇಲ್ಲ. ಸಿಎಂಗೆ ಪ್ರತಿ ದಿನ ಕುರ್ಚಿ ಕಾಯೋದೆ ಆಗಿದೆ. ರಾತ್ರಿಯಾದರೆ ಎಲ್ಲಿ ಡಿ.ಕೆ. ಶಿವಕುಮಾರ್ ಕಿತ್ತುಕೊಳ್ಳುತ್ತಾರೆ ಎಂದು ಕುರ್ಚಿ ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಸಿಎಂ ನಲವತ್ತು ವರ್ಷ ರಾಜಕಾರಣ ಮಾಡಿ, ಏಳು ವರ್ಷ ಸಿಎಂ ಆಗಿ ಕೆಲಸ ಮಾಡಿ ನಾನೇ ಸಿಎಂ ಎಂದು ಎದಿ ಬಡೆದುಕೊಳ್ಳುತ್ತಾರೆ. ಒಬ್ಬ ಮೇಧಾವಿ ರಾಜಕಾರಣಿ ಈ ರೀತಿ ಮಾತನಾಡುತ್ತಾರಾ, ನಿಜವಾಗಲೂ ನಿಮಗೆ ಸ್ವಾಭಿಮಾನ ಇದ್ದರೆ ನನ್ನನ್ನು ತೆಗೆದು ನೋಡಿ ಎಂದು ಸವಾಲು ಹಾಕಿ ಕುರ್ಚಿ ಎಲ್ಲೂ ಹೋಗುವುದಿಲ್ಲ. ನೀವು ರಾಹುಲ್ ಗಾಂಧಿ ಕೆಳಗೆ ಬಗ್ಗಬೇಕೆನ್ನುತ್ತೀರಿ ಅದಕ್ಕೆ ನಿಮ್ಮ ಕುರ್ಚಿ ಅಲ್ಲಾಡುತ್ತಿದೆ. ಸಿಎಂ ಅವರಿಗೆ ಪುರುಷೋತ್ತಿಲ್ಲ ಡಿಕೆಶಿಗೂ ಪುರುಸೊತ್ತಿಲ್ಲ. ಕೃಷಿ ಸಚಿವರು ಯಾರ ಕಡೆ ಹೋಗಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಅವರ ಕುರ್ಚಿ ಉಳಿಸಿಕೊಳ್ಳಲು ಯೋಚಿಸುತ್ತಿದ್ದಾರೆ. ರೈತರು ಬೆವರಿಗೆ ಬೆಲೆ ಕೇಳುತ್ತಿದ್ದಾರೆ ಕೊಡಲು ಸಿದ್ಧರಿಲ್ಲ ನಮ್ಮ ರಾಜ್ಯದ ರೈತರ ಸಂಖ್ಯೆ 67 ಲಕ್ಷ ಇದೆ. ನೀವು ಪರಿಹಾರ ಕೊಟ್ಟಿರುವುದು ಕೇವಲ 14 ಲಕ್ಷ ರೈತರಿಗೆ, ಇನ್ನೂ 43 ಲಕ್ಷ ರೈತರಿಗೆ ಪರಿಹಾರ ಕೊಟ್ಟಿಲ್ಲ. ಎಂದು ಆರೋಪಿಸಿದರು.
*ಮಾತಿಗೆ ತಪ್ಪಿದ ಸರ್ಕಾರ;*
ನಮ್ಮ ಜಿಲ್ಲೆಯಲ್ಲಿ ಹಿರೆಕೆರೂರು, ಶಿಗ್ಗಾವಿ, ಹಾನಗಲ್ ಬ್ಯಾಡಗಿಯಲ್ಲಿ ಗೋವಿನ ಜೋಳ ನಷ್ಟ ಆಗಿದೆ. ಸಮೀಕ್ಷೆ ಸರಿಯಾಗಿಲ್ಲ. ಈ ಬಗ್ಗೆ ನಾನು ಸಿಎಂಗೆ ಪತ್ರ ಬರೆದಿದ್ದೇನೆ. ಯಾವುದೇ ತಾಲೂಕಿನಲ್ಲಿ ಶೇ 10 ರಷ್ಟು ನಷ್ಟವಾಗಿಲ್ಲ ಎಂದು ಹೇಳಿದ್ದಾರೆ. ಅಧಿಕಾರಿಗಳು ಏರ್ ಕಂಡಿಷನ್ ಕಚೇರಿಯಲ್ಲಿ ಕುಳಿತು ಆಡಳಿತ ಮಾಡಬೇಡಿ, ರೈತರ ಹೊಲಕ್ಕೆ ಬಂದು ನೋಡಿ ಆಗ ಗೊತ್ತಾಗುತ್ತದೆ. ಸಮಸ್ಯೆ ಚರ್ಚೆ ಮಾಡಿದರೆ ಪರಿಹಾರ ಸಿಗುವುದಿಲ್ಲ. ಸಮಸ್ಯೆಯೊಂದಿಗೆ ಬದುಕುವವರ ಜೊತೆ ಚರ್ಚೆ ಮಾಡಿದಾಗ ಪರಿಹಾರ ಸಿಗುತ್ತದೆ. ಕಬ್ಬಿನ ಹೋರಾಟ ಅಗತ್ಯವಿರಲಿಲ್ಲ ನೀವು ಮಲಗಿದ್ದೀರಿ ಹೀಗಾಗಿ ಹೋರಾಟ ಅನಿವಾರ್ಯ ಆಯಿತು. ಇದರಿಂದ ಸಾಕಷ್ಟು ಕಬ್ಬು ಒಣಗಿ ಹೋಯಿತು. ಅದರ ನಷ್ಟ ಕೊಡುವವರು ಯಾರು ಎಂದು ಪ್ರಶ್ನಿಸಿದರು. ಈಗ ಮೆಕ್ಕೆಜೋಳ ಹೋರಾಟ ಆರಂಭವಾಗಿದೆ. ಸಿಎಂ ಖರೀದಿಸಲು ಆದೇಶ ಮಾಡುತ್ತೇನೆ ಎಂದು ಹೇಳಿದ್ದರು. ಇದುವರೆಗೂ ಖರೀದಿ ಕೇಂದ್ರ ತೆರೆದಿಲ್ಲ. ಮಾತಿಗೆ ತಪ್ಪಿದ ಸರ್ಕಾರ, ಬೆಂಬಲ ಬೆಲೆ ಹೆಚ್ಚಿಗೆ ಕೊಡುವಂತೆ ರೈತರು ಆಗ್ರಹಿಸಿದ್ದರು ಅದನ್ನೂ ನೀಡಿಲ್ಲ. ರೈತರ ಬೇಡಿಕೆ ಈಡೇರಿಸದಿದ್ದರೆ ರೈತರೊಂದಿಗೆ ಉಗ್ರ ಹೋರಾಟ ಮಾಡುತ್ತೇವೆ. ರೈತರನ್ನು ಎದುರು ಹಾಕಿಕೊಂಡರೆ ರಾಜ್ಯ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಹೇಳಿದರು.
ಒಂದು ಕಡೆ ರೈತ ವಿರೋಧಿ ಸರ್ಕಾರ ಇನ್ನೊಂದು ಕಡೆ ದಲಿತ ವಿರೋಧಿ ಸರ್ಕಾರ ಎಸ್ಸಿಪಿ ಟಿಎಸ್‌ಪಿ ಹಣವನ್ನು 44 ಸಾವಿರ ಕೋಟಿ ರೂ. ಹಣವನ್ನು ಗ್ಯಾರೆಂಟಿಗೆ ಬಳಕೆ ಮಾಡಿ ದಲಿತರಿಗೆ ಅನ್ಯಾಯ ಮಾಡಿದ್ದೀರಿ. ವಾಲ್ಮೀಕಿ ನಿಗಮದಲ್ಲಿ 80 ಕೋಟಿ ರೂ. ಲೂಟಿಯಾಯಿತು. ಎಲ್ಲ ನಿಗಮಗಳಲ್ಲಿಯೂ ಲೂಟಿ ನಡೆಯುತ್ತಿದೆ. ಇದು ರೈತ ವಿರೋಧಿ, ದಲಿತ ವಿರೋಧಿ, ಬಡವರ ವಿರೋಧಿ ಸರ್ಕಾರ, ಹಿಂದು ವರ್ಗಗಳ ನಿಗಮಗಳಿಗೆ ಬಿಡುಗಡೆ ಮಾಡಿದ್ದ 400 ಕೋಟಿ ರೂ. ಗಳನ್ನು ಜಾತಿಗಣತಿ ಹೆಸರಿನಲ್ಲಿ ವಾಪಸ್ ಪಡೆದಿದ್ದಾರೆ. ಇದರಿಂದ ಹಿಂದುಳಿದ ವರ್ಗಗಳಿಗೆ ಅನ್ಯಾಯ ಆಗಿದೆ. ಮತ್ತೆ ಸಿಎಂ ನಾನು ಹಿಂದುಳಿದ ವರ್ಗದ ನಾಯಕ ಎಂದು ಭಾಷಣ ಮಾಡುತ್ತಾರೆ. ಅಹಿಂದ ನಾಯಕ ಎನ್ನುತ್ತಾರೆ. ಬಜೆಟ್‌ನಲ್ಲಿ ಆಹಿಂದ ವರ್ಗಗಳಿಗೆ ಸೊನ್ನೆ ಬಜೆಟ್ ನಿಡಿದ್ದಾರೆ. ಇಷ್ಟು ದೊಡ್ಡ ಮಳೆ ಬಂದರೂ ಯಾವುದೇ ಸಚಿವರು ರೈತರ ಹೊಲಕ್ಕೆ ಬರಲಿಲ್ಲ. ಕಂದಾಯ ಸಚಿವರು ವೈಮಾನಿಕ ಸಮೀಕ್ಷೆ ಮಾಡಿದರು. ಉತ್ತರ ಕರ್ನಾಟಕ ಕರ್ನಾಟದಲ್ಲಿದೆಯೋ ಇಲ್ಲವೋ ಬರಿ ಬೆಂಗಳೂರಿನಲ್ಲಿ ಕುಳಿತು ಆದೇಶ ಮಾಡಿದರು ಎಂದು ವಾಗ್ದಾಳಿ ನಡೆಸಿದರು.
*ಎರಡು ಪಟ್ಟು ಪರಿಹಾರ:*
ನಾವು ಅಧಿಕಾರದಲ್ಲಿದ್ದಾಗ ಪ್ರವಾಹ ಬಂದಾಗ ಎರಡು ಪಟ್ಟು ಪರಿಹಾರ ನೀಡಿದೆವು. ಎನ್‌ಡಿಆರ್.ಎಫ್. ಪರಿಹಾರ 6300 ಇತ್ತು ಈಗ 8500 ಪರಿಹಾರ ಆಗಿದೆ. ನರೇಂದ್ರ ಮೋದಿ ಸರ್ಕಾರ ಮೂರು ಪಟ್ಟು ಪರಿಹಾರ ಹೆಚ್ಚಿಗೆ ಮಾಡಿದೆ. ಇಡೀ ದೇಶದ 50 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯನ್ನು ನಿರಂತರ ನೀಡುತ್ತ ಬಂದಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಪ್ರವಾಹ ಬಂದಾಗ 67 ಹೊಸ ಗ್ರಾಮಗಳನ್ನು ಮಾಡಿದರು. ಮನೆ ಕಳೆದುಕೊಂಡವರಿಗೆ 5 ಲಕ್ಷದ ಮನೆ ನೀಡಿದರು. 10 ಎಚ್‌ಪಿ ಉಚಿತ ವಿದ್ಯುತ್ ನೀಡಿದರು. ಕಿಸಾನ್ ಸಮ್ಮಾನ ಯೋಜನೆ ಅಡಿ ಕೇಂದ್ರ ಸರ್ಕಾರ 6000 ಕೊಟ್ಟರೆ ರಾಜ್ಯ ಸರ್ಕಾರ 4000 ಕೊಟ್ಟಿದ್ದೇವು. ಇವರು ಪೆಟ್ರೋಲ್, ಡಿಸೇಲ್ ಸೇರಿದಂತೆ ಎಲ್ಲದರ ತೆರೆಗೆ ಹೆಚ್ಚಳ ಮಾಡಿದ್ದಾರೆ. 1 ಲಕ್ಷ ಕೋಟಿ ಹೆಚ್ಚುವರಿ ತೆರಿಗೆ ವಸೂಲಿ ಮಾಡಿದ್ದಾರೆ. ರೈತರಿಂದಲೇ ವಸೂಲಿ ಮಾಡಿರುವ ಹಣವನ್ನು ರೈತರಿಗೆ ನೀಡುತ್ತಿಲ್ಲ. ನಮ್ಮ ಕಾಲದಲ್ಲಿ ಆವರ್ತ ನಿಧಿ 2 ಸಾವಿರ ಕೋಟಿ ಇಟ್ಟಿದ್ದೇವು. ಇವತ್ತು ಆವರ್ತ ನಿಧಿ ಖಾಲಿಯಾಗಿದೆ. ರಾಜ್ಯದಲ್ಲಿ 54 ಲಕ್ಷ ಮೆಟ್ರಿಕ್ ಟನ್ ಗೋವಿನ ಜೋಳ ಬೆಳೆದಿದೆ. ಗೋವಿನ ಜೋಳದಿಂದ ತಯಾರಾದ ವಸ್ತುವಿನಿಂದ 45 ಸಾವಿರ ಕೋಟಿ ರೂ ತೆರಿಗೆ ಸರ್ಕಾಕ್ಕೆ ಬರುತ್ತದೆ. ಅದರಲ್ಲಿ 5 ಸಾವಿರ ಕೋಟಿ ಕೊಡಬಹುದಿತ್ತು ಎಂದರು.
*ರೈತರ ಪರ ನಿರಂತರ ಹೋರಾಟ:*
ನಾನು ಸಿಎಂ ಆಗಿದ್ದಾಗ 8ನೇ ತರಗತಿಯಿಂದ ಪಿಜಿ ವರೆಗೂ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನೆ ನೀಡುತ್ತಿದ್ದೇವು. ಅದನ್ನು ನಿಲ್ಲಿಸಿದ್ದಾರೆ. ಡಿಸೇಲ್ ಸಬ್ಸಿಡಿ ನಿಲ್ಲಿಸಿದ್ದಾರೆ. ಬೀಜ, ಗೊಬ್ಬರಕ್ಕೆ ಸಹಾಯಧನ ನೀಡುತ್ತಿದ್ದೇವು, ಸಾವಯವ ಕೃಷಿಗೆ ಸಬ್ಸಿಡಿ ನೀಡುತ್ತಿದ್ದೇವು ಅದನ್ನು ನಿಲ್ಲಿಸಿದ್ದಾರೆ. ರೈತರು ಇವರಿಗೆ ಕಣ್ಣಿಗೆ ಕಾಣಿಸುತ್ತಿಲ್ಲ. ಸಿಎಂ ಡಿಸಿಎಂ ತಾವು ಏನು ಮಾಡಿದರೂ ನಡೆಯುತ್ತದೆ ಎಂದು ತಿಳಿದುಕೊಂಡಿದ್ದಾರೆ. ರೈತರು, ಬಡವರು, ಕೂಲಿಕಾರರು ನಿಮ್ಮ ಆಟವನ್ನು ನೋಡುತ್ತಿದ್ದಾರೆ. ಇದಕ್ಕೆ ತಕ್ಕ ಪಾಠವನ್ನು ನಿಮಗೆ ಕಲಿಸುತ್ತಾರೆ. ನಮ್ಮ ಬಿಜೆಪಿ ಯಾವಾಗಲೂ ರೈತರ ಪರವಾಗಿ ಇರುವ ಪಕ, ರೈತ ಸಂಘದ ಎಲ್ಲ ಹೋರಾಟಗಳಿಗೆ ಬೆಂಬಲ ಕೊಡುತ್ತೇವೆ. ರೈತ ಯಾವುದೇ ಪಕ್ಷಕ್ಕೆ ಸೇರಿಲ್ಲ. ಎಲ್ಲ ಪಕ್ಷಗಳು ರೈತರಿಗೆ ಸೇರಿವೆ. ಮತ್ತೊಮ್ಮೆ ರೈತರ ಪರ ಸರ್ಕಾರ ಬರಬೇಕೆಂದರೆ ರೈತ ವಿರೋಧಿ ಸರ್ಕಾರವನ್ನು ಕಿತ್ತೊಗೆಯಬೇಕು. ಹಳ್ಳಿ ಹಳ್ಳಿಗೆ ಈ ಹೋರಾಟ ತೆಗೆದುಕೊಂಡು ಹೋಗುತ್ತೇವೆ. ಮೆಕ್ಕೆಜೋಳ ಖರೀದಿ ಆರಂಭಿಸುವವರೆಗೂ ವಿಧಾನಮಂಡಲದ ಯಾವುದೇ ಕಲಾಪ ನಡೆಸಲು ಅವಕಾಶ ನೀಡಬಾರದು ಎಂದು ವಿರೋಧ ಪಕ್ಷದ ನಾಯಕರಿಗೆ ಹೇಳಿದ್ದೇನೆ. ಬೆಳಗಾವಿ ಅಧಿವೇಶನವನ್ನು ರೈತರಿಗೆ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ಪಾದಯಾತ್ರೆಯು ದೇವಗಿರಿ ಗ್ರಾಮದಿಂದ ಜಿಲ್ಲಾಡಳಿತ ಕಚೇರಿಯ ವರೆಗೆ ಸಾಗಿತು. ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ವೀರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರುಗಳಾದ ಶಿವರಾಜ ಸಜ್ಜನ, ಅರುಣಕುಮಾರ ಪೂಜಾರ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ್ ಸೇರಿದಂತೆ ಭಾರತೀಯ ಜನತಾ ಪಕ್ಷದ ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.













